ಶಿವಮೊಗ್ಗ: ಮೋಸ ಹೋಗುವವರು ಇರುವ ತನಕ ಮೋಸ ಮಾಡುವವರು ಇದ್ದೆ ಇರುತ್ತಾರೆ. ಅದರಲ್ಲೂ ಸರ್ಕಾರಿ ಕೆಲಸ ಸಿಗಲಿದೆ ಎಂದರೆ ಆಕಾಂಕ್ಷಿಗಳು ಲಕ್ಷ ಲಕ್ಷ ಕೊಟ್ಟದರೂ ಕೆಲಸ ಗಿಟ್ಟಿಸಿಕೊಳ್ಳಲು ನೋಡುತ್ತಾರೆ. ಸದ್ಯ ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ (JOB Fraud case) ರೈಲು ಬಿಟ್ಟು ಲಕ್ಷ ಲಕ್ಷ ಎಣಿಸಿ ವಂಚಕರು ಬೆದರಿಕೆ (Blackmail Case) ಹಾಕುತ್ತಿದ್ದಾರೆ. ರಿಪ್ಪನಪೇಟೆಯ ಶ್ವೇತಾ ರಿಶಾಂತ್, ವಿಜಯಪುರದ ಪ್ರಶಾಂತ್ ದೇಶಪಾಂಡೆ ಎಂಬುವವರು ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಲಕ್ಷಾಂತರ ರೂ. ವಂಚನೆ ಮಾಡಿರುವವರು.
ತೀರ್ಥಹಳ್ಳಿಯ ಅರ್ಜುನ್ ಟಿ.ಪಿ. ಎಂಬುವವರಿಂದ ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ಪೇಟೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮೂವರಿಗೆ ವಂಚನೆ ಮಾಡಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೂರುದಾರ ಅರ್ಜುನ್‌ಗೆ 4.02 ಲಕ್ಷ ರೂ., ಕೊಪ್ಪ ತಾಲೂಕಿನ ಆದರ್ಶ್‌ಗೆ 6.50 ಲಕ್ಷ ರೂ. ಹಾಗೂ ಶಿವಮೊಗ್ಗದ ನವೀನ್ 3,42,500 ರೂ. ಹಣ ಪಡೆದು ವಂಚನೆ ಮಾಡಿದ್ದಾರೆ. ಈ ಸಂಬಂಧ ಐಪಿಸಿ ಸೆಕ್ಷನ್ 406, 420, 506 ರ ಅಡಿಯಲ್ಲಿ ರಿಪ್ಪನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೈಲ್ವೆ ಇಲಾಖೆಯಲ್ಲಿ ಎಚ್‌ಆರ್ ಕೆಲಸ
ದೂರುದಾರ ಅರ್ಜುನ್ ಅವರ ಪತ್ನಿ ಚೈತ್ರಗೆ ಪದವಿ ವಿದ್ಯಾರ್ಹತೆಯ ಮೇರೆಗೆ ರೈಲ್ವೆ ಇಲಾಖೆಯಲ್ಲಿ ಎಚ್‌ಆರ್ ಕೆಲಸವನ್ನು ಕೊಡಿಸುವುದಾಗಿ ವಂಚಕಿ ಶ್ವೇತಾ ನಂಬಿಸಿದ್ದಾಳೆ. ಇದಕ್ಕಾಗಿ ಮೊದಲ ಹಂತವಾಗಿ ಫೋನ್ ಪೇ ಮೂಲಕ 19,600 ರೂ. ಹಣವನ್ನು ಹಾಕಿಸಿಕೊಂಡಿದ್ದಾರೆ. ಕೆಲ ದಿನಗಳ ಬಳಿಕ ನಿಮಗೆ ರೈಲ್ವೆ ಇಲಾಖೆಯಲ್ಲಿ ಕೆಲಸ ಸಿಕ್ಕಿದೆ. ಈ ಕೆಲಸ ಬೇಕಾದರೆ ನೀವೂ 1,50,000 ರೂ ಹಣ ನೀಡಬೇಕು ಎಂದು ನಂಬಿಸಿದ್ದಾರೆ.
ಈಕೆಯ ನಯವಾದ ಮಾತುಗಳನ್ನು ನಂಬಿ ಒಂದೂವರೆ ಲಕ್ಷ ರೂಪಾಯಿಯನ್ನು ಆನ್‌ಲೈನ್ ಮೂಲಕ ಚೈತ್ರ ಕಳಿಸಿಕೊಟ್ಟಿದ್ದಾರೆ. ನಿಮ್ಮದು ಮೆಡಿಕಲ್, ಪೊಲೀಸ್ ವೆರಿಫಿಕೇಷನ್ ಆಗಿದೆ ಇದಕ್ಕೆ ನಾವು ಹಣಕೊಟ್ಟು ಮಾಡಿಸಿದ್ದೀವಿ ಎಂದಿದ್ದಾರೆ. ಇಷ್ಟಾದಮೇಲೆ ಬೆಂಗಳೂರಿನ ರೈಲ್ವೇ ಕಚೇರಿಯಲ್ಲಿ ಸಹಿ ಮಾಡುವುದಿದೆ, ನೀವೂ ಬರಬೇಕಾಗುತ್ತದೆ ಎಂದು ಕರೆಸಿಕೊಂಡಿದ್ದಾಳೆ.
ರೈಲ್ವೆ ಟಿಕೇಟ್ ಬುಕ್ ಮಾಡಿದ್ದ ವಂಚಕರು
ಆರೋಪಿ ಶ್ವೇತಾ ಅನುಮಾನಬಾರದಿರಲಿ ಎಂದು ಚೈತ್ರ ಹಾಗೂ ಅರ್ಜುನ್ ದಂಪತಿಗೆ ತಾನೇ ಶಿವಮೊಗ್ಗ ಟು ಬೆಂಗಳೂರಿಗೆ ರೈಲ್ವೆ ಟಿಕೇಟ್ ಬುಕ್ ಮಾಡಿ ಕರೆಸಿಕೊಂಡಿದ್ದಾಳೆ. ಚೈತ್ರ ಬೆಂಗಳೂರಿಗೆ ಹೋದಾಗ ಶ್ವೇತಾ ರೈಲ್ವೆ ಕಚೇರಿಯ ಹತ್ತಿರ ಕರೆದುಕೊಂಡು ಹೋಗಿದ್ದಾಳೆ. ಇವರನ್ನು ಹೊರಗೆ ಕೂರಿಸಿ ಆಫೀಸರ್ ಬಂದಿಲ್ಲ ಎಂದೇಳಿ, ಯಾವುದೋ ಪೇಪರ್‌ಗೆ ಸಹಿ ಮಾಡಿಸಿಕೊಂಡು, ನಾಳೆ ನಾನೇ ಸಬ್‌ಮಿಟ್ ಮಾಡುತ್ತೇನೆ ಎಂದು ಹೇಳಿದ್ದಾಳೆ.
ಬಳಿಕ ಮತ್ತೊಬ್ಬ ವಂಚಕ ಪ್ರಶಾಂತ್ ದೇಶಪಾಂಡೆ ಅವರನ್ನು ಪರಿಚಯಿಸಿ ಇವರೇ ನೋಡಿ ಜಾಬ್ ಮಾಡಿಸಿಕೊಡುವವರು ಎಂದು ಹೇಳಿ ತೋರಿಸಿದ್ದಾಳೆ. ಇವರೇ ನಿಮಗೆ ಕೆಲಸ ಕೊಡಿಸುವವರು ಅವರೊಂದಿಗೆ ಇನ್ನು ಮುಂದೆ ಮಾತನಾಡಿಕೊಳ್ಳಿ ಎಂದು ಜಾರಿಕೊಂಡಿದ್ದಾಳೆ. ಇತ್ತ ಕೆಲವು ದಿನಗಳು ಪ್ರಶಾಂತ್ ದೇಶಪಾಂಡೆ ಫೋನ್ ಮಾಡಿ ನಿಮ್ಮ ಹೆಂಡತಿಗೆ ಮಾತ್ರ ಜಾಬ್ ಆಗಿದೆ ಬೆಂಗಳೂರಿಗೆ ಬನ್ನಿ ಎಂದು ಹೇಳಿದ್ದಾನೆ.
ಇದನ್ನೂ ಓದಿ: Fraud case: ಸರ್ಕಾರಿ ಜಾಬ್ ಬೇಕಾ? ದಯವಿಟ್ಟು ಇವರನ್ನು ಸಂಪರ್ಕಿಸಬೇಡಿ; ವಂಚಕ ಅವನು ಮತ್ತು ಅವಳು ಅರೆಸ್ಟ್
ಈ ನಡುವೆ ಅರ್ಜುನ್ ಅವರು ಕೊಪ್ಪದ ಸ್ನೇಹಿತ ಆದರ್ಶ್‌ಗೆ ಪ್ರಶಾಂತ್ ದೇಶಪಾಂಡೆಯನ್ನು ಪರಿಚಯಿಸಿದ್ದಾರೆ. ಹುಬ್ಬಳಿಯಲ್ಲಿ ರೈಲ್ವೆ ಕೆಲಸ ನಡಿತಿದೆ ನಿನಗೆ ಟೆಂಡರ್ ಕೆಲಸ ಕೊಡಿಸುವುದಾಗಿ ಹೇಳಿ ನಂಬಿಸಿ ಆತನಿಂದಲೂ ಲಕ್ಷ ಲಕ್ಷ ಎಣಿಸಿದ್ದಾನೆ. ನಿಮ್ಮ ಕೆಲಸ ಆಗಿದೆ ನೇಮಕಾತಿ ಪತ್ರ ಬಂದಿದೆ 60,000 ಹಣ ಹಾಕಿ ಮನೆಗೆ ಕಳುಹಿಸಿಕೊಡುತ್ತೇನೆ ಎಂದು ಹೇಳಿದ್ದಾನೆ.
ಅಲ್ಲದೇ, ಶಿವಮೊಗ್ಗದ ವಿಜಯಕುಮಾರ್ ಎಂಬುವರಿಗೂ ಶ್ವೇತಾ ವಂಚಿಸಿದ್ದಾಳೆ. ರೈಲ್ವೆ ಇಲಾಖೆಯಲ್ಲಿ ಡಿ ದರ್ಜೆ ನೌಕರಿ ಕೂಡಿಸುವುದಾಗಿ 3,42.500 ರೂ ಹಣವನ್ನು ಶ್ವೇತಾ ಪಡೆದುಕೊಂಡಿದ್ದಾಳೆ. ಶ್ವೇತಾ ಮತ್ತು ಪ್ರಶಾಂತ ದೇಶಪಾಂಡೆ ಯಾವ ಕೆಲಸವನ್ನು ಕೊಡಿಸದೇ ನಾನಾ ಸಬೂಬುಗಳನ್ನು ಹೇಳುತ್ತಾ ದಿನ ಕಳೆದಿದ್ದಾರೆ. ಬಳಿಕ ಫೋನ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದಾರೆ.
ರೇಪ್ ಕೇಸ್ ಹಾಕುವುದಾಗಿ ಬೆದರಿಕೆ
ಅರ್ಜುನ್, ಆದರ್ಶ್, ನವೀನ್ ಇವರಿಬ್ಬರ ಮೇಲೆ ಅನುಮಾನಗೊಂಡು ಹಣ ಕೇಳಲು ರಿಪ್ಪನ್ ಪೇಟೆಯಲ್ಲಿರುವ ವಂಚಕಿ ಶ್ವೇತಾಳ ಶಾಪ್‌ಗೆ ಹೋಗಿದ್ದಾರೆ. ಹಣ ಕೇಳುತ್ತಿದ್ದಂತೆ ತನ್ನ ವಾರಸೆ ಬದಲಾಯಿಸಿದ ಶ್ವೇತಾ, ನಿಮ್ಮ ಮೇಲೆ ರೇಪ್ ಕೇಸ್ ಹಾಕಿ ಒಳಗೆ ಕಳುಹಿಸಿ ಬಿಡುತ್ತೇನೆಂದು ಎಂದು ಬೆದರಿಕೆ ಹಾಕಿದ್ದಾಳೆ. ಸದ್ಯ ಕೆಲಸ ಕೊಡಿಸುವುದಾಗಿ ಹೇಳಿ ನಮ್ಮನ್ನು ನಂಬಿಸಿ ನಮ್ಮಿಂದ ಹಣವನ್ನು ಪಡೆದುಕೊಂಡು ಮೋಸ ಮಾಡಿ ಹಣ ಕೇಳಲು ಹೋದಾಗ ಬೆದರಿಕೆ ಹಾಕಿದ್ದಾಳೆ ಎಂದು ದೂರು ನೀಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ