ಶಿವಮೊಗ್ಗ: ಬಿಜೆಪಿ ಸರ್ಕಾರ ಬಂದ ಮೇಲೆ ಸಾಕಷ್ಟು ಸಾವು ನೋವಾಗಿದೆ. ರಾಜಕೀಯವನ್ನು ಧರ್ಮದ ಜತೆ ಬೆರೆಸಿದಾಗಲೆಲ್ಲ ಈ ರೀತಿ ಘಟನೆ ನಡೆದಿವೆ. ಈಶ್ವರಪ್ಪ ಶಾಸಕರಾದ ದಿನದಿಂದಲೂ ಇದನ್ನೇ ಮಾಡಿಕೊಂಡು ಬಂದಿದ್ದಾರೆ. ಅಭಿವೃದ್ಧಿಯಲ್ಲಿ ಅವರ ಕೊಡುಗೆ ಏನೂ ಇಲ್ಲ. ಶಿವಮೊಗ್ಗದ ಈ ಸ್ಥಿತಿಗೆ ಈಶ್ವರಪ್ಪನವರೇ ನೇರ ಕಾರಣ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಸುಂದರೇಶ್ ವಾಗ್ದಾಳಿ ನಡೆಸಿದ್ದಾರೆ.
ಕೋಮುಗಲಭೆಗೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಕಾರಣ ಎಂಬ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಸುದ್ದಿಗೋಷ್ಠಿಯಲ್ಲಿ ಬುಧವಾರ ಪ್ರತಿಕ್ರಿಯಿಸಿ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡೋ ರೀತಿ ಅವರಿಗೆ ಶೋಭೆ ತರಲ್ಲ. 60ಕ್ಕೆ ಅರಳೋ ಮರುಳೋ ಎನ್ನುವ ಹಾಗೆ ಅವರ ಸ್ಥಿತಿಯಿದೆ. ತಮ್ಮ ಹೇಳಿಕೆಗಳಿಂದಲೇ ಪ್ರಚೋದನೆ ಮಾಡುವ ಕೆಲಸ ಮಾಡುತ್ತಾರೆ. ಬಡವರ ಮಕ್ಕಳು ಬೀದಿಯಲ್ಲಿ ಹೆಣವಾಗುತ್ತಿದ್ದಾರೆ. ಇವರ ರಾಜಕೀಯ ದಾಹಕ್ಕೆ ಇನ್ನೂ ಎಷ್ಟು ಹೆಣ ಬೀಳಬೇಕು ಅರ್ಥವಾಗುತ್ತಿಲ್ಲ. ಈಶ್ವರಪ್ಪ ನಾಲಗೆ ಬಿಗಿ ಹಿಡಿದು ಮಾತನಾಡಬೇಕು ಎಂದು ಎಚ್ಚರಿಸಿದರು.
ಇದನ್ನೂ ಓದಿ | Corruption | ಖಾಲಿ ಪೇಪರ್ ಇದ್ರೂ ಡಿವೈಎಸ್ಪಿ ಪೋಸ್ಟ್; ಎಂಟಿಬಿ ಬಳಿಕ ಈಗ ಚಿಂಚನಸೂರು ಹೇಳಿಕೆ, ಸರ್ಕಾರಕ್ಕೆ ಮುಜುಗರ!
ಚುನಾವಣಾ ಬಂದಾಗ ಧರ್ಮ, ಜಾತಿ ವಿಚಾರದಲ್ಲಿ ಬಿಜೆಪಿಯವರು ಪ್ರಚೋದನೆ ಮಾಡುತ್ತಾರೆ. ಯುವಕರಿಗೆ ಇತಿಹಾಸ ಗೊತ್ತಿಲ್ಲ, ಇತಿಹಾಸ ತಿರುಚಿ ಅವರನ್ನು ದಾರಿ ತಪ್ಪಿಸುತ್ತಿದ್ದಾರೆ. ಭ್ರಷ್ಟಾಚಾರದಿಂದಲೇ ಇವರ ಸರ್ಕಾರ ಕೊಳೆತು ನಾರುತ್ತಿದೆ. ಇಂತಹ ಸಂದರ್ಭದಲ್ಲಿ ಇವರು ಇಲ್ಲಿ ವೇದಾಂತ ಹೇಳುತ್ತಾರೆ. ಗಲಾಟೆ ನಿಯಂತ್ರಿಸಬೇಕಾಗಿರುವುದು ಇವರದ್ದೇ ಸರ್ಕಾರ ಅಲ್ಲವೇ? ಕಾಂಗ್ರೆಸ್ ಅಥವಾ ಯಾರೇ ತಪ್ಪು ಮಾಡಿದರೂ ಒಳಗೆ ಹಾಕಿ, ಯಾರೇ ಗಲಾಟೆ ಮಾಡಿದರೂ ತನಿಖೆ ಮಾಡಿ ಶಿಕ್ಷೆ ಕೊಡಿ, ಆದರೆ, ನಾಟಕ ಮಾಡಿ ಕಾಲ ಕಳೆಯಬೇಡಿ ಎಂದು ಕಿಡಿ ಕಾರಿದರು.
ಮೂರು- ನಾಲ್ಕು ತಿಂಗಳಿಗೊಮ್ಮೆ ಶಿವಮೊಗ್ಗದಲ್ಲಿ 144 ಸೆಕ್ಷನ್ ಹಾಕಲೇಬೇಕು. ಇದರಿಂದ ಅವರಿಗೇನು ಬರುತ್ತೋ ಏನೋ ಗೊತ್ತಾಗುತ್ತಿಲ್ಲ. ಬಿಜೆಪಿ ಸರ್ಕಾರಕ್ಕೂ ಬ್ರಿಟಿಷ್ ಸರ್ಕಾರಕ್ಕೂ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ. ಅಂದು ಬ್ರಿಟಿಷರು ಲೂಟಿ ಮಾಡಿದರು. ಇವತ್ತು ಕೆಲವೇ ವ್ಯಕ್ತಿಗಳು ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡರನ್ನು ಟೀಕಿಸಿದರು.
ಸಾವರ್ಕರ್ ಮೊಮ್ಮಗನನ್ನು ಕರೆದುಕೊಂಡು ಬಂದು ಮೆರವಣಿಗೆ ಮಾಡುತ್ತಾರೆ. ಸಾವರ್ಕರ್ ಸ್ವಾತಂತ್ರ್ಯ ಹೋರಾಟ ಮಾಡಿಲ್ಲ. ಬ್ರಿಟಿಷ್ ಅಧಿಕಾರಿಯ ಕೊಲೆಗೆ ಆಯುಧ ಪೂರೈಸಿದ್ದಕ್ಕೆ ಅವರನ್ನು ಬಂಧಿಸಲಾಗಿತ್ತು. ಇಂತಹವರ ಮೊಮ್ಮಗನನ್ನು ಕರೆದುಕೊಂಡು ಬಂದು ಶಿವಮೊಗ್ಗ ಜನರ ತಲೆಯನ್ನು ಮೆದುಳನ್ನು ಹಾಳು ಮಾಡುತ್ತಾರೆ. ದೇಶದ ಬಗ್ಗೆ ಕಾಳಜಿ, ಭಕ್ತಿ ಇದ್ದರೇ ಈಸೂರಿಗೆ ಹೋಗಲಿ. ದೇಶಕ್ಕಾಗಿ ಹೋರಾಡಿದವರ ಹೆಂಡತಿ, ಮಕ್ಕಳು ಇದ್ದಾರೆ. ಅವರನ್ನು ಕರೆದುಕೊಂಡು ಬಂದು ಹೇಳಲಿ ಎಂದು ಹೇಳಿದರು.
ಎಐಸಿಸಿ ಅಧ್ಯಕ್ಷರಾದ ಮೇಲೆ ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕಕ್ಕೆ ಬರುತ್ತಿರುವ ಸಂದರ್ಭದಲ್ಲಿ ಅವರಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸನ್ಮಾನ ಕಾರ್ಯಕ್ರಮ ಇದೆ ಎಂದರು. ಶಿವಮೊಗ್ಗ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಮುಖಂಡರು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ಜಿಲ್ಲಾ ಉಸ್ತುವಾರಿ ಸಯದ್ ಅಹಮದ್, ಚಂದ್ರಭೂಪಾಳ ಸಿ.ಎಸ್, ಮಹಾನಗರ ಪಾಲಿಕೆ ವಿ. ಪ.ನಾಯಕಿ ರೇಖಾ ರಂಗನಾಥ್, ಮುಜಮ್ಮಿಲ್ ಪಾಷಾ, ಎನ್.ಡಿ.ಪ್ರವೀಣ್ ಕುಮಾರ್ ಇನ್ನಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ | Praveen Nettaru | ಪ್ರವೀಣ್ ನೆಟ್ಟಾರು ಹೊಸ ಮನೆಗೆ ಶಂಕುಸ್ಥಾಪನೆ ಮಾಡಿದ ನಳಿನ್, ವೆಚ್ಚವೆಷ್ಟು? ಎಷ್ಟು ದೊಡ್ಡ ಮನೆ?