Site icon Vistara News

ಸಹಚರರಿಂದ ಮೀನುಗಾರರ ಮೇಲೆ ಹಲ್ಲೆ: ನಿಹಾಲ್ ಕೋಬ್ರಾ ಬಂಧನ

ನಿಹಾಲ್ ಕೋಬ್ರಾ

ತೀರ್ಥಹಳ್ಳಿ: ಮಂಡಗದ್ದೆ ನೆಲ್ಲಿಸರ ಬಡಪಾಯಿ ಮೀನುಗಾರರ ಮೇಲೆ ಕೆಲವು ದಿನಗಳ ಹಿಂದೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಇದೀಗ ಇಂದಿರಾ ನಗರ ನಿವಾಸಿ ನಿಹಾಲ್ ಕೋಬ್ರಾ ಮತ್ತು ತಂಡವನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಠಿಣ ಕಾರ್ಯಾಚರಣೆ ಕೈಗೊಂಡ ಡಿವೈಎಸ್ಪಿ ಶಾಂತವೀರ ನೇತೃತ್ವದ ತಂಡ 3 ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ನಿಖಿಲ್‌ ಕೋಬ್ರಾ ಮತ್ತಿಬ್ಬರು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ಮುಡುಬಾ ಸಮೀಪ, ಗ್ಯಾಂಗ್​ವೊಂದು, ಮೀನುಗಾರರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿತ್ತು. ಮಾರಣಾಂತಿಕವಾಗಿ ನಡೆದ ಹಲ್ಲೆಯಲ್ಲಿ ನಿಹಾಲ್‌ ಕೋಬ್ರಾ ಮತ್ತು ಆತನ ಗ್ಯಾಂಗ್‌ನ ಕೈವಾಡ ಇದೆ ಎನ್ನಲಾಗಿತ್ತು.

ಇದನ್ನೂ ಓದಿ | ಶಿವಮೊಗ್ಗದಲ್ಲಿ ತುರ್ತು ಪರಿಹಾರ ಕೈಗೊಳ್ಳಲು ಸಚಿವ ನಾರಾಯಣ ಗೌಡ ಸೂಚನೆ

ಮೀನುಗಾರರು ಮೀನು ಹಿಡಿದು ವಾಪಸ್ಸು ಬರುತ್ತಿದ್ದಾಗ ರಸ್ತೆಗೆ ಅಡ್ಡಲಾಗಿ ನಿಂತಿದ್ದ ನಿಹಾಲ್‌​ ಮತ್ತವನ ಗ್ಯಾಂಗ್‌, ಅಲ್ಲಿ ಕಿರಿಕ್‌​ ಮಾಡಿ, ನಂತರ ಅಟ್ಟಾಡಿಸಿಕೊಂಡು ಬಂದು ಹೊಡೆದಿದ್ದರು. ಈ ಕುರಿತು ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಗಂಟೆಗೊಂದು ಸ್ಥಳ ಬದಲಾಯಿಸುತ್ತಿದ್ದ ಕೋಬ್ರಾ

ಆರೋಪಿಗಳ ಬಂಧನಕ್ಕಾಗಿ ಡಿವೈಎಸ್ಪಿ ಶಾಂತವೀರ ಅವರು ತೀರ್ಥಹಳ್ಳಿ ಸರ್ಕಲ್‌ ಇನ್ಸ್‌ಪೆಕ್ಟರ್‌ ಪ್ರವೀಣ್‌ ನೀಲಮ್ಮನವರ್‌, ತೀರ್ಥಹಳ್ಳಿ ಪೊಲೀಸ್‌ ಠಾಣಾಧಿಕಾರಿ ಅಶ್ವತ್ಥ್‌ ಗೌಡ , ಮಳೂರು ಠಾಣೆ ಪೊಲೀಸ್‌ ಅಧಿಕಾರಿ ನವೀನ್‌ ಮಠಪತಿ, ಆಗುಂಬೆ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ ಶಿವಕುಮಾರ್ ನೇತೃತ್ವದಲ್ಲಿ ತಂಡಗಳನ್ನು ರಚಿಸಿ ಮುಖ್ಯ ಆರೋಪಿ ನಿಹಾಲ್‌ ಕೋಬ್ರಾನನ್ನು ಬಂಧಿಸುವಲ್ಲಿ ನಿರಂತರ ಕಾರ್ಯಾಚರಣೆ ನಡೆಸಿದ್ದರು.

ಗಂಟೆಗೊಂದು ಸ್ಥಳ ಬದಲಾವಣೆ ಮಾಡುತ್ತಿದ್ದ ಆರೋಪಿ ಕೋಬ್ರಾ ಇನ್ನೇನು ಪೊಲೀಸರಿಗೆ ಸಿಗದೇ ನಿರೀಕ್ಷಣಾ ಜಾಮೀನು ಪಡೆಯಲು ಮುಂದಾಗುತ್ತಾನೆ ಎಂದು ಮಾಹಿತಿ ಪಡೆದ ತಂಡ ಆರೋಪಿ ಕೋಬ್ರಾ ಬೆಂಗಳೂರಿನಲ್ಲಿ ಇರುವುದನ್ನು ಪತ್ತೆ ಹಚ್ಚಿದರು.
ಪೊಲೀಸ್ ತಂಡ ಹಿಂಬಾಲಿಸುತ್ತಿರುವುದನ್ನು ಗಮನಿಸಿದ ಆತ ಗಂಟೆಗೊಂದು ಸ್ಥಳ ಬದಲಾಯಿಸಲು ಮುಂದಾದಾಗ, ಬೆನ್ನು ಬಿಡದ ಡಿವೈಎಸ್ಪಿ ಶಾಂತವೀರ ತಂಡ ಕಡೂರು ಸಮೀಪ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು.

ಇದನ್ನೂ ಓದಿ | ಹೀಗೂ ಉಂಟೇ! ಹಾಸನ ಪೊಲೀಸರಿಂದ ಎರಡು ಹಸುಗಳ ಬಂಧನ

Exit mobile version