ಸೊರಬ: ಗುರು ಪರಂಪರೆ ಹಾಗೂ ಧಾರ್ಮಿಕ ಕಾರ್ಯಗಳು ಪ್ರತಿಯೊಬ್ಬರ ಜೀವನದಲ್ಲಿ ಸನ್ಮಾರ್ಗ ತೋರಿಸುವ ದೀವಿಗೆಯಾಗಿವೆ ಎಂದು ಜಡೆ ಸಂಸ್ಥಾನ ಮಠ, ಸೊರಬ ಮುರುಘಾ ಮಠದ ಡಾ.ಮಹಾಂತ ಸ್ವಾಮೀಜಿ ಹೇಳಿದರು. ಪಟ್ಟಣದ ಮುರುಘಾ ಮಠದಲ್ಲಿ ಮಂಗಳವಾರ 198ನೇ ಶಿವಾನುಭವ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವೀರಶೈವ ಸಮಾಜದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮನುಷ್ಯನ ಮನಸ್ಸು ಚಂಚಲವಾಗಿದ್ದು, ವಿಕಾರತೆಯಿಂದ ಸಂಸ್ಕಾರದ ಕಡೆ ನಡೆಯಲು ಬದುಕಿನಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ಮಾರ್ಗದರ್ಶನ ತೋರುವ ಗುರುಗಳು ಮುಖ್ಯವಾಗುತ್ತಾರೆ. ಭೂಮಿಯಲ್ಲಿ ಬಿತ್ತಿದ ಬೀಜದಿಂದ ಉತ್ತಮ ಬೆಳೆ ನಿರೀಕ್ಷಿಸುವ ನಾವುಗಳು ಮಕ್ಕಳ ವಿದ್ಯಾಭ್ಯಾಸದ ಸಂದರ್ಭದಲ್ಲಿ ಪೋಷಕರು ಅವರ ಆಸಕ್ತಿಗೆ ತಕ್ಕಂತೆ ಪ್ರೋತ್ಸಾಹದ ಜತೆಗೆ ಉತ್ತಮ ಸಂಸ್ಕಾರವನ್ನು ನೀಡಿದಾಗ ಉಜ್ವಲವಾದ ಬದುಕು ರೂಪಿಸಿಕೊಳ್ಳಲು ನೆರವಾಗಬಲ್ಲದು ಎಂದು ತಿಳಿಸಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ತಾಲ್ಲೂಕು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಬಸವರಾಜ್ ಭಾರಂಗಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ವೀರಶೈವ ಲಿಂಗಾಯತ ಸಮಾಜ ಮಹಿಳಾ ಘಟಕದ ಅಧ್ಯಕ್ಷೆ ಮಮತಾ ವೈಭವ್, ಉಪಾಧ್ಯಕ್ಷ ರವಿಶಂಕರಗೌಡ, ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಪಾಣಿ ರಾಜಪ್ಪ, ಈರೇಶಗೌಡ, ಗುತ್ತಿಚನ್ನಬಸಪ್ಪ, ಅಶೋಕ್, ಡಿ.ಶಿವಯೋಗಿ, ನಾಗರಾಜ್ ಗುತ್ತಿ, ಲೋಲಾಕ್ಷಮ್ಮ, ಅಕ್ಕನ ಬಳಗದ ಅಧ್ಯಕ್ಷೆ ರೇಣುಕಮ್ಮಗೌಳಿ, ಚಂದ್ರಶೇಖರ ನಿಜಗುಣ, ರಾಜಶೇಖರಗೌಡ ತ್ಯಾವಗೋಡು, ರಾಜಶೇಖರ ಹೊಸಬಾಳೆ ಇತರರಿದ್ದರು.
ಇದನ್ನೂ ಓದಿ: ಅವನಿ ಶೃಂಗೇರಿ ಶಂಕರಾಚಾರ್ಯ ಮಠದ ನೂತನ ಪೀಠಾಧೀಪತಿಗಳ ಪಟ್ಟಾಭಿಷೇಕ