ಶಿವಮೊಗ್ಗ: ಶಿವಮೊಗ್ಗ ನಗರದ ಪ್ರತಿಷ್ಠಿತ ರಾಷ್ಟ್ರೀಯ ಶಿಕ್ಷಣ ಸಮಿತಿಯ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಮೇ 21ರಂದು ಜಾಗತಿಕ ಹಳೆ ವಿದ್ಯಾರ್ಥಿಗಳ ಸಮ್ಮಿಲನ – ‘ ನೆನಪಿನ ಅಂಗಳ 2022 ‘ ಎಂಬ ಕಾರ್ಯಕ್ರಮ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಪ್ರಾಂಶುಪಾಲ ಡಾ.ಕೆ. ನಾಗೇಂದ್ರಪ್ರಸಾದ್, 1980ರಲ್ಲಿ ಸತ್ಯ ಮೇವ ಜಯತೆ ಎಂಬ ಲಾಂಛನದೊಂದಿಗೆ ಜೆ.ಎನ್.ಎನ್. ಎಂಜಿನಿಯರಿಂಗ್ ಕಾಲೇಜು ಪ್ರಾರಂಭಗೊಂಡಿದೆ. ಈವರೆಗೆ ಸುಮಾರು 17000ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮುಗಿಸಿ ಯಶಸ್ಸಿನ ಹಾದಿಯೆಡೆಗೆ ಸಾಗಿದ್ದಾರೆ. ಅಂತಹ ಎಲ್ಲಾ ಹಳೆಯ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸುವುದು ಕಾರ್ಯಕ್ರಮದ ಆಶಯವಾಗಿದೆ ಎಂದು ಹೇಳಿದರು.
ಮೇ 21ರಂದು ಬೆಳಗ್ಗೆ 9.30ಕ್ಕೆ ಆಂಧ್ರಪ್ರದೇಶ ಸರಕಾರದ ಕೃಷಿ, ಸಹಕಾರ, ಮಾರುಕಟ್ಟೆ ಮತ್ತು ಆಹಾರ ಸಂಸ್ಕರಣಾ ಇಲಾಖೆಯ ನೂತನ ಸಚಿವರಾದ ಕಾಕನಿ ಗೋವರ್ಧನ ರೆಡ್ಡಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಇವರು 1989ನೇ ಇಸವಿಯ ಬ್ಯಾಚಿನ ಹಳೆ ವಿದ್ಯಾರ್ಥಿ. ರಾಷ್ಟ್ರೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿಗಳಾದ ಡಾ. ಪಿ. ನಾರಾಯಣ್ ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ. ವಿಧಾನ ಪರಿಷತ್ತಿನ ಸದಸ್ಯ ಡಿ.ಎಸ್. ಅರುಣ್, ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್. ನಾರಾಯಣರಾವ್, ಕಾರ್ಯದರ್ಶಿ ಎಸ್.ಎನ್.ನಾಗರಾಜ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮಧ್ಯಾಹ್ನ 2 ಘಂಟೆಗೆ ಹಳೆಯ ವಿದ್ಯಾರ್ಥಿಗಳ ಸಂಘದ ಸರ್ವ ಸದಸ್ಯರ ಸಭೆ ನಡೆಯಲಿದ್ದು ನಂತರ ಹಳೆಯ ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಪ್ರಸ್ತುತ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಮೂಲಕ ಹಳೆ ಬೇರು ಹೊಸ ಚಿಗುರಿನ ಸಂಗಮ ವೇದಿಕೆಯಲ್ಲಿ ನಡೆಯಲಿದೆ ಎಂದು ಹೇಳಲಾಗಿದೆ.
ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಳೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಉದ್ಯಮಶೀಲತೆ ಕ್ಷೇತ್ರ, ಉದ್ಯೋಗ ಕ್ಷೇತ್ರ( ಪುರುಷ/ಮಹಿಳೆ), ಶೈಕ್ಷಣಿಕ, ಸಮಾಜ, ತಾಂತ್ರಿಕ ಹಾಗೂ ಸಂಶೋಧನಾ ಕ್ಷೇತ್ರ ಸೇರಿದಂತೆ ವಿದ್ಯಾಸಂಸ್ಥೆಯ ಅಭಿವೃದ್ಧಿಗೆ ಕೊಡುಗೆ ನೀಡಿ ಸಾಧನೆಗೈದ ಹಳೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಡಾ.ಸುರೇಂದ್ರ.ಎಸ್. ಉಪಾಧ್ಯಕ್ಷ ಎಂ.ಆರ್.ರಾಜೇಂದ್ರಪ್ರಸಾದ್, ಕಾರ್ಯದರ್ಶಿ ಡಾ.ಕೆ.ಎಂ.ಬಸಪ್ಪಾಜಿ, ಪಿ.ಆರ್.ಓ. ಸಿ.ಎಂ.ನೃಪತುಂಗ ಉಪಸ್ಥಿತರಿದ್ದರು.
ಇದನ್ನೂ ಓದಿ: ಮಿನಿ ಒಲಂಪಿಕ್ಸ್ ಪಂದ್ಯದಲ್ಲಿ ಶಿವಮೊಗ್ಗದ ಕ್ರೀಡಾಪಟುಗಳ ಗೆಲುವು