ಶಿವಮೊಗ್ಗ: ಶಿವಮೊಗ್ಗದಲ್ಲಿ ಡ್ರಗ್ ಮಾಫಿಯಾ ಮತ್ತು ಮೂಲಭೂತ ವಾದದ ಹಿನ್ನಲೆಯಲ್ಲಿ ಹಿಂದೂ ಕಾರ್ಯಕರ್ತರು ಹಾಗೂ ಸಾಮಾನ್ಯ ಜನರ ಮೇಲೆ ಹಲ್ಲೆ ಗಲಾಟೆ ನಡೆಯುತ್ತಿದೆ ಎಂದು ಬಿಜೆಪಿ ಜಿಲ್ಲಾ ಯುವಮೋರ್ಛಾ ಅಧ್ಯಕ್ಷ ಹರಿಕೃಷ್ಣ ಹೇಳಿದರು.
ಹಿಂದೂ ಕಾರ್ಯಕರ್ತ ಹರ್ಷ ಕೊಲೆಯಿಂದ ಆರಂಭಗೊಂಡು ಸೂಳೆಬೈಲಿನ ಘಟನೆವರೆಗೆ ಶಿವಮೊಗ್ಗದಲ್ಲಿ ಈ ಮಾದರಿಯ 7-8 ಅಹಿತಕರ ಘಟನೆ ನಡೆದಿರುವುದು ಕಂಡುಬಂದಿದೆ. ಅಮೀರ್ ಅಹ್ಮದ್ ಕಾಲೋನಿ, ಮಿಳಘಟ್ಟ, ಮೊದಲಾದ ಭಾಗಗಳಲ್ಲಿ ಪುಂಡರು ವಿನಾಕಾರಣ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುತ್ತಿದಾರೆ. ಅಲ್ಲದೆ, ಸಾಮಾನ್ಯ ಜನರ ಮೇಲೂ ಹಲ್ಲೆ ನಡೆಸುತ್ತಿದ್ದಾರೆ ಎಂದು ಶಿವಮೊಗ್ಗ ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ಗಲಭೆಗಳ ಹಿನ್ನೆಲೆಯಲ್ಲಿ ಮಾತನಾಡಿ, ʼʼಇಸ್ಲಾಂನ ನ್ಯೂನತೆಯ ಕೆಲವು ವಿಷಯಗಳು ಮಾಧ್ಯಮಗಳಲ್ಲಿ ಚರ್ಚೆಗೆ ಬಂದಾಗ ಹುಳುಕನ್ನ ಎತ್ತಿ ಹಿಡಿದ ಕಾರಣದಿಂದ ಈ ರೀತಿಯ ದಾಳಿಗಳು ಹೆಚ್ಚಾಗುತ್ತಿವೆ. ಇದರಿಂದ ಸಾರ್ವಜನಿಕರು ನೋವು ಅನುಭವಿಸುತ್ತಿದ್ದಾರೆ. ಪೊಲೀಸ್ ಇಲಾಖೆ ಇದನ್ನು ಅತ್ಯಂತ ಸೂಕ್ಷ್ಮವಾಗಿ ಪರಿಗಣಿಸಬೇಕು. ಸೂಳೆಬೈಲಿನ ಘಟನೆ ಅತ್ಯಂತ ಅಮಾನವೀಯ ಘಟನೆಯಾಗಿದೆʼʼ ಎಂದರು. ಇದೇ ವೇಳೆ ಸೂಳೆಬೈಲಿನಲ್ಲಿ ಬಂಧಿತ ಆರೋಪಿಗಳನ್ನು ಮಾದಕ ದ್ರವ್ಯ ಸೇವನೆಯ ಪರೀಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಮುಸ್ಲಿಂ ಪ್ರದೇಶಗಳಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿದ್ದು, ಈ ಏಳೆಂಟು ಘಟನೆಗಳನ್ನು ಎಚ್ಚರಿಕೆಯಿಂದ ಪರಿಗಣಿಸಬೇಕು ಎಂದು ಪೊಲೀಸರಿಗೆ ಒತ್ತಾಯಿಸಿದರು. ಅಲ್ಲದೆ, ಮುಸ್ಲಿಮರು ಅಕ್ರಮವಾಗಿ ಮನೆಗಳನ್ನ ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಪಾಲಿಕೆ ಮತ್ತು ಕಂದಾಯ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಯುವಮೋರ್ಛಾ ಉಪಾಧ್ಯಕ್ಷರಾದ ಗಣೇಶ್ ಬಿಳಕಿ, ಸುಹಾಸ್ ಶಾಸ್ತ್ರಿ, ನಗರ ಅಧ್ಯಕ್ಷ ದರ್ಶನ್ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ಹರ್ಷನ ಕೊಲೆಯ ಆರೋಪಿಗಳಿಂದ ಜೈಲಿನಲ್ಲಿ ಪುಂಡಾಟ