Site icon Vistara News

ಶರಾವತಿ ಸಂತ್ರಸ್ತರಿಗೆ ಪುನರ್ವಸತಿ: ಹೊಸ ಪ್ರಸ್ತಾವನೆಗೆ ಅನುಮತಿ ನೀಡಲು ಕೇಂದ್ರ ಅರಣ್ಯ ಸಚಿವರಿಗೆ ಮನವಿ

Sharavathi Denotification

ನವ ದಹೆಲಿ : ಶರಾವತಿ ಕಣಿವೆ ಜಲವಿದ್ಯುತ್ ಯೋಜನೆಯ ಸಂತ್ರಸ್ತ ಕುಟುಂಬಗಳ ಪುನರ್ವಸತಿ ಉದ್ದೇಶಕ್ಕಾಗಿ ಹೊರಡಿಸಲಾಗಿದ್ದ ಅರಣ್ಯ ಭೂಮಿಯ ಡಿನೋಟಿಫಿಕೇಷನ್ (Sharavathi Denotification) ರದ್ದಾಗಿರುವುದರಿಂದ ರಾಜ್ಯ ರೂಪಿಸಿರುವ ಹೊಸ ಪ್ರಸ್ತಾವನೆಗೆ ಅನುಮತಿ ನೀಡುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ನಿಯೋಗ ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿಯಾಗಿ ಮನವಿ ಮಾಡಿದೆ.

ಆರೇಳು ದಶಕದ ಹಿಂದೆ ನಾಡಿನ ಬೆಳಕಿಗಾಗಿ ಬದುಕು ಕತ್ತಲೆ ಮಾಡಿಕೊಂಡ ಶರಾವತಿ ಜಲ ವಿದ್ಯುತ್‌ ಯೋಜನೆಯ ಸಂತ್ರಸ್ತ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ 2017ರಲ್ಲಿ ವಿವಿಧ ಸ್ವರೂಪದ ಅರಣ್ಯ ಜಮೀನುಗಳ ಡಿನೋಟಿಫಿಕೇಷನ್‌ ಮಾಡಿ ಆದೇಶ ಹೊರಡಿಸಿತ್ತು.

ಡಿನೋಟಿಫಿಕೇಷನ್‌ ಆದೇಶದಲ್ಲಿ 1978ರ ಕೇಂದ್ರ ಅರಣ್ಯ ಸಂರಕ್ಷಣೆ ಕಾಯಿದೆ, 1963ರ ಕರ್ನಾಟಕ ಅರಣ್ಯ ಅಧಿ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ರಾಜ್ಯ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್‌ ಡಿನೋಟಿಫಿಕೇಷನ್‌ ರದ್ದತಿಗೆ 2021 ಮಾರ್ಚ್ 3ರಂದು ಆದೇಶ ಹೊರಡಿಸಿತ್ತು. ಈ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಡಿನೋಟಿಫಿಕೇಷನ್‌ ಅನ್ನು ರದ್ದು ಮಾಡಿತ್ತು.

ಇಂದರಿಂದಾಗಿ ಸಂತ್ರಸ್ತರಿಗೆ ದಿಕ್ಕೇ ತೋಚದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೇಂದ್ರ ಸರಕಾರದ ಪೂರ್ವಾನುಮತಿ ಪಡೆದಿಲ್ಲ ಎಂಬ ಒಂದು ಕಾರಣವನ್ನು ಡಿನೋಟಿಫಿಕೇಷನ್‌ ರದ್ದು ಮಾಡುವಾಗ ಹೈಕೋರ್ಟ್‌ ಬೊಟ್ಟು ಮಾಡಿತ್ತು. ಈ ಹಿನ್ನೆಲೆಯಲ್ಲಿ ಹೊಸದಾಗಿ ಡಿನೋಟಿಫಿಕೇಷನ್‌ ಹೊರಡಿಸುವ ಪ್ರಸ್ತಾವನೆಗೆ ಅನುಮತಿ ನೀಡುವಂತೆ ಈ ನಿಯೋಗ ಕೇಂದ್ರ ಅರಣ್ಯ ಸಚಿವರನ್ನು ಒತ್ತಾಯಿಸಿದೆ.

ನಿಯೋಗದಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಸಂಸದ ಬಿ.ವೈ. ರಾಘವೇಂದ್ರ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ, ಶಾಸಕ ಹರತಾಳು ಹಾಲಪ್ಪ ಇದ್ದರು.

ಹೈಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಒಟ್ಟು 46 ಡಿನೋಟಿಫಿಕೇಷನ್‌ ಆದೇಶವನ್ನು ರಾಜ್ಯ ಸರಕಾರ ರದ್ದು ಮಾಡಿದೆ. ಸಾರ್ವಜನಿಕ ಉದ್ದೇಶದ ಯೋಜನೆಗಳಿಗಾಗಿ ಸಂತ್ರಸ್ತರಾದ ಕುಟುಂಬಗಳ ಪುನರ್ವಸತಿಗೆ ಈಗ ಸರ್ಕಾರ ಹೊಸದಾಗಿ ಡಿನೋಟಿಫಿಕೇಷನ್‌ ಹೊರಡಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

ಇದನ್ನೂ ಓದಿ | ಅಡಕೆ ಎಲೆಚುಕ್ಕಿ ರೋಗ | ಕೇಂದ್ರದ ಗಮನ ಸೆಳೆದ ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದ ನಿಯೋಗ

Exit mobile version