Site icon Vistara News

Shakthi Scheme : ಬುರ್ಖಾಧಾರಿ ಮಹಿಳೆಯರಿಗೆ ನೀವೇನು ಪಾಕಿಸ್ತಾನಕ್ಕೆ ಹೋಗೋರಾ ಎಂದು ಕೇಳಿದ ಕಂಡಕ್ಟರ್‌!

Pakistan Controversy in KSRTC Bus

ಶಿವಮೊಗ್ಗ: ಮುಸ್ಲಿಮರನ್ನು ಕಂಡ ಕೂಡಲೇ ಪಾಕಿಸ್ತಾನಕ್ಕೆ ಸಂಬಂಧ ಕಲ್ಪಿಸುವ ಚಾಳಿ ಹೆಚ್ಚುತ್ತಿದೆ. ಇಲ್ಲೊಬ್ಬ ಕೆಎಸ್‌ಆರ್‌ಟಿಸಿ ಕಂಡಕ್ಟರ್‌ (KSRTC bus Conductor) ಬಸ್‌ ಹತ್ತಿದ (Shakthi Scheme) ಮುಸ್ಲಿಂ ಮಹಿಳೆಯರ (Muslim Women) ಜತೆ ನೀವೇನು ಪಾಕಿಸ್ತಾನಕ್ಕೆ ಹೋಗೋರಾ (where you going ton Pakistan) ಎಂದು ಕೇಳಿ ವಿವಾದಕ್ಕೆ ಒಳಗಾಗಿದ್ದಾನೆ.

ಘಟನೆ ನಡೆದಿರುವುದು ಶಿವಮೊಗ್ಗದಿಂದ ಭದ್ರಾವತಿಗೆ ಹೋಗುವ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ. ಬುರ್ಖಾ ಧರಿಸಿದ್ದ ಮಹಿಳೆಯರಲ್ಲಿ ನೀವೇನು ಪಾಕಿಸ್ತಾನಕ್ಕೆ ಹೋಗೋರಾ ಎಂದು ಉದ್ಧಟತನದಿಂದ ಕೇಳಿದ್ದಾನೆ. ಹಾಗೆ ಕೇಳಿದ ಕಂಡಕ್ಟರ್‌ನನ್ನು ಬಸ್ಸಿನಲ್ಲಿದ್ದವರು ಸೇರಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಜತೆಗೆ ಮುಸ್ಲಿಂ ಮಹಿಳೆಯರ ಬಂಧುಗಳು ಕೆಎಸ್‌ಆರ್‌ಟಿಸಿ ಕಚೇರಿಗೆ ಬಂದು ದೂರು ನೀಡಿದ್ದಾರೆ.

ಏನು ಘಟನೆ ಇದು? ಪಾಕಿಸ್ತಾನದ ವಿಷಯ ಯಾಕೆ ಬಂತು?

ಶುಕ್ರವಾರ ಶಿವಮೊಗ್ಗದಿಂದ ಭದ್ರಾವತಿಗೆ ಹೋಗುವ ಕೆ.ಎಸ್‌ಆರ್‌ಟಿಸಿ ಬಸ್‌ನಲ್ಲಿ ಈ ವಿದ್ಯಮಾನ ನಡೆದಿದೆ. ಒಬ್ಬ ಬುರ್ಖಾಧಾರಿ ಮಹಿಳೆ ಬಸ್‌ ಹತ್ತಿ ಕುಳಿತಿದ್ದರು. ಸ್ವಲ್ಪ ಹೊತ್ತಿನಲ್ಲಿ ಇನ್ನೊಬ್ಬರು ಬುರ್ಖಾ ಧರಿಸಿದ ಮಹಿಳೆ ಪಕ್ಕದ ಸೀಟಿಗೆ ಬಂದು ಕುಳಿತಿದ್ದಾರೆ. ಟಿಕೆಟ್‌ ನೀಡಲು ಬಂದ ಕಂಡಕ್ಟರ್‌ ಇಬ್ಬರು ಮುಸ್ಲಿಂ ಮಹಿಳೆಯರು ಅಕ್ಕಪಕ್ಕ ಕುಳಿತಿದ್ದುದರಿಂದ ಒಂದೇ ಟಿಕೆಟ್‌ ಕೊಟ್ಟಿದ್ದಾನೆ. ಅಂದರೆ ಒಂದೆ ಟಿಕೆಟ್‌ನಲ್ಲಿ ಎರಡು ಟಿಕೆಟ್‌ ಮೊತ್ತ ಉಲ್ಲೇಖಿಸಿ ಫ್ರೀ ಟಿಕೆಟ್‌ ಕೊಟ್ಟಿದ್ದಾನೆ.

ಆಗ ಒಬ್ಬ ಮಹಿಳೆ ಇಬ್ಬರಿಗೂ ಒಂದೇ ಟಿಕೆಟ್‌ ಯಾಕೆ ಕೊಟ್ಟಿದ್ದೀರಾ? ನಾವು ಒಬ್ಬೊಬ್ಬರು ಒಂದೊಂದು ಕಡೆ ಇಳಿಯುವುದರಿಂದ ಚೆಕ್ಕಿಂಗ್‌ಗೆ ಬಂದರೆ ತೊಂದರೆ ಆಗುವುದಿಲ್ಲವೇ ಎಂದು ಕೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಕಂಡಕ್ಟರ್‌ ʻನೀವೇನು ಪಾಕಿಸ್ತಾನದಲ್ಲಿ ಇಳಿತೀರಾʼ ಎಂದು ಕೇಳಿದ್ದಾನೆ.

ಪಾಕಿಸ್ತಾನದಲ್ಲಿ ಇಳೀತೀರಾ ಎಂಬ ಮಾತು ಮುಸ್ಲಿಂ ಮಹಿಳೆಯನ್ನು ಕೆರಳಿಸಿದೆ. ಅವರು, ʻನೀವೇನು ಪಾಕಿಸ್ತಾನದಲ್ಲಿ ಬಸ್‌ ಓಡಿಸುತ್ತಿದ್ದೀರಾʼ ಎಂದು ಕೇಳಿದ್ದಾರೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಆಗ ಮುಸ್ಲಿಮೇತರರೂ ಸೇರಿ ಇತರ ಪ್ರಯಾಣಿಕರು ಮಹಿಳೆಯ ನೆರವಿಗೆ ಬಂದಿದ್ದಾರೆ.

ಬುರ್ಖಾ ಧರಿಸಿದ ಮಹಿಳೆಯರನ್ನು ಕಂಡಕೂಡಲೇ ನಿಮಗೆ ಪಾಕಿಸ್ತಾನ ನೆನಪಾಗುತ್ತದಾ? ಅವರೇನೂ ನಮ್ಮವರಲ್ಲವಾ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಎಲ್ಲರೂ ನಮ್ಮವರು ಎನ್ನುವುದು ತಲೆಯಲ್ಲಿರಬೇಕು. ಸರ್ಕಾರಿ ಉದ್ಯೋಗಿ ನೀವು ಈ ರೀತಿ ತಾರತಮ್ಯದ ಮಾತು ಆಡಬಾರದು ಎಂದು ಬೆವರಿಳಿಸಿದರು. ಆದರೆ, ಯಾರ ಮಾತಿಗೂ ಜಗ್ಗದ ಕಂಡಕ್ಟರ್‌ ಏನು ಮಾಡುತ್ತೀರೋ ಮಾಡಿಕೊಳ್ಳಿ ಎಂದು ಧಿಮಾಕು ತೋರಿದ್ದಾನೆ.

ಇದನ್ನೂ ಓದಿ : Shakti Scheme : ಶಕ್ತಿ ಯೋಜನೆ ನಿಲ್ಲಲ್ಲ, ಇನ್ನೂ 10 ವರ್ಷ ಓಡುತ್ತೆ: ಸರ್ಕಾರದ ಸ್ಪಷ್ಟನೆ

ಬಸ್ಸು ಭದ್ರಾವತಿಗೆ ಬಂದಾಗ ಮಹಿಳೆಯ ಸಂಬಂಧಿಕರು ಮತ್ತು ಇತರ ಮುಸ್ಲಿಂ ಮುಖಂಡರು ಆಗಮಿಸಿ ಅಲ್ಲಿನ ಕೆಎಸ್‌ಆರ್‌ಟಿಸಿ ಅಧಿಕಾರಿಯ ಮುಂದೆ ದೂರು ನೀಡಿದ್ದಾರೆ. ನಿಮಗೆ ಹೆಂಡತಿ ಮಕ್ಕಳು ಇಲ್ವಾ? ಮುಸ್ಲಿಮರನ್ನು ನೋಡಿದ ಕೂಡಲೇ ಪಾಕಿಸ್ತಾನದ ವಿಷಯ ಯಾಕೆ ಬೇಕು ನಿಮಗೆ ಎಂದೆಲ್ಲ ತರಾಟೆಗೆ ತೆಗದುಕೊಂಡಿದ್ದಾರೆ. ಈ ಎರಡೂ ದೃಶ್ಯಗಳು ಈಗ ವೈರಲ್‌ ಆಗಿವೆ.

ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ಸರ್ಕಾರದಿಂದ ಎಚ್ಚರಿಕೆ

ಶಕ್ತಿ ಯೋಜನೆಯ ಫಲಾನುಭವಿ ಮಹಿಳೆಯರ ಜತೆಗೆ ಸಿಬ್ಬಂದಿಗಳು ಕೆಟ್ಟದಾಗಿ ನಡೆದುಕೊಂಡರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸರ್ಕಾರ ಈ ಹಿಂದೆಯೇ ಎಚ್ಚರಿಸಿದೆ. ಉಚಿತವಾಗಿ ಪ್ರಯಾಣಿಸುತ್ತಾರೆ ಎಂಬ ಕಾರಣಕ್ಕಾಗಿ ಅವರನ್ನು ಕೆಟ್ಟದಾಗಿ ನಡೆಸಿಕೊಳ್ಳಬಾರದು, ಗೌರವಪೂರ್ವಕವಾಗಿಯೇ ನೋಡಬೇಕು ಎಂದು ಸ್ವತಃ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರೇ ಹೇಳಿದ್ದಾರೆ. ಆದರೂ ಅಲ್ಲಲ್ಲಿ ಕೆಲವು ಘಟನೆಗಳು ನಡೆಯುತ್ತಿವೆ.

Exit mobile version