Site icon Vistara News

Allama Prabhu: ಶಿವಮೊಗ್ಗ ಫ್ರೀಡಂ ಪಾರ್ಕ್‌ಗೆ ಅಲ್ಲಮಪ್ರಭು ಹೆಸರು; ಸಿಎಂಗೆ ಬಸವ ಮರುಳಸಿದ್ಧ ಸ್ವಾಮೀಜಿ ಅಭಿನಂದನೆ

CM Siddaramaiah

ಶಿವಮೊಗ್ಗ: ಅಲ್ಲಮ ಪ್ರಭು ಒಬ್ಬ ಶ್ರೇಷ್ಠ ಕವಿಯಾಗಿದ್ದು, ಅವರು ಶಿವಮೊಗ್ಗ ಜಿಲ್ಲೆಯವರಾಗಿದ್ದಾರೆ. ನಮ್ಮ ನಾಡಿಗೆ ಅವರ ಕೊಡುಗೆ ಅಪಾರವಾಗಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಅವರ ಆಶಯದಂತೆ ಶಿವಮೊಗ್ಗ ಫ್ರೀಡಂ ಪಾರ್ಕ್‌ಗೆ ಅಲ್ಲಮ ಪ್ರಭು (Allama Prabhu) ಅವರ ಹೆಸರನ್ನು ಇಡುವುದು ಸೂಕ್ತ ಎಂದು ನಾನೂ ಸಹ ಭಾವಿಸಿದ್ದೇನೆ. ಹೀಗಾಗಿ ಫ್ರೀಡಂ ಪಾರ್ಕ್‌ಗೆ (Freedom Park) ಅಲ್ಲಮ ಪ್ರಭು (Allama Prabhu) ಎಂದು ನಾಮಕರಣ ಮಾಡಲು ನಾನು ಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಘೋಷಿಸಿದ್ದು, ಈ ಕ್ರಮವನ್ನು ಸ್ವಾಗತಿಸುವುದಾಗಿ ಚಿಕ್ಕಮಗಳೂರಿನ ಶ್ರೀ ಬಸವತತ್ವ ಪೀಠದ ಪೀಠದ ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದ್ದಾರೆ. ಅಲ್ಲದೆ, ಸಿಎಂ ಸಿದ್ದರಾಮಯ್ಯ ಅವರ ನಿರ್ಧಾರವನ್ನು ಅಭಿನಂದಿಸುವುದಾಗಿಯೂ ಹೇಳಿದ್ದಾರೆ.

ಶಿವಮೊಗ್ಗದ ಫ್ರೀಡಂ ಪಾರ್ಕ್‌ನಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್‌ ಸರ್ಕಾರದ 5ನೇ ಗ್ಯಾರಂಟಿ (Congress Guarantee) ಯುವನಿಧಿ ಯೋಜನೆಗೆ (Yuva Nidhi Scheme) ಚಾಲನೆ ನೀಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅಲ್ಲಮ ಪ್ರಭು ಶಿವಮೊಗ್ಗ ಜಿಲ್ಲೆಯವರಾಗಿದ್ದಾರೆ. ಅವರ ಕೊಡುಗೆ ಅಸಾಮಾನ್ಯವಾಗಿದೆ. ಹೀಗಾಗಿ ಮಧು ಬಂಗಾರಪ್ಪ ಅವರು ಸೂಚಿಸಿದಂತೆ ಅವರ ಹೆಸರನ್ನು ಇಡುವುದು ಸೂಕ್ತ ಎಂದು ಭಾವಿಸಿದ್ದೇನೆ ಎಂದು ಹೇಳಿದ್ದರು. ಸಚಿವ ಮಧು ಬಂಗಾರಪ್ಪ ಅವರು ಹೇಳಿದಂತೆ ಅಲ್ಲಮ ಪ್ರಭು ಅವರ ಹೆಸರನ್ನು ಇಡುವುದು ಸೂಕ್ತ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು.

ಮಧು ಬಂಗಾರಪ್ಪ ಮನವಿ

ಇದಕ್ಕೂ ಮೊದಲು ಭಾಷಣ ಮಾಡಿದ್ದ ಜಿಲ್ಲಾ ಉಸ್ತುವಾರಿ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, 12ನೇ ಶತಮಾನದಲ್ಲಿ ಒಬ್ಬ ಪ್ರಸಿದ್ಧ ಕವಿ, ಹೆಸರಾಂತ ತತ್ವಜ್ಞಾನಿಯಾಗಿದ್ದ ಅಲ್ಲಮ ಪ್ರಭುಗಳು ನಮ್ಮ ಶಿವಮೊಗ್ಗ ಜಿಲ್ಲೆಯವರು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಹೀಗಾಗಿ ಶಿವಮೊಗ್ಗ ಫ್ರೀಡಂ ಪಾರ್ಕ್‌ಗೆ ಅಲ್ಲಮ ಪ್ರಭು ಅವರ ಹೆಸರಿಡಬೇಕು ಎಂದು ವೇದಿಕೆ ಮೇಲಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ, ಅಲ್ಲಮ ಪ್ರಭು ಹೆಸರಿಡಲು ಒಪ್ಪಿಗೆ ಸೂಚಿಸಿದ್ದರು. ಈಗ ಸಿಎಂ ಕ್ರಮವನ್ನು ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಸ್ವಾಗತಿಸಿದ್ದಾರೆ.

ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದ್ದೇನು?

“ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಬೆಳ್ಳಿಗಾವಿಯಲ್ಲಿ ಜನಿಸಿದ ಮಹಾಶರಣ ಅಲ್ಲಮಪ್ರಭುದೇವರ ಹೆಸರನ್ನು ಶಿವಮೊಗ್ಗ ನಗರದ ಹಳೇ ಕಾರಾಗೃಹದ ಮೈದಾನಕ್ಕೆ ಇಡುವುದು ಸೂಕ್ತ ಎಂದು ಮಾನ್ಯ ಮುಖ್ಯಮಂತ್ರಿಗಳು ಘೋಷಿಸಿದ್ದು ನಮಗೆ ಅಪಾರ ಸಂತೋಷವನ್ನು ಉಂಟುಮಾಡಿದೆ.

2019ರ ಜನವರಿಯಲ್ಲಿ ಶಿವರಾತ್ರೀಶ್ವರರ 1059ನೆಯ ಜಯಂತಿ ಮಹೋತ್ಸವವನ್ನು ಆಚರಿಸುವಾಗ ಈ ಜಾಗಕ್ಕೆ ಅಲ್ಲಮಪ್ರಭು ಬಯಲು ಎಂದೇ ನಾಮಕರಣ ಮಾಡಿದ್ದು, ಅದನ್ನು ಹಾಗೆಯೇ ಕರೆಯಬೇಕೆಂದು ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯ ಬಹಿರಂಗ ಸಮಾರಂಭದಲ್ಲಿ ಸುತ್ತೂರು ಜಗದ್ಗುರುಗಳು ಸೂಚಿಸಿದ್ದರು. ಅಂದು ಎಲ್ಲ ಜನಸಮುದಾಯದ ಒಪ್ಪಿಗೆಯಿಂದ ಘೋಷಿಸಿದ್ದ ಹೆಸರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಅಧಿಕೃತವಾಗಿ ಘೋಷಿಸಿದ್ದಾರೆ. ಇದು 12ನೆಯ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರಿಂದ ಸ್ಥಾಪಿಸಲ್ಪಟ್ಟ ಜಗತ್ತಿನ ಪ್ರಜಾಪ್ರಭುತ್ವದ ತಂದೆಯೆಂದೇ ಖ್ಯಾತಿವೆತ್ತ ಅನುಭವ ಮಂಟಪಕ್ಕೆ ಸಂದ ಗೌರವವೆಂದು ಭಾವಿಸಿಕೊಂಡಿದ್ದೇವೆ.

ಇದನ್ನೂ ಓದಿ: Allama Prabhu: ಶಿವಮೊಗ್ಗ ಫ್ರೀಡಂ ಪಾರ್ಕ್‌ಗೆ ಅಲ್ಲಮಪ್ರಭು ಹೆಸರು; ಸಿಎಂ ಸಿದ್ದರಾಮಯ್ಯ ಘೋಷಣೆ

ಕನ್ನಡದ ಪ್ರಥಮ ಅನುಭಾವಿ ಕವಿ

ಕನ್ನಡದ ಪ್ರಥಮ ಅನುಭಾವಿ ಕವಿ, ಬಯಲು ತತ್ತ್ವದ ಪ್ರತಿಪಾದನೆ ಮಾಡಿದ ದಾರ್ಶನಿಕ, ಶೂನ್ಯಪೀಠದ ಪ್ರಥಮ ಅಧ್ಯಕ್ಷ, ಪ್ರಜಾಪ್ರಭುತ್ವದ ಮೊದಲ ಮಾದರಿ ಅನುಭವ ಮಂಟಪದ ಪ್ರಥಮ ಅಧ್ಯಕ್ಷ, ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಬೆಳ್ಳಿಗಾವಿಯಲ್ಲಿ ಜನಿಸಿದ ಮಹಾಶರಣ ಅಲ್ಲಮಪ್ರಭುದೇವರ ಹೆಸರನ್ನು ಶಿವಮೊಗ್ಗ ನಗರದ ಹಳೇ ಕಾರಾಗೃಹದ ಮೈದಾನಕ್ಕೆ ಇಡುವುದು ಸೂಕ್ತ ಎಂದು ಘೋಷಿಸಿದ ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಾಗೂ ಈ ವಿಷಯದ ಕುರಿತಾಗಿ ದನಿ ಎತ್ತಿ ಮುಖ್ಯಮಂತ್ರಿಗಳ ಗಮನ ಸೆಳೆದ ಸಚಿವ ಮಧು ಬಂಗಾರಪ್ಪ ಅವರಿಗೆ ಜಿಲ್ಲೆಯ ಎಲ್ಲ ಮಠಾಧೀಶರ ಪರವಾಗಿ ಹಾಗೂ ಸಮಾಜ ಬಾಂಧವರ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳನ್ನು ತಿಳಿಸುತ್ತಿದ್ದೇವೆ” ಎಂದು ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಅಭಿನಂದನಾ ಪತ್ರ ಬರೆದಿದ್ದಾರೆ.

Exit mobile version