Site icon Vistara News

Vistara News Launch | ಸುದ್ದಿ ಮಾಧ್ಯಮಗಳು ಜನಪರವಾಗಿರಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆಶಯ

Vistara News Launch

ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿಯ ಬಂಟರ ಭವನದಲ್ಲಿ ವಿಸ್ತಾರ ಕನ್ನಡ ಸಂಭ್ರಮ ಕಾರ್ಯಕ್ರಮ ಸಂಭ್ರಮದಿಂದ ಶನಿವಾರ ನೆರವೇರಿತು. ಹಿರಿಯ ಪತ್ರಕರ್ತ ಹರಿಪ್ರಕಾಶ್‌ ಕೋಣೆಮನೆ ಅವರ ನೇತೃತ್ವದ ವಿಸ್ತಾರ ನ್ಯೂಸ್‌ (Vistara News Launch) ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮವನ್ನು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್‌ ಉದ್ಘಾಟಿಸಿದರು.

ಡಿಜಿಟಲ್‌ ಮಾಧ್ಯಮದ ಬೆಳವಣಿಗೆ ಹೆಚ್ಚಾದಂತೆ ದೃಶ್ಯ ಮಾಧ್ಯಮಗಳಲ್ಲಿ ಸಾಮಾಜಿಕ ಕಾಳಜಿಯ ವರದಿಗಳು ಕಡಿಮೆಯಾಗುತ್ತಿವೆ ಎಂಬ ಕಳವಳ ಸಾರ್ವಜನಿಕರಲ್ಲಿ ಮೂಡುತ್ತಿದೆ. ಸುದ್ದಿ ಮಾಧ್ಯಮಗಳು ಜನಪರವಾಗಿರದೆ ಮಾಲೀಕರ ಪರವಾಗಿ ಕೆಲಸ ಮಾಡುತ್ತವೆ ಎಂಬ ಭಾವನೆ ಇದೆ. ಈ ಹಿನ್ನೆಲೆಯಲ್ಲಿ ವಿಸ್ತಾರ ನ್ಯೂಸ್‌ಗೆ ಹೆಚ್ಚಿನ ಜವಾಬ್ದಾರಿ ಇದೆ ಎಂದು ಕಿಮ್ಮನೆ ರತ್ನಾಕರ್‌ ಹೇಳಿದರು.

ಇದನ್ನೂ ಓದಿ | Vistara News Launch | ಯಲ್ಲಾಪುರದಲ್ಲಿ ಅದ್ಧೂರಿ ವಿಸ್ತಾರ ಕನ್ನಡ ಸಂಭ್ರಮ

ಕನ್ನಡ ಪತ್ರಿಕೋದ್ಯಮಕ್ಕೆ ಭವ್ಯ ಇತಿಹಾಸವಿದೆ. ಅನೇಕ ಬಾರಿ ಮಾಧ್ಯಮಗಳು ಸರ್ಕಾರವನ್ನೇ ಬದಲಾಯಿಸುವಷ್ಟು ಪ್ರಭಾವವಾಗಿ ಕೆಲಸ ಮಾಡಿವೆ. ಈಗಲೂ ಕೂಡ ಜನತೆ ಸುದ್ದಿ ಮಾಧ್ಯಮಗಳನ್ನು ನಂಬುತ್ತಾರೆ. ವಿಸ್ತಾರ ಕನ್ನಡ ಚಾನೆಲ್‌ ತನ್ನ ಧ್ಯೇಯವಾಕ್ಯದಂತೆ ನಿಖರ ಹಾಗೂ ಜನಪರವಾಗಿ ಮೂಡಿಬರಲಿ ಎಂದವರು ಹಾರೈಸಿದರು.

ರಾಜ್ಯ ಅಪೆಕ್ಸ್‌ ಬ್ಯಾಂಕ್‌ ಹಾಗೂ ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಆರ್‌.ಎಂ. ಮಂಜುನಾಥ ಗೌಡ ಮಾತನಾಡಿ, ಮಾಧ್ಯಮಗಳು ವಿಶ್ವಾಸಾರ್ಹ ವಿರೋಧಪಕ್ಷದ ರೀತಿ ಕೆಲಸ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಜನರ ಸಮಸ್ಯೆಗಳನ್ನು ಚರ್ಚೆ ಮಾಡುವ ಬದಲು ತೀರಾ ಸಾಧಾರಣ ವಿಚಾರಗಳನ್ನು ವೈಭವೀಕರಿಸಲಾಗುತ್ತಿದೆ. ಇದು ಸಲ್ಲದು. ಯಾವುದೇ ಆಡಳಿತ ಪಕ್ಷವಿದ್ದರೂ ಅದರ ಲೋಪದೋಷಗಳನ್ನು ಎತ್ತಿ ಹಿಡಿಯಬೇಕು ಎಂದರು.

ತಾಲೂಕು ಕಸಾಪ ಅಧ್ಯಕ್ಷ ಟಿ.ಕೆ. ರಮೇಶ್‌ ಶೆಟ್ಟಿ ಮಾತನಾಡಿ, ಸ್ಪರ್ಧೆ ಹೆಚ್ಚಾದಂತೆ ಪತ್ರಕರ್ತರ ಮೇಲೆ ಒತ್ತಡವೂ ಹೆಚ್ಚಾಗುತ್ತಿದೆ. ಟಿವಿ ಚಾನೆಲ್‌ಗಳಲ್ಲಿ ಜನತೆಗೆ ಅಗತ್ಯವೇ ಇರದ ವಿಚಾರಗಳ ಕುರಿತ ಚರ್ಚೆ ಹೆಚ್ಚುತ್ತಿದೆ. ಇಷ್ಟವಿಲ್ಲದಿದ್ದರೂ ಪ್ರತಿಸ್ಪರ್ಧಿ ಚಾನೆಲ್‌ನ ಸ್ಪರ್ಧೆಯ ಭೀತಿಯಿಂದಾಗಿ ಅನಿವಾರ್ಯವಾಗಿ ರಾಜಿಯಾಗಬೇಕಾದ ಪ್ರವೃತ್ತಿ ಹೆಚ್ಚುತ್ತಿದೆ. ಇದು ಜನಪರ ಪತ್ರಿಕೋದ್ಯಮಕ್ಕೆ ಒಳ್ಳೆಯ ಲಕ್ಷಣವಲ್ಲ. ವಿಸ್ತಾರ ಚಾನೆಲ್‌ ಈ ಎಲ್ಲಾ ಅಂಶಗಳನ್ನು ಮುಂದಿಟ್ಟುಕೊಂಡು ಜನಪರವಾಗಿ ಬೆಳೆಯಲಿ ಎಂದು ಹಾರೈಸಿದರು.

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಡಾನ್‌ ರಾಮಣ್ಣ ಮಾತನಾಡಿ, ಪತ್ರಿಕೋದ್ಯಮದಲ್ಲಿ ಹಿಂದೆಂದೂ ಕಂಡು ಕೇಳರಿಯದ ಸ್ಫರ್ಧೆ ಆರಂಭವಾಗಿದೆ. ಯಾವುದೇ ಸುದ್ದಿ ಸಂಸ್ಥೆ ಜಿಲ್ಲೆ, ತಾಲೂಕು ಮಟ್ಟದ ವರದಿಗಾರರಿಗೆ ಮುಕ್ತ ಸ್ವಾತಂತ್ರ್ಯ ನೀಡದಿದ್ದಲ್ಲಿ ಜನಪರ ಕೆಲಸ ನಿರ್ವಹಿಸುವುದು ಅಸಾಧ್ಯವಾಗುತ್ತದೆ. ಆಗ ಸಾರ್ವಜನಿಕ ವಿಶ್ವಾಸಾರ್ಹತೆಯೂ ಕಡಿಮೆಯಾಗುತ್ತದೆ ಎಂದರು.

ಹಿರಿಯ ಪತ್ರಕರ್ತ ಡಿ.ಎಸ್. ವಿಶ್ವನಾಥ ಶೆಟ್ಟಿ ಮಾತನಾಡಿ, ದೃಶ್ಯ ಮಾಧ್ಯಮ ಹಿಂದೆಂದಿಗಿಂತಲೂ ಪ್ರಭಾವಶಾಲಿಯಾಗಿದೆ. ಆದರೆ ಬ್ರೇಕಿಂಗ್‌ ಸುದ್ದಿಗಳನ್ನು ಕೊಡುವ ಗಡಿಬಿಡಿಯಲ್ಲಿ ವಸ್ತುನಿಷ್ಠತೆ ಕಡಿಮೆಯಾಗುತ್ತಿದೆ. ಯಾವುದೇ ಸುದ್ದಿ ಸಂಸ್ಥೆ ದೀರ್ಘಕಾಲ ಸ್ಪರ್ಧೆಯಲ್ಲಿ ಉಳಿದುಕೊಳ್ಳಲು ನಿಖರವಾದ ವಿಶ್ಲೇಷಣಾತ್ಮಕ ಸುದ್ದಿ ನೀಡುವುದು ಮುಖ್ಯವಾಗುತ್ತದೆ. ಯಾವ ಸಿದ್ಧಾಂತದ ಪರವಾಗಿಯೂ ಇರದೇ ಜನಪರವಾಗಿದ್ದಾಗ ಸುದ್ದಿ ಸಂಸ್ಥೆ ಹಾಗೂ ಪತ್ರಕರ್ತರ ಮೌಲ್ಯ ಹೆಚ್ಚುತ್ತದೆ ಎಂದರು.

ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಜಯಪ್ರಕಾಶ್‌ ಶೆಟ್ಟಿ, ವಿಸ್ತಾರ ನ್ಯೂಸ್‌ ಶಿವಮೊಗ್ಗ ಬ್ಯೂರೋ ಮುಖ್ಯಸ್ಥ ವಿವೇಕ್‌ ಮಾಹಾಲೆ ಹಾಜರಿದ್ದರು.

ಶೇಷಾದ್ರಿ ಬುಕ್ಲಾಪುರ ನಾಂದಿ ಗೀತೆ ಹಾಡಿದರು. ಚಾನೆಲ್‌ನ ತಾಲೂಕು ವರದಿಗಾರ ಮೋಹನ್‌ ಮುನ್ನೂರು ಸ್ವಾಗತಿಸಿದರು. ನಿಶ್ಚಲ್‌ ಜಾದೂಗಾರ್‌ ವಂದಿಸಿದರು. ಗಾಯತ್ರಿ ಶೇಷಗಿರಿ ಕಾರ್ಯಕ್ರಮ ನಿರೂಪಿಸಿದರು.

ಇದನ್ನೂ ಓದಿ | Vistara News Launch | ಬ್ರೇಕಿಂಗ್ ನ್ಯೂಸ್ ಧಾವಂತದಲ್ಲಿ ಸಮಾಜ ಒಡೆಯುವ ಕೆಲಸ ಆಗಬಾರದು: ಸಂಸದ ಬಿ.ವೈ. ರಾಘವೇಂದ್ರ

Exit mobile version