Site icon Vistara News

Karnataka Election 2023 : ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದ ಡಿ.ಎಸ್‌.ಅರುಣ್‌

#image_title

ಸೊರಬ: “ರಾಷ್ಟ್ರೀಯ ವಾದವನ್ನೇ ಸಿದ್ಧಾಂತವನ್ನಾಗಿಸಿಕೊಂಡ ಏಕೈಕ ಪಕ್ಷ ಬಿಜೆಪಿ. ಅನೇಕ ಹಿರಿಯರ ಶ್ರಮ ಮತ್ತು ತ್ಯಾಗದಿಂದ ಪಕ್ಷ ಪ್ರಸ್ತುತ ಜಗತ್ತಿನಲ್ಲಿ ಅತಿ ಹೆಚ್ಚು ಸದಸ್ಯರನ್ನು ಹೊಂದಿದ ದೊಡ್ಡ ಪಕ್ಷವಾಗಿ ಹೆಮ್ಮರವಾಗಿ ಬೆಳೆದಿದೆ” ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ (Karnataka Election 2023) ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡ ಬಿಜೆಪಿ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಈ ಮಾತುಗಳನ್ನಾಡಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಡಾ. ಎಚ್.ಇ. ಜ್ಞಾನೇಶ್ ಹಾಗೂ ಅವರ ಸ್ನೇಹಿತರನ್ನು ಅರುಣ್‌ ಅವರು ಬಿಜೆಪಿಗೆ ಬರಮಾಡಿಕೊಂಡಿದ್ದಾರೆ.

“ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಡಾ.ಎಚ್.ಇ.ಜ್ಞಾನೇಶ್ ಅವರು ಪಕ್ಷಕ್ಕೆ ಸೇರ್ಪಡೆಯಾಗಿರುವುದು ಸ್ವಾಗತಾರ್ಹ ವಿಷಯ. ಅಧಿಕಾರ ಶಾಶ್ವತವಲ್ಲ. ಆದರೆ, ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಮೂಲ ಸೌಲಭ್ಯಗಳನ್ನು ಒದಗಿಸಲು ರಾಜಕೀಯ ಅಧಿಕಾರ ಬೇಕಾಗುತ್ತದೆ. ಈ ಚಿಂತನೆಯೊಂದಿಗೆ ಕೇಂದ್ರದಲ್ಲಿ ಆಡಳಿತದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರೈತರಿಗೆ ನೇರವಾಗಿ ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ನೀರಾವರಿಗೆ, ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ” ಎಂದರು.

ಬಿಜೆಪಿ ಸೇರ್ಪಡೆಯಾದ ಸಮಾಜ ಸೇವಕ ಡಾ.ಎಚ್.ಇ.ಜ್ಞಾನೇಶ್ ಮಾತನಾಡಿ, “ವೃತ್ತಿಯಲ್ಲಿ ವೈದ್ಯನಾಗಿದ್ದರೂ ಸಹ ಅನೇಕ ಸಾಮಾಜಿಕ ಚಟುವಟಿಕೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ಜನರನ್ನು ಗಳಿಸುವುದಕ್ಕೆ ರಾಜಕೀಯ ಶಕ್ತಿ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಮೊದಲಿನಿಂದಲೂ ಸಂಘ-ಪರಿವಾರದೊಂದಿಗೆ ಸಂಪರ್ಕವಿದ್ದ ಹಿನ್ನೆಲೆ ಮತ್ತು ತರುಣ ಸಮಾವೇಶದ ಅಧ್ಯಕ್ಷತೆ ಮೂಲಕ ಪರಿವಾರದ ಹಿರಿಯರ ಪರಿಚಯವಾಗಿದ್ದರಿಂದ ಇದೀಗ ಸಾಮಾನ್ಯ ಕಾರ್ಯಕರ್ತನಾಗಿ ಬಿಜೆಪಿ ಸೇರ್ಪಡೆಯಾಗಿದ್ದೇನೆ” ಎಂದರು.

ಇದನ್ನೂ ಓದಿ: Karnataka Election: ಸೊರಬದಲ್ಲಿ ಬಿಜೆಪಿಯಿಂದ ಡಾ. ಜ್ಞಾನೇಶ್‌ಗೆ ಟಿಕೆಟ್ ನೀಡಲು ಆಗ್ರಹಿಸಿ ಬೃಹತ್ ರ್‍ಯಾಲಿ, ಸಂಸದರಿಗೆ ಮನವಿ ಸಲ್ಲಿಕೆ
“ಜನ ಸಂಘವು ಜನತಾ ಪಕ್ಷವಾಗಿ ನಂತರ ಭಾರತೀಯ ಜನತಾ ಪಕ್ಷವಾಗಿ ಬೆಳೆದು ನಿಂತಿದೆ. ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಆಡ್ವಾಣಿ ಸೇರಿದಂತೆ ಅನೇಕ ಹಿರಿಯ ನಾಯಕರು ಪಕ್ಷವನ್ನು ಬೆಳೆಸಲು ಸಾಕಷ್ಟು ಹೋರಾಟ ನಡೆಸಿದ್ದಾರೆ. ಪಕ್ಷವು ಇದೀಗ 44ನೇ ವರ್ಷವನ್ನು ಆಚರಿಸುತ್ತಿದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ನಿಶ್ಚಿತ. ಜೊತೆಗೆ ಕ್ಷೇತ್ರದಲ್ಲಿಯೂ ಬಿಜೆಪಿ ವಿಜಯದ ಸಾಧಿಸಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ತಾಲೂಕು ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಮುಖಂಡ ಎಚ್.ಎಸ್. ಮಂಜಪ್ಪ, ಪಕ್ಷದ ಜಿಲ್ಲಾ ಕಾರ್ಯದರ್ಶಿ ಶ್ರೀನಾಥ್, ತಾಲೂಕು ಉಪಾಧ್ಯಕ್ಷರಾದ ಈಶ್ವರ ಚನ್ನಪಟ್ಟಣ, ದೇವೇಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಕಡಸೂರು, ಪುರಸಭೆ ಉಪಾಧ್ಯಕ್ಷ ಮಧುರಾಯ್ ಜಿ. ಶೇಟ್, ಸದಸ್ಯ ಎಂ.ಡಿ. ಉಮೇಶ್, ಪರಮೇಶ್ವರ ಮಣ್ಣತ್ತಿ, ರಾಜು ಕೆಂಚಿಕೊಪ್ಪ, ಶಿವು ಆಟೋ, ಮಾಲತೇಶ್ ಕೊಡಕಣಿ, ಯಶೋಧರ ಸೇರಿದಂತೆ ಮತ್ತಿತರರಿದ್ದರು.

ಗ್ಯಾರಂಟಿ ಕಾರ್ಡ್‌ ಎಂಬ ಸುಳ್ಳು ಪ್ರಚಾರ

ಇದೇ ವೇಳೆ ಕಾಂಗ್ರೆಸ್‌ ಪಕ್ಷದ ಬಗ್ಗೆಯೂ ಮಾತನಾಡಿದ ಅರುಣ್‌ ಅವರು, “ಕಾಂಗ್ರೆಸ್ ಪಕ್ಷ ಗ್ಯಾರಂಟಿ ಕಾರ್ಡ್ ನೀಡುತ್ತಾ ಪ್ರಚಾರ ಮಾಡುತ್ತಿರುವುದು ಶುದ್ಧ ಹುಸಿಯಾಗಿದೆ. ಉಚಿತ ವಿದ್ಯುತ್ ನೀಡುವ ಭರವಸೆ ನೀಡುತ್ತಿರುವುದು ಹಾಸ್ಯಾಸ್ಪದವಾಗಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಜೆಟ್ ಮಂಡನೆ ಮಾಡುವ ವೇಳೆಯಲ್ಲಿ ವಿಧಾನಸೌಧದಲ್ಲೇ ವಿದ್ಯುತ್ ಕಡಿತಗೊಂಡಿತ್ತು. ಅವರದ್ದೇ ಸರ್ಕಾರವಿರುವ ಹಿಮಾಚಲ ಪ್ರದೇಶ, ರಾಜಸ್ಥಾನಗಳಲ್ಲಿ ಜನತೆಗೆ ಸುಳ್ಳು ಭರವಸೆಗಳನ್ನು ನೀಡಿದ್ದಾರೆ. ಅಲ್ಲಿಯೂ ಸಹ ಈ ಗ್ಯಾರಂಟಿ ಕಾರ್ಡ್ ಸುಳ್ಳಾಗಿದೆ. ಗ್ಯಾರಂಟಿ ಕಾರ್ಡ್‌ನಲ್ಲಿ ಹೇಳಿದ್ದ ವಿಷಯಗಳು ಬಜೆಟ್‌ನಲ್ಲಿ ಮಂಡನೆಯಾಗಲಿಲ್ಲ. ಕೇಂದ್ರದ ವರಿಷ್ಠರಿಗೆ ಆದಾಯ ತಂದು ಕೊಡುವುದು ಮಾತ್ರ ಕಾಂಗ್ರೆಸ್‌ಗೆ ಬೇಕಾಗಿದೆ ವಿನಃ ಜನತೆಯ ಹಿತವಲ್ಲ. ಬಿಜೆಪಿ ನುಡಿದಂತೆ ನೆಡೆಯುವ ಪಕ್ಷವಾಗಿದೆ” ಎಂದು ಅವರು ಹೇಳಿದ್ದಾರೆ.

Exit mobile version