Site icon Vistara News

Karnataka Election 2023: ಟಿಕೆಟ್‌ ಭಿನ್ನಾಭಿಪ್ರಾಯ ಬದಿಗಿಟ್ಟು ಒಗ್ಗಟ್ಟಿನ ಮಂತ್ರ ಜಪಿಸಿದ ಕಿಮ್ಮನೆ, ಮಂಜುನಾಥ್ ಗೌಡ

#image_title

ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್‌ ಪಕ್ಷದ (Karnataka Election 2023) ಟಿಕೆಟ್‌ ವಿಚಾರದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಹಾಗೂ ಆರ್.ಎಂ.ಮಂಜುನಾಥ ಗೌಡ ಅವರ ನಡುವೆ ಭಿನ್ನಾಭಿಪ್ರಾಯ ಎದ್ದಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇದೀಗ ಈ ಇಬ್ಬರೂ ನಾಯಕರು ಒಂದೇ ವೇದಿಕೆಯ ಮೇಲೆ ಕಾಣಿಸಿಕೊಂಡಿದ್ದು, ಕಾರ್ಯಕರ್ತರಲ್ಲಿ ಉಂಟಾಗಿರುವ ಗೊಂದಲ ಬಗೆಹರಿಸಲು ಯತ್ನಿಸಿದ್ದಾರೆ.

ತೀರ್ಥಹಳ್ಳಿಯ ಗಾಯತ್ರಿ ಮಂದಿರದಲ್ಲಿ ಬುಧವಾರದಂದು ಕಾಂಗ್ರೆಸ್‌ ಸಭೆ ನಡೆದಿದೆ. ಅದರಲ್ಲಿ ಕಿಮ್ಮನೆ ರತ್ನಾಕರ್‌ ಹಾಗೂ ಆರ್‌.ಎಂ.ಮಂಜುನಾಥ ಗೌಡ ಅವರು ಒಟ್ಟಿಗೆ ಪಾಲ್ಗೊಂಡಿದ್ದರು. ಈ ಸಂಧರ್ಭದಲ್ಲಿ ಮಾತನಾಡಿದ ಕಿಮ್ಮನೆ ರತ್ನಾಕರ್, “ಬಿಜೆಪಿಯನ್ನು ಸೋಲಿಸುವುದು ನಮ್ಮ ಗುರಿ. ಕಾರ್ಯಕರ್ತರಲ್ಲಿ ಗೊಂದಲ ಬೇಡ, ಕಾರ್ಯಕರ್ತರೆಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು” ಎಂದರು.

“ಇನ್ನೆರಡು ದಿನಗಳಲ್ಲಿ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗಲಿದೆ. ಯಾರಿಗೇ ಟಿಕೆಟ್ ಸಿಕ್ಕರೂ ನಾವೆಲ್ಲ ಸೇರಿ ಕೆಲಸ ಮಾಡೋಣ. ಯಾರಲ್ಲೂ ಆತಂಕ, ಗೊಂದಲ ಬೇಡ. ಕ್ಷೇತ್ರದಲ್ಲಿ ಎಲ್ಲರೂ ಸೇರಿ ಕಾಂಗ್ರೆಸ್ ಗೆಲ್ಲಿಸಲು ಕೆಲಸ ಮಾಡೋಣ” ಎಂದು ಕರೆ ನೀಡಿದರು.

ಇದನ್ನೂ ಓದಿ: Karnataka Election: ಇತ್ಯರ್ಥವಾಗದ ತೀರ್ಥಹಳ್ಳಿ ಕಾಂಗ್ರೆಸ್‌ ಟಿಕೆಟ್‌; ಒಬ್ಬರಿಗೆ ಕೆಳಮನೆ, ಇನ್ನೊಬ್ಬರಿಗೆ ಮೇಲ್ಮನೆ ಭರವಸೆ

ಬಳಿಕ ಮಾತನಾಡಿದ ಡಾ.ಆರ್.ಎಂ. ಮಂಜುನಾಥಗೌಡ, “ಕಾಂಗ್ರೆಸ್ ಜನಪರ ಪಕ್ಷ. ಕಾಂಗ್ರೆಸ್ ಕೊಟ್ಟ ಕೊಡುಗೆಗಳನ್ನು ಸರಿಯಾಗಿ ಪ್ರಚಾರ ಮಾಡಬೇಕು. ಎಲ್ಲ ಕಾರ್ಯಕರ್ತರು ಒಗ್ಗೂಡಿ ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ ಮಾಡಬೇಕು. ಯಾರಿಗೇ ಟಿಕೆಟ್ ಆದರೂ ನಾವೆಲ್ಲರೂ ಸೇರಿ ಕಾಂಗ್ರೆಸ್ ಗೆಲ್ಲಿಸಬೇಕು. ಇಲ್ಲಿ ವ್ಯಕ್ತಿ ಮುಖ್ಯವಲ್ಲ ಪಕ್ಷವನ್ನು ಗೆಲ್ಲಿಸಬೇಕು” ಎಂದು ಮನವಿ ಮಾಡಿದರು.

ಕಾರ್ಯಕರ್ತರ ಸಭೆಯಲ್ಲಿ ತೀರ್ಥಹಳ್ಳಿ ಕ್ಷೇತ್ರದ ಉಸ್ತುವಾರಿ ಕಲಗೋಡು ರತ್ನಾಕರ್, ಕಾಂಗ್ರೆಸ್ ನಾಯಕರಾದ ದಿನೇಶ್, ವಿಶ್ವನಾಥ ಶೆಟ್ಟಿ, ಕೆಸ್ತೂರು ಮಂಜುನಾಥ್, ಮುಡುಬ ರಾಘವೇಂದ್ರ, ಆಸಾದಿ ಸೇರಿದಂತೆ ಎಲ್ಲ ಪದಾಧಿಕಾರಿಗಳು, ಗ್ರಾಮ ಪಂಚಾಯತ್ ಸದಸ್ಯರು, ನಾಯಕರು, ಕಾರ್ಯಕರ್ತರು ಹಾಜರಿದ್ದರು.

Exit mobile version