Site icon Vistara News

ಹೆಂಡತಿಯೂ ಮಾಯ..ಹಣವೂ ಮಾಯ..!

shivamogga issue

ಶಿವಮೊಗ್ಗ: ಇದು ವಿಚಿತ್ರ ಪರಿಸ್ಥಿತಿ. ಎರಡೂವರೆ ಲಕ್ಷ ರೂಪಾಯಿ ಕಳೆದುಹೋಗಿದ್ದಕ್ಕೆ ದುಃಖಿಸುವುದೋ ಅಥವಾ ಆ ಹಣವನ್ನು ಪತ್ನಿಯೇ ತೆಗೆದುಕೊಂಡಿದ್ದಾಳೆ ಎಂದು ಕೊರಗುವುದೋ ಅಥವಾ ಹಣವನ್ನೂ ತೆಗೆದುಕೊಂಡು ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ಆತಂಕಪಡುವುದೋ? ಇದು ಶಿವಮೊಗ್ಗದ ವ್ಯಕ್ತಿಯೊಬ್ಬರ ಪರಿಸ್ಥಿತಿ.

ಆಗಿದ್ದಿಷ್ಟು. ಶಿವಮೊಗ್ಗ ತಾಲೂಕಿನ ಮತ್ತೂರು ಗಡೇಕಲ್‌ ಗ್ರಾಮದ ಕುಮಾರ್‌ ವಿವಾಹಿತ. ಸ್ನೇಹಿತ ಹಾಗೂ ಕೋಳಿಫಾರಂ ಮಾಲೀಕರೊಬ್ಬರಿಂದ ಹಿಂದೊಮ್ಮೆ ಎರಡೂವರೆ ಲಕ್ಷ ರೂಪಾಯಿ ಸಾಲ ಪಡೆದಿದ್ದ. ಒಂದು ದಿನ ಸಾಲ ತೀರಿಸುವಷ್ಟು ಹಣ ಹೊಂದಿಕೆ ಆಯಿತು. ಸಾಲವನ್ನು ತೀರಿಸುವ ನಿರ್ಧಾರ ಮಾಡಿದ. ಸಾಲ ತೀರಿಸಿ ಬರೋಣ ಎಂದು ಕುಮಾರ್‌ ತನ್ನ ಬೈಕಿನಲ್ಲಿ ಪತ್ನಿಯನ್ನೂ ಕರೆದುಕೊಂಡು ಹೋದ.

ಇದನ್ನೂ ಓದಿ | ಶಿವಮೊಗ್ಗ,ಬೆಂಗಳೂರು,ಮೈಸೂರನ್ನು ತೊಯ್ದ ಭಾರೀ ಮಳೆ

ಲಷ್ಕರ್‌ ಮೊಹಲ್ಲಾಕೆ ಬಂದು ನಿಂತು, ಕೋಳಿ ಫಾರಂ ಮಾಲೀಕನಿಗೆ ಹಣ ಕೊಟ್ಟು ಬರೋಣ ಎಂದು ಪತ್ನಿಯನ್ನು ಕರೆಯುತ್ತಾನೆ. ಆದರೆ ಅದೇಕೊ ಪತ್ನಿ ನಿರಾಕರಿಸುತ್ತಾಳೆ. ನಾನು ಅಲ್ಲಿಗೆ ಬರುವುದಿಲ್ಲ, ನೀವು ಹೋಗಿ ಬನ್ನಿ. ನಾನು ಮನೆಗೆ ಸ್ವಲ್ಪ ತರಕಾರಿ ಖರೀದಿಸಬೇಕು ಎನ್ನುತ್ತಾಳೆ. ಆಗಲಿ ಎಂದು ಪತಿ, ಹಣವಿದ್ದ ಚೀಲ ತೆಗೆದುಕೊಂಡು ಹೋಗುತ್ತಾನೆ.

ಕೋಳಿ ಫಾರಂ ಮಾಲೀಕನನ್ನು ಭೇಟಿಯಾಗಿ ಹಣ ನೀಡಲು ಮುಂದಾದಾಗ ಆಶ್ಚರ್ಯ ಕಾದಿತ್ತು. ಆ ಚೀಲದಲ್ಲಿ ಹಣವೇ ಇರಲಿಲ್ಲ. ಆಗ ನೆನೆಸಿಕೊಂಡವನಿಗೆ, ಬೈಕ್‌ ಬಳಿಯೇ ನಿಂತಿರುವ ಪತ್ನಿ ಹತ್ತಿರ ಹಣ ಇರಬೇಕು ಎಂದು ಊಹಿಸುತ್ತಾನೆ. ಒಂದು ನಿಮಿಷ ಹಣ ತಂದುಬಿಡುತ್ತೇನೆ ಎಂದು ಗಾಬರಿಯಿಂದಲೇ ಬೈಕ್‌ ಕಡೆಗೆ ಓಡೋಡಿ ಬರುತ್ತಾನೆ ಪತಿ. ಇತ್ತ ನೋಡಿದರೆ ಬೈಕ್‌ ಬಳಿ ನಿಂತಿದ್ದ ಪತ್ನಿಯೂ ಕಾಣೆಯಾಗಿದ್ದಾಳೆ.

ಅಲ್ಲೇ ಎಲ್ಲೋ ತರಕಾರಿ ಖರೀದಿ ಮಾಡುತ್ತಿರಬೇಕು ಎಂದುಕೊಂಡು ಫೋನ್‌ ಮಾಡುತ್ತಾನೆ ಪತಿ. ಫೋನ್‌ ರಿಸೀವ್‌ ಮಾಡಿದ ಪತ್ನಿ, ಹಣ ಕಳೆದುಹೋಗಿದೆ, ಹುಡುಕಿಕೊಂಡು ಬರುತ್ತೇನೆ ಎನ್ನುತ್ತಾಳೆ. ಆಗಲಿ ಎಂದು ಸ್ವಲ್ಪ ಹೊತ್ತು ಕಾದಿದ್ದಾಯಿತು, ಪತ್ನಿ ಬರಲೇ ಇಲ್ಲ. ಸುಮಾರು ಹೊತ್ತು ಕಾದರೂ ಬರದಿದ್ದಾಗ ಮತ್ತೆ ಫೋನ್‌ ಮಾಡಿದರೆ ರೀಚ್‌ ಆಗುತ್ತಿಲ್ಲ.

ಇಲ್ಲಿ ಏನು ನಡೆದಿದೆ ಎಂದೇ ಪತಿಗೆ ಗೊತ್ತಾಗುತ್ತಿಲ್ಲ. ಪತ್ನಿಯೇ ಹಣವನ್ನು ಹೊತ್ತೊಯ್ದಿದ್ದಾಳೆಯೇ? ಅಥವಾ ಇನ್ಯಾರಾದರೂ ಕಳ್ಳತನ ಮಾಡಿದ್ದಾರೆಯೇ? ಪತ್ನಿ ಎಲ್ಲಿದ್ದಾಳೆ? ಎಂಬ ಅನೇಕ ಪ್ರಶ್ನೆಗಳು ತಲೆಯಲ್ಲಿ ಕೊರೆಯುತ್ತಿವೆ. ಈ ಘಟನೆ ನಡೆದದ್ದು ಮೇ 13ರಂದು. ಪತ್ನಿ ಬರಬಹುದು, ಹಣವೂ ಸಿಗಬಹುದು ಎಂದು ಕೆಲವು ದಿನಗಳು ಪತಿ ಕಾದಿದ್ದಾನೆ.

ಪತ್ನಿ ಆಗಮಿಸುವ ಯಾವುದೇ ಮುನ್ಸೂಚನೆ ಸಿಗದಿದ್ದಾಗ ಪತಿ ಕೊನೆಗೆ ಪೊಲೀಸ್‌ ಮೊರೆ ಹೋಗಿದ್ದಾನೆ. ಕೋಟೆ ಠಾಣೆಯಲ್ಲಿ ದೂರನ್ನು ದಾಖಲಿಸಿ, ಪತ್ನಿಯನ್ನು ಹುಡುಕಿಕೊಡಿ ಎಂದು ಕೋರಿದ್ದಾನೆ. ದೂರನ್ನು ದಾಖಲಿಸಿಕೊಂಡ ಪೊಲೀಸರು ಇದೀಗ ತನಿಖೆ ನಡೆಸುತ್ತಿದ್ದಾರೆ. ನಿಜಕ್ಕೂ ಇಲ್ಲಿ ಏನಾಗಿದೆ ಎಂದು ತನಿಖೆ ನಂತರವಷ್ಟೆ ತಿಳಿಯಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ |ಸಂಸದರನ್ನ ಭೇಟಿ ಮಾಡಲು ಅವಕಾಶ ನೀಡದ ಶಾಸಕರಿಗೆ ಶಾಪ ಹಾಕಿದ ಗ್ರಾಮಸ್ಥರು

Exit mobile version