ಶಿವಮೊಗ್ಗ: ಇಬ್ಬರು ನಿರ್ದೇಶಕರನ್ನು ವಜಾಗೊಳಿಸಿ ನಂತರ ನಡೆಸಿದ ಶಿಮುಲ್ ಅಧ್ಯಕ್ಷರ ಆಯ್ಕೆಯನ್ನು ಹೈಕೋರ್ಟ್ ಏಕ ಸದಸ್ಯ ಪೀಠ ಅಸಿಂಧುಗೊಳಿಸಿದೆ. ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಂದಿನ ಉಪಾಧ್ಯಕ್ಷ ಎಚ್. ಕೆ.ಬಸಪ್ಪ ಮತ್ತು ನಿರ್ದೇಶಕ ಟಿ.ಶಿವಶಂಕರಪ್ಪ ಅವರನ್ನು ಏಕಪಕ್ಷೀಯವಾಗಿ ವಜಾಗೊಳಿಸಿದ ಆದೇಶವನ್ನೂ ರದ್ದುಗೊಳಿಸಲಾಗಿದೆ. ಅಲ್ಲದೇ, ಬದಲಿ ನಿರ್ದೇಶಕರ ನೇಮಕ (ಕೋಆಪ್)ವನ್ನು ಸಹ ಅಸಿಂಧುಗೊಳಿಸಲಾಗಿದೆ.
ಅಧ್ಯಕ್ಷ ಸ್ಥಾನಕ್ಕೆ ಆರು ವಾರದೊಳಗೆ ಹೊಸದಾಗಿ ಚುನಾವಣೆ ನಡೆಸಬೇಕು ಎಂದು ಹೈಕೋರ್ಟ್ ಸೂಚಿಸಲಾಗಿದೆ. ಹಾಗೂ ಇಬ್ಬರು ಸಹಾಯಕ ನಿಬಂಧಕರು ಮತ್ತು ಚುನಾವಣಾಧಿಕಾರಿಗೆ ತಲಾ ₹10 ಸಾವಿರ ದಂಡ ವಿಧಿಸಿದೆ. ಈ ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಹ ನ್ಯಾಯಮೂರ್ತಿ ಆರ್ .ದೇವದಾಸ ಪೊಲೀಸ್ ಇಲಾಖೆಗೆ ಆದೇಶ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಎಚ್.ಕೆ.ಬಸಪ್ಪ ಮತ್ತು ಶಿವಶಂಕರಪ್ಪ ಅವರು ಹೈಕೋಟ್೯ಗೆ ಪ್ರತ್ಯೇಕವಾಗಿ ಅಪೀಲು ಸಲ್ಲಿಸಿದರು. ತಮ್ಮನ್ನು ರಾಜಕೀಯ ಉದ್ದೇಶದಿಂದ ವಜಾಗೊಳಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ತಮ್ಮ ವಜಾ ಆದೇಶವನ್ನು ಮತ್ತು ಅಧ್ಯಕ್ಷರ ಆಯ್ಕೆಯನ್ನು ಅಸಿಂಧುಗೊಳಿಸಬೇಕೆಂದು ಎಂದು ಮನವಿ ಮಾಡಿಕೊಂಡರು.
ಹೈಕೋರ್ಟ್ ನೀಡಿದ ಈ ತೀರ್ಪಿನಿಂದ ಶಿಮುಲ್ ಅಧ್ಯಕ್ಷ ಎನ್.ಎಚ್. ಶ್ರೀಪಾದರಾವ್ ಅಧ್ಯಕ್ಷ ಸ್ಥಾನದಂದ ಕೇಳಗಿಳಿಯುವಂತಾಗಿದೆ. ಇದೇ ವೇಳೆ ಶಿವಶಂಕರಪ್ಪ ಮತ್ತು ಟಿ.ಬಸಪ್ಪ ಅವರಿಗೆ ನಿರ್ದೇಶಕ ಸ್ಥಾನ ಮತ್ತೆ ಲಭಿಸಲಿದೆ.
ಪ್ರಕರಣದ ಹಿನ್ನೆಲೆ
ಜನವರಿ 1ರಂದು ನಡೆದ ಶಿಮುಲ್ ಅಧ್ಯಕ್ಷರ ಚುನಾವಣೆಯಲ್ಲಿ ಎನ್.ಎಚ್.ಶ್ರೀಪಾದರಾವ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು.
ಆದರೆ ಒಕ್ಕೂಟದ ಅಂದಿನ ಉಪಾಧ್ಯಕ್ಷ ಚನ್ನಗಿರಿ ತಾಲೂಕು ಕಂಚುಗಾರನಹಳ್ಳಿಯ ಟಿ.ಬಸಪ್ಪ ಮತ್ತು ಶಿಕಾರಿಪುರ ತಾಲೂಕು ಹಿರೇಜಂಬೂರಿನ ಒಕ್ಕೂಟದ ನಿರ್ದೇಶಕ ಟಿ.ಶಿವಶಂಕರಪ್ಪ ಅವರನ್ನು ಸಹಕಾರ ಸಂಘಗಳ ಸಹಾಯಕ ನಿಬಂಧಕರು ವಜಾಗೊಳಿಸದ್ದರು. ಸ್ಥಳೀಯ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಬರುವ ಲಾಭವನ್ನು ಮೀಸಲು ನಿಧಿಯಾಗಿ ಸಹಕಾರ ಬ್ಯಾಂಕ್ ಗಳಲ್ಲಿ ಬಾಂಡ್ ರೂಪದಲ್ಲಿ ಇಡಬೇಕಾದ ನಿಯಮವನ್ನು ಉಲ್ಲಂಘಿಸಿದ ಆರೋಪ ಹಿನ್ನೆಲೆಯಲ್ಲಿ ಈ ರೀತಿಯ ಕ್ರಮ ಕೈಗೊಳ್ಳಲಾಗಿತ್ತು.
ಈ ಹಿಂದೆ ಶಿಮುಲ್‌ನಲ್ಲಿ ಚುನಾಯಿತ 14 ನಿರ್ದೇಶಕರಲ್ಲಿ ನಾಲ್ವರು ಬಿಜೆಪಿ, 9 ಕಾಂಗ್ರೆಸ್ ಮತ್ತು ಒಬ್ಬರು ಜೆಡಿಎಸ್ ಬೆಂಬಲಿತ ನಿರ್ದೇಶಕರು ಇದ್ದರು. ಅಲ್ಲದೆ, ಈ ನಿರ್ದೆಶಕರ ಜೊತೆಯಲ್ಲೇ ಒಬ್ಬರು ನಾಮನಿರ್ದೇಶಿತ ಮತ್ತು ಮೂವರು ಅಧಿಕಾರಿಗಳು ಸಹ ಮತದಾನದ ಅಧಿಕಾರ ಹೊಂದಿದ್ದಾರೆ. ಇದರೊಂದಿಗೆ ಬಿಜೆಪಿ ಬೆಂಬಲಿತರ ಸಂಖ್ಯೆ ಅಧಿಕಾರಿಗಳು ಸೇರಿ 8ಕ್ಕೆ ಏರಿಕೆಯಾದರೆ, ಕಾಂಗ್ರೆಸ್ ಬೆಂಬಲಿತರ ಸಂಖ್ಯೆ ಇಬ್ಬರ ವಜಾ ಬಳಿಕ 7ಕ್ಕೆ ಕುಸಿದಿತ್ತು. ಈ ಆಧಾರದ ಮೇಲೆ ಶ್ರೀಪಾದರಾವ್ ಅವರು ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಇದನ್ನೂ ಓದಿ: ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಕೆಳದಿ ಚೆನ್ನಮ್ಮನ ಹೆಸರು: ವಚನಾನಂದ ಸ್ವಾಮೀಜಿ ಒತ್ತಾಯ