ಶಿವಮೊಗ್ಗ: ವ್ಯಕ್ತಿಯೊಬ್ಬ ಹೆಂಡತಿಯ ಅಪ್ರಾಪ್ತ ತಂಗಿಯನ್ನು ಗರ್ಭಿಣಿಯನ್ನಾಗಿಸಿದ್ದಲ್ಲದೆ, ಅಕ್ರಮ ಸಂಬಂಧದಿಂದ ಹುಟ್ಟಿದ ಮಗುವನ್ನು ಮನೆಯ ಹಿತ್ತಲಿನಲ್ಲಿ ಹೂತು ಹಾಕಿದ ಹೇಯ ಘಟನೆ ಸಾಗರ ತಾಲೂಕಿನಲ್ಲಿ ನಡೆದಿದೆ.
ಸಾಗರದ ನಿವಾಸಿ ವಿಶ್ವ ಎಂಬಾತನೇ ಈ ಧೂರ್ತ. ಆತ ತನ್ನ ಹೆಂಡತಿಯ ತಂಗಿಯಾಗಿರುವ 17 ವರ್ಷದ ಬಾಲಕಿಯ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ನಡೆಸಿ ಗರ್ಭಿಣಿಯಾಗಿಸಿದ್ದ. ಆತನ ವಿರುದ್ಧ ಈಗ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.
ಸಹಾಯದ ಸೋಗಿನಲ್ಲಿ…
ಆರೋಪಿ ವಿಶ್ವ ಸಾಗರ ತಾಲೂಕಿನ ಯುವತಿಯೊಬ್ಬರನ್ನು ಪ್ರೀತಿಸಿ ಮದುವೆಯಾಗಿದ್ದ. ಬಡ ಕುಟುಂಬಕ್ಕೆ ಸೇರಿದ ಈ ಮಹಿಳೆಗೆ ತಂದೆ ಇಲ್ಲದ ಕಾರಣ, ಆಕೆಯ ತಾಯಿ ಹಾಗೂ ಆಕೆಯ ತಂಗಿಯನ್ನು ಆರೋಪಿ ತನ್ನ ಮನೆಗೆ ಕರೆಸಿಕೊಂಡಿದ್ದ.
ಅವನು ತಮಗೆ ಸಹಾಯ ಮಾಡುತ್ತಿದ್ದಾನೆ ಎಂದು ಪತ್ನಿ, ಆಕೆಯ ತಾಯಿ ಮತ್ತು ತಂಗಿ ಎಲ್ಲರೂ ಕೃತಜ್ಞರಾಗಿದ್ದರು. ಎಲ್ಲರೂ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಈ ನಡುವೆ, ಹೆಂಡತಿಯ ತಂಗಿಯ ಮೇಲೆ ಕಣ್ಣು ಹಾಕಿದ ವಿಶ್ವ ಆಕೆಯ ಜೊತೆ ಸಲುಗೆ ಬೆಳೆಸಿ, ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ನಿರಂತರ ಅತ್ಯಾಚಾರದಿಂದ ಈ ಅಪ್ರಾಪ್ತ ಬಾಲಕಿ ಗರ್ಭಿಣಿಯಾದಳು. ಆದರೆ, ಸಮಾಜದ ಮುಂದೆ ಮಾನಕ್ಕೆ ಅಂಜಿ ಈ ವಿಷಯವನ್ನು ಎಲ್ಲರೂ ಸೇರಿ ಮುಚ್ಚಿಟ್ಟಿದ್ದರು. ಇತ್ತೀಚೆಗೆ ಹೊಟ್ಟೆ ನೋವು ಕಂಡು ಬಂದು ಬಾಲಕಿ ಮನೆಯಲ್ಲಿಯೇ ಮಗುವಿಗೆ ಜನ್ಮ ನೀಡಿದಳು.
ಇದಾದ ಬಳಿಕ ವಿಶ್ವನಿಗೆ ತಲೆ ನೋವು ಶುರುವಾಗಿದೆ. ಆತ ಈ ಮಗುವನ್ನು ತನ್ನದು ಎಂದು ಒಪ್ಪಿಕೊಳ್ಳಲು ಸಿದ್ಧನಿರಲಿಲ್ಲ. ಮಗುವನ್ನು ಎಲ್ಲಾದರೂ ಎಸೆದು ಬರಬೇಕು ಎಂದು ಒತ್ತಾಯಿಸಿದ್ದ. ಆದರೆ, ಬಾಲಕಿ ಒಪ್ಪಲಿಲ್ಲ. ಈ ನಡುವೆ, ಒಂದು ದಿನ ವಿಶ್ವ ಮಗುವನ್ನು ಕೊಂದು ಹಿತ್ತಲಲ್ಲಿ ಹೂತು ಹಾಕಿದ. ಈ ಕೃತ್ಯಕ್ಕೆ ಮನೆಯವರೇ ಬೆಂಬಲ ನೀಡಿದ್ದಾರೆ ಎಂದು ಆಪಾದಿಸಲಾಗಿದೆ.
ಇದೇ ವೇಳೆ ಸಂತ್ರಸ್ತೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ವಿಶ್ವನನ್ನು ಪೋಕ್ಸೊ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಸಹಾಯ ಮಾಡುವ ನೆಪದಲ್ಲಿ ಹೆಂಡತಿಯ ತಂಗಿಯ ಬಾಳನ್ನೇ ಹಾಳು ಮಾಡಲು ಯತ್ನಿಸಿದ ಯುವಕನ ಕೃತ್ಯದ ಬಗ್ಗೆ ಊರಿನಲ್ಲಿ ಆಕ್ರೋಶದ ಮಾತು ಕೇಳಿಬರುತ್ತಿದೆ.
ಇದನ್ನು ಓದಿ | ʻಹಿಂದೂ ಯುವಕರು ಅತ್ಯಾಚಾರ ಮಾಡುವ ಮನಸ್ಥಿತಿಯವರಲ್ಲ.. ಹೀಗಾಗಿ ಆಕೆ ಬಚಾವಾಗಿದ್ದಾಳೆʼ: ಸಿ.ಟಿ.ರವಿ ವಿವಾದಿತ ಹೇಳಿಕೆ