ಶಿವಮೊಗ್ಗ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಅಂಗವಾಗಿ ಶಿವಮೊಗ್ಗ ಜಿಲ್ಲೆಯ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ 10 ನೌಕರರಿಗೆ ಸರ್ವೋತ್ತಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಏಪ್ರಿಲ್ 21ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಗೌರವಿಸಲ್ಪಟ್ಟ ನೌಕರರಲ್ಲಿ ಯುಟಿಪಿ ಮುಖ್ಯ ಇಂಜಿನಿಯರ್ ಕಚೇರಿ ಕರ್ನಾಟಕ ನೀರಾವರಿ ನಿಗಮದ ತಾಂತ್ರಿಕ ಸಹಾಯಕರಾದ ಎಚ್. ಜಿ. ಕೃಷ್ಣಪ್ರಸಾದ್ ಸಹ ಒಬ್ಬರು.
ಚಿಕ್ಕಮಗಳೂರು ಜಿಲ್ಲೆ, ಶೃಂಗೇರಿ ತಾಲೂಕು ಹುಲಿಮನೆ ಹೊಸಕೊಪ್ಪದ ಒಂದು ಸಣ್ಣ ಹಳ್ಳಿ ಗ್ರಾಮೀಣ ಭಾಗದಿಂದ ಬಂದವರು ಕೃಷ್ಣಪ್ರಸಾದ್. ವಿದ್ಯಾಭ್ಯಾಸ ಕನ್ನಡ ಮಾಧ್ಯಮ ಶಾಲೆಯಲ್ಲಿ ಮತ್ತು ಕಾಲೇಜು ಶಿಕ್ಷಣ ಶೃಂಗೇರಿಯಲ್ಲಿ. ನಂತರ ಇಂಜಿನಿಯರ್ ಪದವಿಯನ್ನು ಮಾಡಿದ್ದು ತುಮಕೂರಿನ ಸಿದ್ದಗಂಗಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ. ಬಹಳ ಕಷ್ಟಪಟ್ಟು ಛಲದಿಂದ ಓದಿ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಉತ್ತಮ ಅಂಕದೊಂದಿಗ ತೆರ್ಗಡೆ ಹೊಂದಿ ಜಲ ವಿಜ್ಞಾನದ ವಿಷಯದಲ್ಲಿ ಬಂಗಾರದ ಪದಕ ಪಡೆದರು.
ಕೃಷ್ಣಪ್ರಸಾದ್ ಅವರಿಗೆ ವಾಟರ್ ರಿಸೋರ್ಸ್ ವಿಷಯದಲ್ಲಿ ಗೋಲ್ಡ್ ಮೆಡಲ್ ಕೂಡ ಲಭಿಸಿತು. ಇಲಾಖೆಯಲ್ಲಿ ಡೈರೆಕ್ಟ್ ಅಪಾಯಿಂಟ್ ಕೂಡ ಆಯ್ತು. 3-4 ವರ್ಷ ಗುಲ್ಬರ್ಗ ಕೆಂಭಾವಿ “ಅಪ್ಪರ್ ಕೃಷ್ಣ ಪ್ರಾಜೆಕ್ಟ್”ನಲ್ಲಿ ಅಸಿಸ್ಟೆಂಟ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿ ನಂತರ 2006 ರಿಂದ ಶಿವಮೊಗ್ಗದಲ್ಲಿ ಯುಟಿಪಿ ಮುಖ್ಯ ಇಂಜಿನಿಯರ್ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 2019 ರಲ್ಲಿ ತಾಂತ್ರಿಕ ಸಹಾಯಕರಾಗಿ ಬಡ್ತಿ ಹೊಂದಿ ಕೆಲಸ ನಿರ್ವಹಿಸುತ್ತಿದ್ದಾರೆ.
ಕೃಷ್ಣಪ್ರಸಾದ್ ಹೇಳಿದ ಮಾತು “ನಾನು ಒಬ್ಬನೇ ಸಾಧನೆ ಮಾಡಿರುವುದು ಅಲ್ಲ. ಇದು ಕೆಳಗಿನ ಅಧಿಕಾರಿಗಳು ಮತ್ತು ಮೇಲಿನ ಹಿರಿಯ ಅಧಿಕಾರಿಗಳ ಜತೆಗೆ ಸೇರಿ ಮಾಡಿದ ಕೆಲಸಗಳು ಹಾಗಾಗಿ ಇಷ್ಟು ವರ್ಷ ಇಲ್ಲಿದ್ದೀನಿ. ಸಾಧನೆ ಮಾಡಿದ್ದೀನಿ ಅನ್ನೋ ದೃಷ್ಟಿಯಿಂದ ಗುರುತಿಸಿದರೆ ಅಷ್ಟೇ. ನನ್ನದೆ ಆದಂಥಹ ವೈಯಕ್ತಿಕ ಸಾಧನೆ ಯಾವುದೂ ಇಲ್ಲ”. ಕೃಷ್ಣಪ್ರಸಾದ್ ಅವರ ಕೌಟುಂಬಿಕ ಹಿನ್ನೆಲೆ ಹೇಳುವುದಾದರೆ ಅವರದ್ದು ಕೃಷಿ ಕುಟುಂಬ. ಕೇವಲ ಅರ್ಧ ಎಕರೆ ಜಮೀನಿನಲ್ಲಿ ಜೀವನ ನಿರ್ವಹಣೆ ಸಾಧ್ಯವಿಲ್ಲವೆಂದು ಅಡುಗೆ ಕೆಲಸ ಮಾಡುತ್ತಿದ್ದರು. ಸರ್ಕಾರಿ ಕೆಲಸಕ್ಕೆ ಸೇರಿದ ನಂತರ ಒತ್ತಡದಲ್ಲಿ ಕುಟುಂದೊಂದಿಗೆ ಸಮಯ ಕಳೆಯುವುದು ಸಾಧ್ಯವಾಗುತ್ತಿರಲಿಲ್ಲ. ಇದೀಗ ಪ್ರಶಸ್ತಿ ಲಭಿಸಿರುವುದು ಅವರಿಗೆಲ್ಲ ಸಂತಸವಾಗಿದೆ.
ಇಂಜಿನಿಯರಿಂಗ್ ವ್ಯಾಸಂಗದ ಅವಧಿಯಲ್ಲಿ ತುಮಕೂರಿನ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರು ಹೇಳಿದ ಮಾತು ಸದಾ ನೆನಪಿನಲ್ಲಿರುತ್ತದೆ. “ಯಾವುದೇ ಕೆಲಸ ದೊರಕಿದರೂ, ಶ್ರದ್ಧೆಯಿಂದ ಅಚ್ಚುಕಟ್ಟಾಗಿ ನಿರ್ವಹಿಸಬೇಕು” ಎಂದು ಹೇಳಿದ್ದರು. ಅವರ ಆಶೀರ್ವಾದದಿಂದಲೇ ಇಲ್ಲಿಯವರಗೆ ಸಾಗಲು ಸಾಧ್ಯವಾಗಿದೆ ಎನ್ನುತ್ತಾರೆ ಕೃಷ್ಣಪ್ರಸಾದ್.