ಶಿವಮೊಗ್ಗ: ಪ್ಲೈವುಡ್ ಕೆಲಸಕ್ಕೆ ತೆರಳಿದ್ದ ಕಾರ್ಮಿಕರೊಬ್ಬರು ಮೆಷಿನ್‌ನ ಬ್ಲೇಡ್ ಕುತ್ತಿಗೆ ಕೊಯ್ದ ಪರಿಣಾಮ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಮಾಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ಸಂಜೆ ನಡೆದ ದುರ್ಘಟನೆ ಇದಾಗಿದೆ. ಮುಂಡಾಸ್ ಕೊಪ್ಪ ಗ್ರಾಮದ ಆದಿತ್ಯ ಎಂಬವರು ಮೃತಪಟ್ಟ ಕಾರ್ಮಿಕ. ಅಂಗಡಿ ನಿರ್ಮಾಣಕ್ಕೆ ಬೆಜ್ಜುವಳ್ಳಿ ಗ್ರಾಮದ ಲೋಕೇಶ್ ಎಂಬವರ ಅಂಗಡಿಗೆ ಫ್ಲೈವುಡ್ ಕೆಲಸಕ್ಕೆ ಆದಿತ್ಯ ತೆರಳಿದ್ದರು. ಮೆಷಿನ್‌ನಿಂದ ಫ್ಲೈವುಡ್ ಕಟ್ ಮಾಡುವಾಗ ದುರಂತ ನಡೆದಿದೆ. ಮೆಷಿನ್‌ನ ಬ್ಲೇಡ್ ಆದಿತ್ಯನ ಕುತ್ತಿಗೆಯನ್ನೇ ಕೊಯ್ದಿದೆ. ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಆದಿತ್ಯ ಸಾವನ್ನಪ್ಪಿದ್ದಾರೆ. ಪಿಐ ನವೀನ್ ಕುಮಾರ್ ಮಠಪತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.