Site icon Vistara News

Rameswaram cafe: ಬಾಂಬ್‌ ಬ್ಲಾಸ್ಟ್‌ ಮಾಡಿದವರು ಬಿಜೆಪಿ ನಾಯಕರಾದರೂ ಗುಂಡಿಟ್ಟು ಕೊಲ್ಲಿ- ಬೇಳೂರು ಗೋಪಾಲಕೃಷ್ಣ

rameshwaram cafe bengaluru incident MLA Belur Gopalakrishna

ಶಿವಮೊಗ್ಗ: ರಾಜ್ಯ ರಾಜಧಾನಿ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe Blast) ನಡೆಸಿದ ಬಾಂಬ್‌ ಸ್ಫೋಟ (Blast in Bengaluru) ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ. ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿ ಮೂಲದ ವ್ಯಕ್ತಿಯನ್ನು ವಿಚಾರಣೆ ನಡೆಸಲಾಗುತ್ತಿದೆ. ಈ ಮಧ್ಯೆ ಬಾಂಬ್ ಬ್ಲಾಸ್ಟ್ ಮಾಡಿದವರನ್ನು ಗುಂಡಿಕ್ಕಿ ಕೊಲ್ಲಬೇಕು, ಯಾರನ್ನು ಬಿಡಬಾರದು ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಪ್ರತಿಕ್ರಿಯಿಸಿದ್ದಾರೆ.

ತೀರ್ಥಹಳ್ಳಿ ಮೊಬೈಲ್‌ ಶಾಪ್‌ ಮೇಲೆ ಎನ್‌ಐಎ ದಾಳಿ

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಅಧಿಕಾರಿಗಳಿಂದ ತನಿಖೆಯು ಮುಂದುವರಿದಿದೆ. ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಅಧಿಕಾರಿಗಳು ತೀರ್ಥಹಳ್ಳಿಯಲ್ಲಿ ಮತ್ತೆ ದಾಳಿ ನಡೆಸಿದ್ದಾರೆ. ತೀರ್ಥಹಳ್ಳಿಯ ಮೊಬೈಲ್ ಅಂಗಡಿವೊಂದಕ್ಕೆ ಅಧಿಕಾರಿಗಳು ಶುಕ್ರವಾರ ಭೇಟಿ ನೀಡಿದ್ದಾರೆ. ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಹಕಾರ ನೀಡಿದ್ದಾರೆ ಎನ್ನಲಾದ ತೀರ್ಥಹಳ್ಳಿ ಮೂಲದ ವ್ಯಕ್ತಿಯ ವಿಚಾರಣೆ ನಡೆಸಿದ್ದಾರೆ.

ಗುಂಡಿಟ್ಟು ಕೊಲ್ಲಬೇಕು-ಬೇಳೂರು ಗೋಪಾಲಕೃಷ್ಣ

ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಸ್ತಾರ ನ್ಯೂಸ್‌ಗೆ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಪ್ರತಿಕ್ರಿಯಿಸಿದ್ದಾರೆ. ಸ್ಫೋಟ ಪ್ರಕರಣದಲ್ಲಿ ಬಿಜೆಪಿ ಮುಖಂಡನ ಬಂಧನ ಅಚ್ಚರಿ ಮೂಡಿಸಿದೆ. ಬಿಜೆಪಿ ಅಥವಾ ಕಾಂಗ್ರೆಸ್‌ ಯಾರೇ ಆಗಿರಲಿ ಅವರನ್ನು ಗುಂಡಿಟ್ಟು ಹೊಡೆಯಿರಿ. ಅಷ್ಟೇ ಅಲ್ಲ ಪಾಕಿಸ್ತಾನ ಜಿಂದಾಬಾದ್‌ ಎಂದರು ಡಮ್ ಅನ್ನಿಸಬೇಕು. ಬಾಂಬ್ ಬ್ಲಾಸ್ಟ್ ಮಾಡಿದವರನ್ನು ಗುಂಡಿಕ್ಕಿ ಕೊಲ್ಲಬೇಕು, ಯಾರನ್ನು ಬಿಡಬಾರದು ಎಂದಿದ್ದಾರೆ.

ಇದನ್ನೂ ಓದಿ: Blast in Bangalore : ರಾಮೇಶ್ವರಂ ಕೆಫೆ ಸ್ಫೋಟದ ಶಂಕಿತರ ಸುಳಿವು ಕೊಟ್ಟರೆ 10 ಲಕ್ಷ ರೂ. ಇನಾಮು; ಇಲ್ಲಿದೆ ಉಗ್ರರ ಪೋಟೊ ಸಮೇತ ವಿವರ

ರಾಮೇಶ್ವರಂ ಕೆಫೆ ಸ್ಫೋಟ; 6 ಸಾವಿರ ರೂ. ವ್ಯಯಿಸಿ ಬಾಂಬ್‌ ತಯಾರಿ, ಆನ್‌ಲೈನ್‌ನಲ್ಲೇ ಖರೀದಿ!

ಬೆಂಗಳೂರು: ರಾಜ್ಯ ರಾಜಧಾನಿಯ ವೈಟ್‌ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe Blast) ನಡೆಸಿದ ಬಾಂಬ್‌ ಸ್ಫೋಟ (Blast in Bengaluru) ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ದುಷ್ಕರ್ಮಿಗಳು ಕೇವಲ 5-6 ಸಾವಿರ ರೂಪಾಯಿ ಖರ್ಚು ಮಾಡಿ ಬಾಂಬ್‌ ತಯಾರಿಸಿದ್ದರು ಎಂದು ಪ್ರರಕಣದ ಪ್ರಮುಖ ಆರೋಪಿ ಮುಜಾಮಿಲ್‌ ಷರೀಫ್‌ನನ್ನು ಎನ್‌ಐಎ ಅಧಿಕಾರಿಗಳು (NIA Officials) ವಿಚಾರಣೆ ಮಾಡುವ ವೇಳೆ ಭೀಕರ ಮಾಹಿತಿ ಬಹಿರಂಗವಾಗಿದೆ.

ದುಷ್ಕರ್ಮಿಗಳು ಆನ್‌ಲೈನ್‌ನಲ್ಲಿ ಹಲವು ವಸ್ತುಗಳನ್ನು ಖರೀದಿಸಿ ಎರಡು ತಿಂಗಳಲ್ಲಿ ಬಾಂಬ್‌ ತಯಾರಿಸಿದ್ದರು. ಕಚ್ಚಾ ವಸ್ತುಗಳನ್ನು ಅವರು ಆನ್‌ಲೈನ್‌ ಮೂಲಕವೇ ಖರೀದಿಸಿದ್ದರು. ಬಾಂಬ್‌ ತಯಾರಿಸಲು ಬೇಕಾಗುವ ಡೆಟೋನೇಟರ್‌, ಟೈಮರ್‌, ಬ್ಯಾಟರಿ, ರಂಜಕ (ಬೆಂಕಿ ಕಡ್ಡಿಯಿಂದ ತೆಗೆದಿರುವುದು) ಸೇರಿ ಹಲವು ವಸ್ತುಗಳನ್ನು ಅವರು ಆನ್‌ಲೈನ್‌ ಮೂಲಕ ಖರೀದಿಸಿದ್ದಾರೆ. ನೆಟ್‌, ಬೋಲ್ಟ್‌ ಮತ್ತು ವೈರ್‌ಗಳನ್ನು ಅಂಗಡಿಗಳಿಂದಲೇ ನೇರವಾಗಿ ಖರೀದಿಸಿದ್ದರು ಎಂದು ಮುಜಾಮಿಲ್‌ ಷರೀಫ್‌ ಬಾಯಿಬಿಟ್ಟಿದ್ದಾನೆ.

ಯಾವುದಕ್ಕೆ ಎಷ್ಟು ರೂ. ಖರ್ಚು?

ಡೆಟೊರೇನಟರ್ 1300-1500 ರೂ.
ಬ್ಯಾಟರಿ 400-500 ರೂ.
ಟೈಮರ್500-700 ರೂ.
ರಂಜಕ200-300 ರೂ.
ನಟ್‌ ಬೋಲ್ಟ್300-500 ರೂ.
ವೈರ್‌ಗಳು200-300 ರೂ.
ಸ್ಫೋಟಕ ಬಳಸಿದ್ದ ಬ್ಯಾಗ್‌400-500 ರೂ.

ತಯಾರಿಸಿದ್ದು ಯಾರು?

ರಾಮೇಶ್ವರಂ ಕೆಫೆಯಲ್ಲಿ ಸ್ಫೋಟಿಸಿದ ಬಾಂಬ್‌ ತಯಾರಿಸಿದ್ದು ಯಾರು ಎಂಬುದರ ಕುರಿತು ಮುಜಾಮಿಲ್‌ ಷರೀಫ್‌ ಬಾಯಿಬಿಟ್ಟಿಲ್ಲ. ಮುಸ್ಸಾವಿರ್ ಶಾಜಿಬ್ ಹುಸೇನ್‌ ತಯಾರಿಸಿದನಾ? ಅಬ್ದುಲ್‌ ಮತೀನ್‌ ತಾಹಾ ಏನಾದರೂ ರೆಡಿ ಮಾಡಿದ್ದಾನಾ ಅಥವಾ ಬೇರೆ ಯಾರಾದರೂ ತಯಾರಿಸಿ ಕೊಟ್ಟಿದ್ದಾರಾ ಎಂಬುದು ಎನ್‌ಐಎಗೆ ನಿಖರವಾಗಿ ಮಾಹಿತಿ ದೊರೆತಿಲ್ಲ. ಹಾಗಾಗಿ, ಅಧಿಕಾರಿಗಳು ಮುಜಾಮಿಲ್‌ ಷರೀಫ್‌ನನ್ನು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಸುಳಿವು ನೀಡಿದವರಿಗೆ ಬಹುಮಾನ

ಪ್ರಕರಣದ ಆರೋಪಿಯೊಬ್ಬನನ್ನು ಬಂಧಿಸಿದ ಬಳಿಕ, ತಲೆಮರೆಸಿಕೊಂಡಿರುವ ಇತರ ಇಬ್ಬರು ಆರೋಪಿಗಳ ಬಗ್ಗೆ ಯಾವುದೇ ರೀತಿಯ ಮಾಹಿತಿ ನೀಡುವವರಿಗೆ 10 ಲಕ್ಷ ರೂ.ಗಳ ನಗದು ಬಹುಮಾನವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಘೋಷಿಸಿದೆ. ಪತ್ತೆ ಮಾಡುವ ಉದ್ದೇಶಕ್ಕಾಗಿ ಎನ್​ಐಎ ಇಬ್ಬರೂ ಶಂಕಿತರ ಮೂಲ ವಿವರಗಳನ್ನು ನೀಡಿದೆ ಮತ್ತು ಆರೋಪಿಗಳನ್ನು ಬಂಧಿಸಲು ಸಾರ್ವಜನಿಕರ ನೆರವು ಕೋರಿದೆ.

ಇದನ್ನೂ ಓದಿ: Rameswaram cafe: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್; ಮುಖ್ಯ ಸಂಚುಕೋರ NIA ಬಲೆಗೆ

ಸ್ಫೋಟ ನಡೆಸಿದ ಪ್ರಮುಖ ಆರೋಪಿಯನ್ನು ಮುಸ್ಸಾವಿರ್ ಶಾಜಿಬ್ ಹುಸೇನ್ ಎಂದು ತನಿಖಾ ಸಂಸ್ಥೆ ಗುರುತಿಸಿದ್ದು, ಆತನ ಚಲನವಲನಗಳು ರಾಮೇಶ್ವರಂ ಕೆಫೆಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ. ಎನ್ಐಎ ಪ್ರಕಾರ, ಆತ ಸುಮಾರು 6 ಅಡಿ 2 ಇಂಚು ಎತ್ತರವಿರುವ 30 ವರ್ಷದ ವ್ಯಕ್ತಿ. ಬಾಲಕರ ಹಾಸ್ಟೆಲ್, ಪಿಜಿ ಅಥವಾ ಯಾವುದೇ ಕಡಿಮೆ ಬಜೆಟ್ ಹೋಟೆಲ್​ಗಳಲ್ಲಿ ವಾಸಿಸುತ್ತಿದ್ದಾನೆ. ಮೊಹಮ್ಮದ್ ಜುನೇದ್ ಸಯೀದ್ ಹೆಸರಿನಲ್ಲಿ ನಕಲಿ ಚಾಲನಾ ಪರವಾನಗಿ ಬಳಸುತ್ತಿದ್ದಾನೆ ಎಂದೂ ತನಿಖಾಧಿಕಾರಿಗಳು ಹೇಳಿದ್ದಾರೆ. ಆರೋಪಿ ತನ್ನ ಮೂಲ ಗುರುತನ್ನು ಮರೆಮಾಚಲು ಮುಖಗವಸು, ನಕಲಿ ಗಡ್ಡ ಅಥವಾ ವಿಗ್ ಧರಿಸುತ್ತಾನೆ ಎಂದು ಹೇಳಿದೆ.

ಸ್ಫೋಟದ ಇನ್ನೋರ್ವ ಆರೋಪಿ ಅಬ್ದುಲ್ ಮತೀನ್ ಅಹ್ಮದ್ ತಾಹಾ, ಸ್ಫೋಟ ನಡೆಸಲು ಮುಸ್ಸಾವಿರ್​ಗೆ ಸಹಾಯ ಮಾಡಿದ್ದನೆಂದು ಹೇಳಲಾಗಿದ್ದು, ಆತನಿಗೂ ಹುಡುಕಾಟ ನಡೆಯುತ್ತಿದೆ. ಈತ ತನ್ನ ಮೂಲ ಗುರುತನ್ನು ಮರೆಮಾಚಲು ವಿಘ್ನೇಶ್ ಡಿ ಮತ್ತು ಸುಮಿತ್ ಎಂಬ ಹಿಂದೂ ಹೆಸರನ್ನೂ ಬಳಸುತ್ತಿದ್ದಾನೆ ಎಂದು ಎನ್​​ಐಎ ಹೇಳಿದೆ. ಆತ ಬಹುಶಃ ಹುಡುಗರ ಹಾಸ್ಟೆಲ್ ಗಳು, ಪಿಜಿಗಳು ಅಥವಾ ಯಾವುದೇ ಕಡಿಮೆ ಬಜೆಟ್ ಹೋಟೆಲ್ ಗಳಲ್ಲಿ ವಾಸಿಸುತ್ತಿದ್ದಾನೆ ಎಂದು ಹೇಳಿದ್ದಾರೆ. ಇಬ್ಬರೂ ಆರೋಪಿಗಳು ತೀರ್ಥಹಳ್ಳಿ ಮೂಲದವರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version