ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಲೋಕಸಭಾ ಚುನಾವಣೆಯ (Lok Sabha Election 2024) ಪ್ರಚಾರಕ್ಕಾಗಿ ಸೋಮವಾರ ಶಿವಮೊಗ್ಗಕ್ಕೆ (Modi in Shivamogga Live) ಅಗಮಿಸಿದ್ದಾರೆ. ಮಲೆನಾಡಿನಲ್ಲಿ ಬಿಜೆಪಿ ಪರ ಚುನಾವಣೆಯ ಹವಾ ಎಬ್ಬಿಸುವುದಕ್ಕಾಗಿ ಬಂದಿರುವ ನರೇಂದ್ರ ಮೋದಿ ಅವರನ್ನು ನೋಡಲು ಶಿವಮೊಗ್ಗ ಅಲ್ಲಮ ಪ್ರಭು ಫ್ರೀಡಂ ಪಾರ್ಕ್‌ನಲ್ಲಿ ಲಕ್ಷಾಂತರ ಜನರು ಬಿರುಬಿಸಿಲನ್ನೂ ಲೆಕ್ಕಿಸದೆ ಕುಳಿತಿದ್ದಾರೆ.
ಶಿವಮೊಗ್ಗ, ದಾವಣಗೆರೆ, ಉಡುಪಿ ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಗಳ ಪ್ರಚಾರಕ್ಕಾಗಿ ಆಯೋಜನೆಗೊಂಡಿರುವ ಸಭೆ ಇದಾಗಿದ್ದು, ಎಲ್ಲ ಜಿಲ್ಲೆಗಳಿಂದ ಜನರು ಆಗಮಿಸುತ್ತಿದ್ದಾರೆ. ಪ್ರಧಾನಿಯವರ ಕಾರ್ಯಕ್ರಮವಾಗಿರುವುದರಿಂದ ಎರಡು ಹಂತಗಳಲ್ಲಿ ತಪಾಸಣೆ ನಡೆಸಿ ಸಾರ್ವಜನಿಕರನ್ನು ಒಳಗೆ ಬಿಡಲಾಗುತ್ತಿದೆ.
ಮೋದಿ ಅವರ ಕಾರ್ಯಕ್ರಮ 3.15ಕ್ಕೆ ಆರಂಭಗೊಳ್ಳಲಿದೆ. ಆದರೆ, ಜನರು ಎರಡು ಗಂಟೆ ಮೊದಲೇ ಸಮಾವೇಶಗೊಂಡಿದ್ದು, ಎಲ್ಲೆಡೆ ಜೈ ಶ್ರೀರಾಮ್, ಜೈ ಮೋದಿ ಎಂಬ ಘೋಷ ವಾಕ್ಯಗಳು ಕೇಳಿಬರುತ್ತಿವೆ.
ಮೋದಿಯಲ್ಲಿ ನಾವು ಅಣ್ಣನನ್ನು ಕಾಣುತ್ತೇವೆ, ಮೋದಿಯಲ್ಲಿ ನಾವು ದೇವರನ್ನ ಕಾಣ್ತೇವೆ. ಮೋದಿಯಲ್ಲಿ ನಾವು ವಿಶ್ವ ನಾಯಕನನ್ನ ಕಾಣ್ತೇವೆ ಎಂದು ಹತ್ತಾರು ಮಹಿಳೆಯರು ಘೋಷಣೆ ಕೂಗುತ್ತಿದ್ದಾರೆ.
ಕಾರ್ಯಕ್ರಮ ಹೇಗಿರುತ್ತದೆ?
ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ತಂಡಗಡಳು ಇದರಲ್ಲಿ ಭಾಗಿಯಾಗಿವೆ. ಮೋದಿ ಅವರು ಮಧ್ಯಾಹ್ನ 2.45ಕ್ಕೆ ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಮಧ್ಯಾಹ್ನ 3:15ಕ್ಕೆ ಅಲ್ಲಮಪ್ರಭು ಮೈದಾನಕ್ಕೆ ಆಗಮಿಸಲಿದ್ದಾರೆ. ಮಧ್ಯಾಹ್ನ 3.15ಕ್ಕೆ ಪ್ರಧಾನಿ ಮೋದಿ ಭಾಷಣ ಆರಂಭಿಸಲಿದ್ದಾರೆ. 4:15ಕ್ಕೆ ವಿಮಾನ ಮೂಲಕ ಕೊಯಮುತ್ತೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ಭಾಷಣಕ್ಕೂ ಮುನ್ನ ವೇದಿಕೆ ಮುಂಭಾಗ ರೋಡ್ ಶೋ ನಡೆಯಲಿದೆ. ಹೀಗಾಗಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಇದನ್ನೂ ಓದಿ : Narendra Modi: ರಾಹುಲ್ ಗಾಂಧಿ ‘ಶಕ್ತಿ’ ಹೇಳಿಕೆಗೆ ಟಕ್ಕರ್; ಸವಾಲು ಸ್ವೀಕಾರ ಎಂದ ಮೋದಿ
ವೇದಿಕೆಯಲ್ಲಿ ಯಾರ್ಯಾರು ಇರುತ್ತಾರೆ?
ವೇದಿಕೆಯಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿ ಬಿವೈ. ರಾಘವೇಂದ್ರ, ದಾವಣಗೆರೆ ಕ್ಷೇತ್ರದ ಗಾಯತ್ರಿ ಸಿದ್ದೇಶ್ವರ್, ಉಡುಪಿ ಕ್ಷೇತ್ರದ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ಕ್ಷೇತ್ರದ ಬ್ರಿಜೇಶ್ ಚೌಟ ಪ್ರಮುಖವಾಗಿ ಭಾಗವಹಿಸಲಿದ್ದಾರೆ.
ಉಳಿದಂತೆ ಆರಗ ಜ್ಞಾನೇಂದ್ರ, ಕೇಂದ್ರ ಸಚಿವ ಎ ನಾರಾಯಣಸ್ವಾಮಿ, ಸಿ.ಟಿ ರವಿ, ವಿ ಸುನೀಲ್ ಕುಮಾರ್, ಭೈರತಿ ಬಸವರಾಜ್, ಡಿ ಎಚ್ ಶಂಕರಮೂರ್ತಿ, ಜಿಎಂ ಸಿದ್ದೇಶ್ವರ್, ಎನ್ ರವಿಕುಮಾರ್, ಗುರುರಾಜ್ ಗಂಟಿಹೊಳಿ, ಶಾಸಕ ಚನ್ನಬಸಪ್ಪ ಸೇರಿದಂತೆ 43 ಮಂದಿ ವೇದಿಕೆಯಲ್ಲಿ ಇರಲಿದ್ದಾರೆ.
ಡಾ.ಸಿ.ಎನ್ ಮಂಜುನಾಥ್ ಇಂದು ಬಿಜೆಪಿಗೆ ಸೇರ್ಪಡೆ
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಟಿಕೆಟ್ ಪಡೆದಿರುವ ಜನಪ್ರಿಯ ವೈದ್ಯರಾದ ಡಾ. ಸಿ.ಎನ್. ಮಂಜುನಾಥ್ (Dr CN Manjunath) ಅವರು ಕೂಡಾ ವೇದಿಕೆಯಲ್ಲಿ ಇರಲಿದ್ದಾರೆ. ಅವರು ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಬಿಜೆಪಿ ಸೇರಲಿದ್ದಾರೆ. ಇದೇ ವೇಳೆ ಬಿಜೆಪಿಯ ಮಿತ್ರ ಪಕ್ಷವಾದ ಜೆಡಿಎಸ್‌ನ ಶಾಸಕಿ ಶಾರದ ಪೂರ್ಯಾ ನಾಯಕ್ ಅವರಿಗೆ ವೇದಿಕೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.