ಶಿವಮೊಗ್ಗ: ವಿಧಾನಸಭಾ ಚುನಾವಣೆಗೆ (Karnataka Election 2023) ಕೆಲವೇ ತಿಂಗಳು ಬಾಕಿ ಇರುವಾಗ ಶಿವಮೊಗ್ಗದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸಲು ಮುಂದಾಗಿರುವ ಬಿಜೆಪಿ ನಾಯಕರು, ಕಾಂಗ್ರೆಸ್ ಜತೆಗೆ ಗುರುತಿಸಿಕೊಂಡಿದ್ದವರೂ ಸೇರಿ ಇಬ್ಬರು ಮುಖಂಡರನ್ನು ಸೆಳೆದಿದ್ದಾರೆ.
ಕೆ.ಎಸ್. ಪ್ರಶಾಂತ್ ಹಾಗೂ ಡಾ. ಧನಂಜಯ ಸರ್ಜಿ ಅವರಿಗೆ ಬಿಜೆಪಿ ಧ್ವಜವನ್ನು ನೀಡುವ ಮೂಲಕ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ ಅವರು ಪಕ್ಷಕ್ಕೆ ಬರಮಾಡಿಕೊಂಡರು.
ಸಾಗರ ಕ್ಷೇತ್ರದಲ್ಲಿ ಜಿಲ್ಲೆಯ ಮಾಜಿ ಸಂಸದ ಕೆ.ಜಿ. ಶಿವಪ್ಪ ಅವರ ಪುತ್ರ ಕೆ.ಎಸ್. ಪ್ರಶಾಂತ್ ಈ ಹಿಂದಿನಿಂದ ರಾಜಕೀಯವಾಗಿ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ತಮ್ಮದೇ ಸಂಘಟನೆ ಮೂಲಕ ಸಾಗರದಲ್ಲಿ ಸಾಮಾಜಿಕ ಚಟುವಟಿಕೆ ಮಾಡುತ್ತಿದ್ದಾರೆ.
ಕಳೆದ ಕೆಲ ದಿನದಿಂದ ಬಿಜೆಪಿ ನಾಯಕರ ಜತೆ ಹಾಗೂ ಹಿಂದುಪರ ಸಂಘಟನೆ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದ ಕೆ.ಎಸ್. ಪ್ರಶಾಂತ್ ಸೇರ್ಪಡೆಯಿಂದ ಸಾಗರ ರಾಜಕೀಯದಲ್ಲಿ ಹೊಸ ಲೆಕ್ಕಾಚಾರ ಶುರುವಾಗಿದೆ. ಹರತಾಳು ಹಾಲಪ್ಪ ಸೊರಬ ಕ್ಷೇತ್ರಕ್ಕೆ ಹೋದರೆ, ರಾಜಕೀಯ ಹಿನ್ನೆಲೆ ಜತೆಗೆ ಈಡಿಗ ಸಮುದಾಯದವರೂ ಆದ ಕೆ.ಎಸ್. ಪ್ರಶಾಂತ್‌ಗೆ ಟಿಕೆಟ್ ಎಂಬ ಚರ್ಚೆ ನಡೆಯುತ್ತಿದೆ.
ಕಳೆದ ಕೆಲವು ತಿಂಗಳಿಂದ ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಿದ್ದ ಧನಂಜಯ್ ಸರ್ಜಿ, ರಾಜಕೀಯವಾಗಿ ಗುರುತಿಸಿಕೊಳ್ಳಲು ನೆಲೆ ಹುಡುಕುತ್ತಿದ್ದರು. ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಡಾ. ಧನಂಜಯ್ ಸರ್ಜಿ, ಬಿಜೆಪಿ, ಕಾಂಗ್ರೆಸ್, ಅಪ್ ಅಷ್ಟೆ ಅಲ್ಲದೆ ಪಕ್ಷೇತರ ಅಭ್ಯರ್ಥಿಯಾಗಿ ಸರ್ಜಿ ಸ್ಫರ್ಧಿಸುವ ಬಗ್ಗೆಯೂ ಮಾತುಗಳು ಕೇಳಿಬರುತ್ತಿದ್ದವು.
ಅಂತಿಮವಾಗಿ ಧನಂಜಯ್ ಸರ್ಜಿಯವರನ್ನು ಬಿಜೆಪಿ ಸೆಳೆದುಕೊಂಡಿದ್ದು, ಇದೀಗ ಕ್ಷೇತ್ರದ ಶಾಸಕರಾಗಿರುವ ಕೆ.ಎಸ್. ಈಶ್ವರಪ್ಪ ಅವರ ಸಮ್ಮುಖದಲ್ಲೇ ಬಿಜೆಪಿಗೆ ಸೆಳೆದುಕೊಳ್ಳಲಾಗಿದೆ.
ಇದನ್ನೂ ಓದಿ | Dr. Dhananjaya Sarji | ಶಿವಮೊಗ್ಗದ ಖ್ಯಾತ ವೈದ್ಯ ಡಾ. ಧನಂಜಯ ಸರ್ಜಿ ಬಿಜೆಪಿಗೆ ಸೇರ್ಪಡೆ ಖಚಿತ