ಶಿವಮೊಗ್ಗ: (Shimoga News) ಬಿಜೆಪಿ ಸರ್ಕಾರ ಮೃದುವಾಗಿ ಮಾತನಾಡುತ್ತಾ ದಲಿತರನ್ನು ದಿಕ್ಕು ತಪ್ಪಿಸುತ್ತಿದೆ. ಅವರ ಮಾತಿಗೆ ದಲಿತರು ಮರುಳಾಗದೆ ಕಾಂಗ್ರೆಸ್‌ನಲ್ಲೇ ಉಳಿಯಬೇಕು. ಬಿಜೆಪಿಯನ್ನು ದೂರ ಇಡಬೇಕು ಎಂದು ಕೆಪಿಸಿಸಿ ಎಸ್ಸಿ ಘಟಕದ ಅಧ್ಯಕ್ಷ ಆರ್. ಧರ್ಮಸೇನ ಹೇಳಿದರು.
ಸೋಮವಾರ (ಡಿ.೨೬) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರದುರ್ಗದ ಕಾಲೇಜು ಮೈದಾನದಲ್ಲಿ ಜ. 8ರಂದು ಬೆಳಗ್ಗೆ 11 ಗಂಟೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ರಾಜ್ಯ ಮಟ್ಟದ ಐಕ್ಯತಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಬಿಜೆಪಿ ಮೀಸಲಾತಿಯೂ ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡುವುದಾಗಿ ಸುಳ್ಳು ಹೇಳುತ್ತದೆ. ದಲಿತರ ಮತ ಪಡೆಯಲು ಈ ರೀತಿಯ ಆಮಿಷ ತೋರಿಸುತ್ತಿದ್ದಾರೆ. ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಮುಗ್ಧ ದಲಿತರು ಇದನ್ನೇ ನಿಜವೆಂದು ನಂಬಬಾರದು. ದಲಿತರೆಲ್ಲರೂ ಕಾಂಗ್ರೆಸ್ ಅನ್ನೇ ಬೆಂಬಲಿಸಬೇಕು ಎಂದರು.
ಇದನ್ನೂ ಓದಿ | ಎಲ್ಲ ಶಾಲೆಗಳಿಗೂ ಕುಡಿಯುವ ನೀರಿನ ಸೌಕರ್ಯ: ಆರ್‌ಡಿಪಿಆರ್‌ಗೆ ಶಿಕ್ಷಣ ಸಲಹೆಗಾರ ಪ್ರೊ. ದೊರೆಸ್ವಾಮಿ ಸೂಚನೆ
ದಲಿತರಿಗೆ ಸರ್ಕಾರಿ ಸೌಲಭ್ಯಗಳನ್ನು ನೀಡುತ್ತಿಲ್ಲ. ಅನುದಾನವನ್ನು ನೀಡುತ್ತಿಲ್ಲ, ನೀಡಿದರೂ ಅದನ್ನು ಖರ್ಚು ಮಾಡುತ್ತಿಲ್ಲ. ದಲಿತರ ಮಕ್ಕಳ ಶಿಕ್ಷಣವನ್ನು ಕಸಿಯುವ ಕೆಲಸಕ್ಕೆ ಕೈ ಹಾಕಿದೆ. ವಿದ್ಯಾರ್ಥಿ ವೇತನವನ್ನು ನಿಲ್ಲಿಸಲಾಗಿದೆ. ಸೌಲಭ್ಯಗಳು ಹೆಸರಿಗೆ ಮಾತ್ರ ಇವೆ. ಪಡಿತರವನ್ನು ಕೊಡುತ್ತಿಲ್ಲ. ಒಟ್ಟಾರೆ ದಲಿತರನ್ನು ಕಡೆಗಣಿಸಲಾಗುತ್ತಿದೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀನಿವಾಸ ಕರಿಯಣ್ಣ, ಎನ್.ರವಿಕುಮಾರ್, ವೈ.ಎಚ್.ನಾಗರಾಜ್ ಇದ್ದರು.