ಶಿವಮೊಗ್ಗ: ಕಳೆದ ಫೆಬ್ರವರಿಯಲ್ಲಿ ನಡೆದ ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಇಂದು ನಗರದ ವಿವಿಧೆಡೆ ಸರ್ಚ್ ಆಪರೇಷನ್ ನಡೆಸಿದ್ದಾರೆ. ಈ ವೇಳೆ ಹಾರ್ಡ್ ಡಿಸ್ಕ್ ಸೇರಿದಂತೆ ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.
ದೆಹಲಿ, ಕೇರಳ, ಅಂಧ್ರ ಪ್ರದೇಶ ಸೇರಿದಂತೆ ವಿವಿಧೆಡೆಯ 30 ಮಂದಿ ಎನ್‌ಐಎ ಅಧಿಕಾರಿಗಳು ಈ ಶೋಧ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಜಿಲ್ಲೆಯ 60 ಪೊಲೀಸ್ ಸಿಬ್ಬಂದಿ ಈ ಶೋಧ ಕಾರ್ಯಕ್ಕೆ ಸಹಕರಿಸಿದ್ದರು. ಒಟ್ಟು 13 ಸ್ಥಳದಲ್ಲಿ ಶೋಧ ಕಾರ್ಯ ನಡೆಸಲಾಗಿದೆ.
ಈ ಕುರಿತಂತೆ ಎನ್ಐಎ ಪತ್ರಿಕಾ ಪ್ರಕಟಣೆ ನೀಡಿದ್ದು, ಶೋಧ ಕಾರ್ಯ ನಡೆಸಿದ ಸಂದರ್ಭ ಮೊಬೈಲ್ ಫೋನ್, ಸಿಮ್ ಕಾರ್ಡ್‌ಗಳು, ಮೆಮೊರಿ ಕಾರ್ಡುಗಳು, ಹಾರ್ಡ್ ಡಿಸ್ಕ್ ಸೇರಿದಂತೆ ಡಿಜಿಟಲ್ ಸಾಕ್ಷ್ಯಗಳು ಲಭ್ಯವಾಗಿವೆ. ಇದರ ಜತೆಗೆ ಹಲವು ದಾಖಲೆಗಳು ಕೂಡ ಸಿಕ್ಕಿವೆ ಎಂದು ತಿಳಿಸಿದೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಸಲಾಗುತ್ತದೆ ಎಂದು ಎನ್‌ಐಎ ಹೇಳಿದೆ.
ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಮಾರ್ಚ್ 2 ರಂದು ಕರ್ನಾಟಕ ಪೊಲೀಸರು 10 ಜನರನ್ನು ಬಂಧಿಸಿದ್ದರು. ಬಂಧಿತರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ (ಯುಎಪಿಎ), 1967ರಡಿ ಎಫ್‌ಐಆರ್ ದಾಖಲಾಗಿದೆ.
ಇದನ್ನೂ ಓದಿ|ಐಸಿಸ್‌ಗೆ ಯುವಕರನ್ನು ಸೇರಿಸುವ ಉಗ್ರರ ಜಾಲ ಬೆಂಗಳೂರಿನಲ್ಲೂ ಸಕ್ರಿಯ, ಎನ್‌ಐಎ ತನಿಖೆಯಲ್ಲಿ ಸ್ಫೋಟಕ ವಿವರ