Site icon Vistara News

ಕುವೆಂಪು ವಿವಿ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳ ಕ್ಷಮೆ ಕೋರಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಗೌರವ ಡಾಕ್ಟರೇಟ್

ಶಿವಮೊಗ್ಗ: ಕೋವಿಡ್‌ ಕಾರಣದಿಂದಾಗಿ ಕುವೆಂಪು ವಿಶ್ವವಿದ್ಯಾಲಯವೂ ತನ್ನ ಘಟಿಕೋತ್ಸವ ಸಮಾರಂಭಕ್ಕೆ ತಡೆಹಾಕಿತ್ತು. ಇದೀಗ ಮೂರನೇ ಅಲೆಯಲ್ಲಿ ಕೋವಿಡ್‌ ಕ್ಷಿಣಿಸುತ್ತಿದ್ದ ಬೆನ್ನಲ್ಲೇ ವಿಶ್ವವಿದ್ಯಾಲಯ ಒಂದೇ ದಿನ ಎರಡು ಘಟಿಕೋತ್ಸವ ಕಾರ್ಯಕ್ರಮ ನಡೆಸಿದೆ. ಸಮಾರಂಭಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಗಿಯಾಗಿ ಪದವಿ ಪ್ರದಾನ ಮಾಡಿದರು.

ಇದನ್ನೂ ಓದಿ | ರಾಷ್ಟ್ರಕವಿ ಕುವೆಂಪು ಮತ್ತು ನಾಡಗೀತೆಗೆ ಅವಮಾನ ಖಂಡಿಸಿ ಮಂಡ್ಯದಲ್ಲಿ ಪ್ರತಿಭಟನೆ

ಬಳಿಕ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕುವೆಂಪು ವಿಶ್ವವಿದ್ಯಾಲಯ ರಾಜ್ಯದ ಅಗ್ರಗಣ್ಯ ವಿಶ್ವವಿದ್ಯಾಲಯಗಳಲ್ಲಿ ಒಂದು. ರಾಷ್ಟ್ರಕವಿ ಕುವೆಂಪು ಹೆಸರು ಈ ವಿಶ್ವವಿದ್ಯಾಲಯಕ್ಕೆ ಇರುವುದು ಪ್ರೇರಣಾದಾಯಕವಾಗಿದ್ದು, ರಾಷ್ಟ್ರ- ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದೆ. ಗೌರವ ಡಾಕ್ಟರೇಟ್ ಪಡೆದ ಎಲ್ಲ 6  ಮಹನೀಯರೂ ತಮ್ಮ  ಕ್ಷೇತ್ರಗಳಲ್ಲಿ ಮಹತ್ತರ ಕಾರ್ಯ ಮಾಡಿದ್ದಾರೆ. ಅವರ ಈ ಕಾರ್ಯ ಮುಂದಿನ ದಿನಗಳಲ್ಲೂ ಉನ್ನತ ಮಟ್ಟದಲ್ಲಿ  ಮಾಡುವಂತಾಗಲಿ ಎಂದರು. ಸ್ವರ್ಣ ಪದಕ, ಪಿಎಚ್ ಡಿ ಇತರ ಪದವಿ ಪಡೆದ ಎಲ್ಲರ ಭವಿಷ್ಯ ಉಜ್ವಲವಾಗಲಿ ಎಂದರು.

ಎರಡು ವರ್ಷಗಳ ಘಟಿಕೋತ್ಸವ ಒಂದೇ ದಿನ ನಡೆಸಿದ ಕಾರಣ ನೂರಾರು ವಿದ್ಯಾರ್ಥಿಗಳಿಗೆ ಕಡಿಮೆ ಸಮಯದಲ್ಲಿ ವೇದಿಕೆ ಮೇಲೆ ಎಲ್ಲರಿಗೂ ಪದವಿ ಪ್ರದಾನ ಮಾಡುವುದು ಅಸಾಧ್ಯವಾಗಿತ್ತು. ಹೀಗಾಗಿ ಕೆಲವರಿಗಷ್ಟೇ ಪದವಿ ಪ್ರದಾನ ಮಾಡಲಾಯಿತು. ಇದನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ರಾಜ್ಯಪಾಲರು, ʼಕಾರ್ಯಕ್ರಮದಲ್ಲಿ ಎಲ್ಲರಿಗೂ ಪದವಿ ಪ್ರದಾನ ಮಾಡದಿರುವುದಕ್ಕೆ ಇದೇ ವೇಳೆ ಕ್ಷಮೆ ಇರಲಿʼ ಎಂದರು.

ಸರ್ಕಾರದ ಯೋಜನೆಗಳ ಲಾಭ ಪಡೆಯುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು

ಪ್ರಧಾನಿ ನರೇಂದ್ರ ಮೋದಿ ಎನ್ಇಪಿ ಜಾರಿಗೊಳಿಸಿದ್ದು, ವಿದ್ಯಾರ್ಥಿಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳ ಲಾಭ ಪಡೆದು ತಮ್ಮ ಗುರಿ ಸಾಧಿಸಿಕೊಳ್ಳಬೇಕು. 21ನೇ ಶತಮಾನದಲ್ಲಿ ಇಡೀ ದೇಶದಲ್ಲಿ ಅಮೃತ ಮಹೋತ್ಸವ ಆಚರಿಸಲಾಗುತ್ತಿದೆ. ದೇಶದ ಉಜ್ವಲ ಭವಿಷ್ಯದ ದೃಷ್ಟಿಯಿಂದ ಏನು ಮಾಡಬಹುದು ಎಂಬ ಬಗ್ಗೆ ಚರ್ಚೆಯಾಗಲಿ. ಆತ್ಮನಿರ್ಭರ ಭಾರತದತ್ತ ಸಾಗಲು ನಾವೆಲ್ಲ ಕೈಜೋಡಿಸೋಣ ಎಂದರು. ಅಂಧ ಕ್ರಿಕೆಟಿಗ ಮಹಾಂತೇಶ್ ಕಿವಡಸಣ್ಣವರ್ ಹೆಸರು ಪ್ರಸ್ತಾಪಿಸಿದ ರಾಜ್ಯಪಾಲರು, ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ನುಡಿದರು.

ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ಡಾ. ಶ್ರೀದೇವಿ ಅನ್ನಪೂರ್ಣ ಸಿಂಗ್ ಮಾತನಾಡಿ, ಪ್ರತಿ ವಿದ್ಯಾರ್ಥಿಯಲ್ಲಿ ವಿಶಿಷ್ಟ ಸಾಮರ್ಥ್ಯಗಳನ್ನು ಬೆಳೆಸುವುದು, ಸೃಜನಶೀಲತೆ, ವಿಮರ್ಶಾತ್ಮಕ ಪ್ರಜ್ಞೆ, ತರ್ಕಬದ್ಧ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೊಸ ಮಾರ್ಗಗಳನ್ನು ಅನ್ವೇಷಿಸಲು ಪ್ರೋತ್ಸಾಹಿಸುವುದು ಎನ್‌ಇಪಿ ಉದ್ದೇಶವಾಗಿದೆ. ಹೊಸ ಶಿಕ್ಷಣ ನೀತಿಯು ಬೋಧನೆ ಮತ್ತು ಕಲಿಕೆಯಲ್ಲಿ ತಂತ್ರಜ್ಞಾನದ ಬಳಕೆಯನ್ನು ಪ್ರೋತ್ಸಾಹಿಸುತ್ತದೆ. ಇದು ಕಲಿಕೆಯಲ್ಲಿನ ಭಾಷಾ ತೊಡಕುಗಳನ್ನು ನಿವಾರಿಸುತ್ತದೆ. ಸೃಜನಶೀಲತೆ ಮತ್ತು ನಾವೀನ್ಯತೆಗಳಿಗೆ ಸಮಾನ ಅವಕಾಶಗಳನ್ನು ನೀಡಿ, ಶಿಕ್ಷಣದ ಗುಣಮಟ್ಟವನ್ನು ವೃದ್ಧಿಸುವುದು ಮತ್ತು ಭಾರತವನ್ನು ಶಕ್ತಿಶಾಲಿಯಾದ ಜ್ಞಾನಾಧಾರಿತವಾದ ಸಮಾಜವನ್ನಾಗಿ ರೂಪಿಸುವುದಾಗಿದೆ ಎಂದರು.

ಗೌರವ ಡಾಕ್ಟರೇಟ್‌ ಪದವಿ ಪ್ರದಾನ

31ರ ಘಟಿಕೋತ್ಸವದಲ್ಲಿ ವಿಧಾನ ಪರಿಷತ್ ಮಾಜಿ ಸಭಾಪತಿ ಡಾ. ಡಿ.ಎಚ್.ಶಂಕರಮೂರ್ತಿ, ಶಿಕ್ಷಣ ತಜ್ಞೆ ಡಾ. ಗೀತಾ ನಾರಾಯಣ ಮತ್ತು ಯೋಗ ಗುರು ಭ.ಮ. ಶ್ರೀಕಾಂಠರಿಗೆ ಗೌರವ ಡಾಕ್ಟರೇಟ್‌ ಪದವಿ ಪ್ರದಾನ ಮಾಡಲಾಯಿತು. 32ನೇ ಘಟಿಕೋತ್ಸವದಲ್ಲಿ ಶಿಕ್ಷಣ ತಜ್ಞ, ಆಂಧ್ರಪ್ರದೇಶದ ಕೇಂದ್ರೀಯ ಬುಡಕಟ್ಟು ವಿವಿಯ ಕುಲಪತಿ ಪ್ರೊ.ಟಿ.ವಿ.ಕಟ್ಟಿಮನಿ, ಅಂಧ ಕ್ರಿಕೆಟಿಗ ಮಹಾಂತೇಶ್ ಜಿ. ಕಿವಡಸಣ್ಣವರ್, ಯೋಗ ಗುರು ಬಾ.ಸು. ಅರವಿಂದ್ ಅವರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಯಿತು.

31ರ ಘಟಿಕೋತ್ಸವದಲ್ಲಿ ಕನ್ನಡ ಅಧ್ಯಯನ ವಿಭಾಗದ ಪ್ರಣೀತಾ ಎಂ.ಟಿ ಅವರಿಗೆ ಅತಿ ಹೆಚ್ಚು 8 ಸ್ವರ್ಣ ಪದಕ ಮತ್ತು 2 ನಗದು ಬಹುಮಾನ ಲಭಿಸಿದ್ದರೆ, 32ನೇ ಘಟಿಕೋತ್ಸವದಲ್ಲಿ ಕನ್ನಡ ಅಧ್ಯಯನ ವಿಭಾಗದ ದಿವ್ಯಾ ಹೆಚ್.ಎನ್. ಅವರಿಗೆ ಅತಿ ಹೆಚ್ಚು 11 ಸ್ವರ್ಣ ಪದಕ ಮತ್ತು 2 ನಗದು ಬಹುಮಾನ ಸಿಕ್ಕಿದೆ.

ಇದನ್ನೂ ಓದಿ: ಒಂದೇ ಬಾರಿಗೆ ಎರಡು ವರ್ಷಗಳ ಘಟಿಕೋತ್ಸವಕ್ಕೆ ಸಾಕ್ಷಿಯಾಗ್ತಿದೆ ಕುವೆಂಪು ವಿಶ್ವವಿದ್ಯಾಲಯ

Exit mobile version