ಸಾಗರ: ತಾಲೂಕಿನ ಮಡಸೂರು ಗ್ರಾಮದ ಸರ್ಕಾರಿ ಜಮೀನಿನಲ್ಲಿ ಒತ್ತುವರಿ ತೆರವು ಮಾಡಲು ತೆರಳಿದ್ದ ತಹಶೀಲ್ದಾರ್, ಅರಣ್ಯ ಇಲಾಖೆ ಅಧಿಕಾರಿಗಳ ಕೊಲೆಗೆ ರೈತರು ಯತ್ನಿಸಿದ್ದಾರೆ (Hartalu Halappa ) ಎಂದು ಸುಳ್ಳು ಪ್ರಕರಣ ದಾಖಲಿಸಿ, 7 ಜನ ರೈತರನ್ನು ಜೈಲಿಗೆ ಹಾಕಿದ್ದಾರೆ ಎಂದು ಮಾಜಿ ಸಚಿವ ಹೆಚ್.ಹಾಲಪ್ಪ ಆರೋಪಿಸಿದ್ದಾರೆ.
ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಳ್ಳಿಗಳಲ್ಲಿ ಕೃಷಿ ಚಟುವಟಿಕೆ ನೆಡೆಸಲು ರೈತರು ಕೃಷಿ ಸಲಕರಣೆಗಳನ್ನು ಹಿಡಿದುಕೊಂಡು ಓಡಾಡುವುದು ಸರ್ವೇ ಸಾಮಾನ್ಯ. ಆದರೆ ಸ್ಥಳೀಯರ ನಡುವೆ ನಡೆದ ವಾಗ್ವಾದಕ್ಕೆ ರಾಜಕೀಯ ಬಣ್ಣ ಕಲ್ಪಿಸಲಾಗಿದೆ. ಹಾಗೂ ಅಧಿಕಾರಿಗಳಿಗೆ ಜೀವ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ರೈತರ ಮೇಲೆ ಕೊಲೆ ಯತ್ನದಂತಹ ಗಂಭೀರ ಪ್ರಕರಣವನ್ನು ತಹಶೀಲ್ದಾರರು ದಾಖಲಿಸಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರ ಹಾಗೂ ನೂತನ ಶಾಸಕರು ಆಯ್ಕೆಯಾದ ದಿನದಿಂದ ಸಾಗರ-ಹೊಸನಗರ ತಾಲೂಕಿನಲ್ಲಿ ಜನರು ಭಯದಿಂದ ಬದುಕುವ ವಾತಾವರಣ ಸೃಷ್ಟಿಯಾಗಿದೆ. ರೈತ ಹೋರಾಟಗಾರರ ಭೀಷ್ಮ ಎಂದು ಹೇಳುತ್ತಿದ್ದ ಕಾಗೋಡು ತಿಮ್ಮಪ್ಪ ಅವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರೈತರ ರಕ್ಷಣೆಗೆ ಧಾವಿಸುವ ಬದಲು, ರೈತರ ಮೇಲೆ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟವರಿಗೆ ಸೂಚಿಸಿದ್ದಾರೆ ಎಂದು ಕಿಡಿಕಾರಿದರು.
ಇದನ್ನೂ ಓದಿ: Shivamogga News: ಮಾಜಿ ಶಾಸಕ ಹರತಾಳು ಹಾಲಪ್ಪ ದರ್ಪದ ನಡವಳಿಕೆ ತಿದ್ದಿಕೊಳ್ಳಲಿ: ಸೋಮಶೇಖರ ಲ್ಯಾವಿಗೆರೆ
ತಾಲೂಕಿನಲ್ಲಿ ಸೇಡಿನ ರಾಜಕಾರಣ ಹಾಗೂ ತುಘಲಕ್ ದರ್ಬಾರ್ ನೆಡೆಯುತ್ತಿದೆ. ಇದು ಮುಂದೆ ಯಾವ ಹಂತಕ್ಕೆ ಹೋಗುತ್ತದೆಯೋ ತಿಳಿಯದು ಎಂದು ಆತಂಕ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ದೇವೇಂದ್ರಪ್ಪ ಯಲಕುಂದ್ಲಿ, ವಿನಾಯಕ್ ರಾವ್, ಕೊಟ್ರಪ್ಪ, ಬಿ.ಟಿ ರವೀಂದ್ರ ಮತ್ತಿತರರು ಉಪಸ್ಥಿತರಿದ್ದರು.