ಸಾಗರ (ಶಿವಮೊಗ್ಗ): ಇಲ್ಲಿನ ಇಂದಿರಾಗಾಂಧಿ ಸರ್ಕಾರಿ ಪದವಿ ಕಾಲೇಜಿನಲ್ಲಿ (Indira Gandhi govt degree College) ಏರ್ಪಡಿಸಿದ್ದ ಆಹಾರ ಮೇಳದಲ್ಲಿ (Food Fest) ಮಾಂಸಾಹಾರಕ್ಕೆ ಅವಕಾಶ (No permission for Nonveg) ನೀಡದೆ ಇರುವುದರ ವಿರುದ್ಧ ವಿದ್ಯಾರ್ಥಿನಿಯೊಬ್ಬಳು (College Student) ಧ್ವನಿ ಎತ್ತಿರುವುದು ಭಾರಿ ಸುದ್ದಿ ಮಾಡಿದೆ. ಮಾಂಸಾಹಾರ ಸಿದ್ಧಪಡಿಸಿಕೊಂಡು ಬಂದಿದ್ದ ವಿದ್ಯಾರ್ಥಿನಿಯರಿಗೆ ಮೇಳದಲ್ಲಿ ಭಾಗವಹಿಸಲು ಅವಕಾಶ ಇಲ್ಲ ಎಂದು ತಿಳಿದ ವಿದ್ಯಾರ್ಥಿನಿ ಉಪನ್ಯಾಸಕರ (Talkwar with lecturers) ಜತೆ ವಾಗ್ವಾದ ನಡೆಸಿದ ಘಟನೆ ಸೋಮವಾರ ನಡೆದಿದೆ.
ಇಲ್ಲಿನ ಇಂದಿರಾಗಾಂಧಿ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ಕಲಾ ವಿಭಾಗದಲ್ಲಿ ಆಹಾರ ಮೇಳ ಆಯೋಜಿಸಲಾಗಿತ್ತು. ಇಬ್ಬರು ವಿದ್ಯಾರ್ಥಿನಿಯರು ಮಲೆನಾಡಿನ ಸಾಂಪ್ರದಾಯಿಕ ಮಾಂಸಾಹಾರವಾದ ಕೋಳಿ ಕಜ್ಜಾಯ, ರೊಟ್ಟಿ ಸೇರಿದಂತೆ ಕೆಲವು ತಿನಿಸುಗಳನ್ನು ತಂದಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಲವು ಉಪನ್ಯಾಸಕರು, ಮೇಳದಲ್ಲಿ ಮಾಂಸಾಹಾರಕ್ಕೆ ಅವಕಾಶವಿಲ್ಲ ಎಂದು ಹೇಳಿ ತಿನಿಸುಗಳ ಪ್ರದರ್ಶನಕ್ಕೆ ನಿರ್ಬಂಧ ಹೇರಿದ್ದಾರೆ. ಇದು ವಾಗ್ವಾದಕ್ಕೆ ದಾರಿಯಾಗಿದೆ.
ಆಹಾರ ಮೇಳದ ನಿಯಮಗಳ ಬಗ್ಗೆ ಮೊದಲೇ ಸೂಚಿಸಲಾಗಿತ್ತು. ಆದರೂ ಮಾಂಸಾಹಾರ ತಂದಿರುವುದು ನಿಯಮದ ಉಲ್ಲಂಘನೆ ಎಂದು ಉಪನ್ಯಾಸಕರು ಹೇಳಿದರೆ, ಆಗ ವಿದ್ಯಾರ್ಥಿನಿಯರು ಆಹಾರ ಮೇಳದಲ್ಲಿ ಮಾಂಸಾಹಾರಕ್ಕೆ ನಿರ್ಬಂಧ ಹೇರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಕಳೆದ ಬಾರಿಯ ಫುಡ್ ಫೆಸ್ಟ್‌ನಲ್ಲಿ ಮಾಂಸಾಹಾರಕ್ಕೆ ಅವಕಾಶ ಇತ್ತು. ಆ ಕಾರಣಕ್ಕಾಗಿ ಈ ಬಾರಿಯೂ ತಯಾರಿಸಿಕೊಂಡು ಬಂದಿದ್ದೇವೆ. ಹಣ ಕೊಟ್ಟು ಆಹಾರ ತಯಾರಿಸಿಕೊಂಡು ಬಂದಿದ್ದೇನೆ. ಇದನ್ನು ಏನು ಮಾಡುವುದು ಎಂದು ಆ ವಿದ್ಯಾರ್ಥಿನಿ ಪ್ರಶ್ನಿಸಿದ್ದಾಳೆ.
ಆದರೆ, ಉಪನ್ಯಾಸಕರು ಫುಡ್ ಫೆಸ್ಟ್‌ಗೆ ಸಂಬಂಧಿಸಿ ಸಭೆಯೊಂದನ್ನು ನಡೆಸಲಾಗಿತ್ತು. ಅದರಲ್ಲಿ ಮಾಂಸಾಹಾರಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿತ್ತು. ಆಕ್ಷೇಪಗಳಿದ್ದರೆ, ಗೊಂದಲಗಳಿದ್ದರೆ ಆಗಲೇ ಪರಿಹರಿಸಿಕೊಳ್ಳಬೇಕಿತ್ತು. ಅದು ಬಿಟ್ಟು ಈಗ ಒಮ್ಮಿಂದೊಮ್ಮೆಗೆ ಮಾಂಸಾಹಾರ ತಂದಿಟ್ಟರೆ ಯಾರ ತಪ್ಪು ಎಂದು ಉಪನ್ಯಾಸಕರು ಪ್ರಶ್ನಿಸಿದ್ದಾರೆ. ಜತೆಗೆ ನಾವು ಹೇಳಿದ್ದನ್ನು ಕೇಳಬೇಕು ಎಂದು ತಾಕೀತು ಮಾಡಿದ್ದಾರೆ.
ವಿದ್ಯಾರ್ಥಿನಿ ವಾಗ್ವಾದದ ವೇಳೆ ಆಹಾರದ ಹಕ್ಕಿನ ಬಗ್ಗೆಯೂ ಮಾತನಾಡಿದ್ದಾಳೆ. ಶೇಕಡಾ 90ರಷ್ಟು ಮಂದಿ ಮಾಂಸಾಹಾರ ತಿನ್ನುತ್ತಾರೆ. ನೀವು ಕೇವಲ 10 ಶೇಕಡಾ ಮಂದಿ ಮಾಂಸಾಹಾರ ಸೇವಿಸದವರು ಫುಡ್ ಫೆಸ್ಟ್‌ನಲ್ಲಿ ಮಾಂಸಾಹಾರ ಬೇಡ ಎಂದರೆ ಎಷ್ಟು ಸರಿ ಎಂದು ಕೇಳಿದ್ದಾಳೆ. ಆಗ ಉಪನ್ಯಾಸಕರಲ್ಲಿ ಕೆಲವರು ನಾವು ಕೂಡಾ ಮಾಂಸಾಹಾರಿಗಳೇ. ಆದರೆ, ಪ್ರತಿಯೊಂದು ವಿಚಾರಕ್ಕೂ ಒಂದೊಂದು ನಿಯಮ ಎಂದಿರುತ್ತದೆ. ಇಲ್ಲಿ ಮಾಂಸಾಹಾರ ಬೇಡ ಎಂದು ತೀರ್ಮಾನಿಸಲಾಗಿತ್ತು. ಹಾಗಾಗಿ ಅವಕಾಶ ನಿರಾಕರಣೆ ಮಾಡಲಾಗಿದೆ ಎಂದು ವಿವರಿಸಿದರು.
ಅಂತಿಮವಾಗಿ ವಿದ್ಯಾರ್ಥಿನಿಯರು ಹಣ ಕೊಟ್ಟು ಆಹಾರ ತಂದಿರುವ ಹಿನ್ನೆಲೆಯಲ್ಲಿ ಮೇಳದಲ್ಲಿ ಮಾಂಸಾಹಾರಕ್ಕೆ ಅವಕಾಶ ನೀಡಲಾಯಿತು. ಈ ನಡುವೆ. ವಿದ್ಯಾರ್ಥಿನಿಯರು ಹಾಗೂ ಉಪನ್ಯಾಸಕರ ನಡುವೆ ನಡೆದ ವಾಗ್ವಾದದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.