ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರ ಜನುಮ ದಿನವಾದ ಫೆಬ್ರವರಿ 27ರಂದು ಲೋಕಾರ್ಪಣೆಗೊಂಡ ಶಿವಮೊಗ್ಗ ವಿಮಾನ ನಿಲ್ದಾಣದಿಂದ (Shivamogga airport) ವಿಮಾನಗಳ ಹಾರಾಟ ಆ. 31ರಂದು ಆರಂಭಗೊಳ್ಳಲಿದೆ. ಮೊದಲು ಬೆಂಗಳೂರು ಮತ್ತು ಶಿವಮೊಗ್ಗ (Flight between Bangalore and Shivamogga) ನಡುವೆ ವಿಮಾನ ಹಾರಾಟ ನಡೆಯಲಿದ್ದು, ಈ ವಿಮಾನದ ಟಿಕೆಟ್‌ಗಾಗಿ ಭಾರಿ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಅದರಲ್ಲೂ ಆಗಸ್ಟ್ 31ರ ಮೊದಲ ದಿನದ ಮೊದಲ (First flight fly on August 31) ಪ್ರಯಾಣದ ಟಿಕೆಟ್‌ಗಳು ಬಿಸಿ ದೋಸೆಯಂತೆ (Heavy demand for flight tickets) ಬುಕ್ ಆಗಿವೆ.
ಶಿವಮೊಗ್ಗ ಮತ್ತು ಬೆಂಗಳೂರು ನಡುವೆ ವಿಮಾನಯಾನಕ್ಕೆ ಇಂಡಿಗೋ ಸಂಸ್ಥೆಗೆ ಅನುಮತಿ ನೀಡಲಾಗಿದೆ. ಇಂಡಿಗೋ ಸಂಸ್ಥೆಯ ಈ ವಿಮಾನದಲ್ಲಿ ಒಟ್ಟು 78 ಸೀಟುಗಳಿದ್ದು, ಮೊದಲ ದಿನದ ಪ್ರಯಾಣದ ಎಲ್ಲಾ ಟಿಕೆಟ್‌ಗಳು ಫುಲ್ ಬುಕ್ ಆಗಿವೆ (ಇವುಗಳಲ್ಲಿ ಆರು ಸೀಟುಗಳನ್ನು ಸಂಸ್ಥೆಯೇ ಕಾಯ್ದಿರಿಸಿಕೊಂಡಿದೆ). ಮೊದಲ ದಿನದ ಟಿಕೆಟ್‌ಗೆ ಯಾವ ಮಟ್ಟದಲ್ಲಿ ಬೇಡಿಕೆ ಇತ್ತೆಂದರೆ ಒಂದು ಟಿಕೆಟ್ 14,767 ರೂ.ಗಳಿಗೆ ಬುಕ್ ಆಗಿದೆ!
ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣದಿಂದ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವಿನ ಪ್ರಯಾಣ ದರವನ್ನು 2,699 ರೂ.ಗೆ ನಿಗದಿಪಡಿಸಲಾಗಿದೆ. ಆದರೆ, ಡಿಮ್ಯಾಂಡ್ ಹೆಚ್ಚಾಗುತ್ತಿದ್ದಂತೆಯೇ ಇಂಡಿಗೋ ಸಂಸ್ಥೆ ಟಿಕೆಟ್ ದರವನ್ನು ಹೆಚ್ಚಿಸಿದೆ. ಆದರೂ ಜನರ ಉತ್ಸಾಹ ಮಾತ್ರ ಕಡಿಮೆಯಾಗಿಲ್ಲ. ಐದುವರೆ ಪಟ್ಟು ದರ ಹೆಚ್ಚಳ ಮಾಡಿದರೂ ಡಿಮ್ಯಾಂಡ್ ಮಾತ್ರ ತಗ್ಗಿಲ್ಲ.
ಜುಲೈ 26ರಿಂದ ಬುಕಿಂಗ್ ಆರಂಭ, ಒಮ್ಮೆಗೇ ಭಾರಿ ಬೇಡಿಕೆ
ಇದುವರೆಗೆ ಕೇವಲ ಬಸ್ ಮತ್ತು ರೈಲ್ವೇ ಸೌಲಭ್ಯ ಇದ್ದ ಮಲೆನಾಡಿಗೆ ಮೊದಲ ಬಾರಿ ವಿಮಾನ ಯಾನದ ಅವಕಾಶವೂ ಸಿಕ್ಕಿದೆ. ಆಗಸ್ಟ್ 31ರಿಂದ ವಿಮಾನಯಾನ ಆರಂಭ ಎಂದು ಘೋಷಣೆಯಾದ ಮೇಲೆ ಟಿಕೆಟ್ ಎಲ್ಲಿ ಸಿಗುತ್ತದೆ ಎಂಬ ಹುಡುಕಾಟ ಜೋರಾಗಿತ್ತು. ಈ ನಡುವೆ ಇಂಡಿಗೋ ವಿಮಾನ ಯಾನ ಸಂಸ್ಥೆ ಜುಲೈ 26ರಂದು ಬುಕಿಂಗ್ ಆರಂಭ ಮಾಡಿತ್ತು.
ಇಂಡಿಗೋ ಸಂಸ್ಥೆ ತನ್ನ ವೆಬ್‌ಸೈಟ್‌ನಲ್ಲಿ ಸೀಟ್ ಕಾಯ್ದಿರಿಸುವ ಅವಕಾಶ ಕಲ್ಪಿಸಿದೆ. ಟಿಕೆಟ್‌ಗೆ ಬಾರಿ ಬೇಡಿಕೆ ಇರುವುದನ್ನು ಗಮನಿಸಿದ ಸಂಸ್ಥೆ ತನ್ನ ನಿಗದಿತ ಸಾಮಾನ್ಯ ದರವಾದ 2,699 ರೂ.ಗಳನ್ನು ಮೊದಲೇ ಏರಿಕೆ ಮಾಡಿತ್ತು. ಅದು ಆರಂಭಿಕ ದರವನ್ನು 3,999 ರೂ.ಗೆ ನಿಗದಿ ಮಾಡಿತು. ಆದರೆ, ಅದಕ್ಕೂ ಡಿಮ್ಯಾಂಡ್ ಜಾಸ್ತಿಯಾದ ಹಿನ್ನೆಲೆಯಲ್ಲಿ ಮುಂದಿನ ಹಂತದಲ್ಲಿ 5900 ರೂ., 6900 ರೂ., 7300 ರೂ. ವರೆಗೆ ಏರಿಕೆ ಮಾಡಿ ಒಂದು ಹಂತದಲ್ಲಿ ಅದು 14,767 ರೂ.ಗಳಿಗೆ ಏರಿತು.
ಇದನ್ನೂ ಓದಿ; Shivamogga Airport : ಲೋಕಾರ್ಪಣೆಗೊಂಡಿತು ರಾಜ್ಯದ 9ನೇ ವಿಮಾನ ನಿಲ್ದಾಣ, ಹಲವು ವಿಶೇಷಗಳ ತಾಣ
ಮುಂದಿನ ದಿನಗಳಿಗೂ ಭಾರಿ ಬೇಡಿಕೆ
ಮೊದಲ ವಿಮಾನ ಹಾರುವ ಆಗಸ್ಟ್ 31ರ ಎಲ್ಲ ಟಿಕೆಟ್‌ಗಳು ಬುಕ್ ಆಗಿರುವುದರಿಂದ ಈಗ ಮುಂದಿನ ದಿನಗಳ ಬೇಡಿಕೆ ಹೆಚ್ಚಾಗಿದೆ. ಸೆಪ್ಟೆಂಬರ್ ಮೊದಲ ವಾರದಲ್ಲೂ ಸಾಕಷ್ಟು ಬುಕಿಂಗ್ ನಡೆಯುತ್ತಿದ್ದು, ಸೆಪ್ಟೆಂಬರ್ 1ಕ್ಕೆ ವಿಮಾನ ಯಾನದ ದರವನ್ನು 4000 ರೂ.ಗಳಿಗೆ ನಿಗದಿ ಮಾಡಲಾಗಿದೆ.
ಬೆಂಗಳೂರು- ಶಿವಮೊಗ್ಗ ವಿಮಾನ ಟೈಮಿಂಗ್ ಹೇಗೆ?
ಈಗ ಸದ್ಯಕ್ಕೆ ವಿಮಾನ ಒಂದೇ ಬಾರಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗಿ ಅಲ್ಲಿಂದ ಮರಳಿ ಬೆಂಗಳೂರು ತಲುಪಲಿದೆ.
- ಬೆಳಗ್ಗೆ 9.50ಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ವಿಮಾನ ಬೆಳಗ್ಗೆ 10.50ಕ್ಕೆ ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣ ತಲುಪಲಿದೆ.
- ಅದೇ ದಿನ ಬೆಳಗ್ಗೆ 11.25ಕ್ಕೆ ಶಿವಮೊಗ್ಗದಿಂದ ಹೊರಟು ಮಧ್ಯಾಹ್ನ 12.25ಕ್ಕೆ ಬೆಂಗಳೂರು ವಿಮಾನ ನಿಲ್ದಾಣ ತಲುಪಲಿದೆ.
ಯಾವ ಯಾವ ಭಾಗಕ್ಕೆ ಅನುಕೂಲ?
ಮಲೆನಾಡಿನ ಏಕೈಕ ವಿಮಾನ ನಿಲ್ದಾಣವಾಗಿರುವ ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 27ರಂದು ಉದ್ಘಾಟಿಸಿದ್ದರು.. 2007ರಲ್ಲಿ ಕಿರು ವಿಮಾನ ನಿಲ್ದಾಣದ ಕನಸಿನೊಂದಿಗೆ ಶುರುವಾದ ಇದು ಈಗ ಬೋಯಿಂಗ್ ವಿಮಾನ ಇಳಿಸುವಷ್ಟು ಶಕ್ತಿ ಪಡೆದುಕೊಂಡಿದೆ. ಆಗಸ್ಟ್ 11ರಿಂದ ವಿಮಾನ ಯಾನ ಸೇವೆ ಆರಂಭವಾಗಲಿದೆ ಎಂದು ಹೇಳಲಾಗಿದ್ದರೂ ತಾಂತ್ರಿಕ ಕಾರಣಗಳಿಂದ ತಡವಾಗಿದೆ.
ಉಡುಪಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಹುಬ್ಬಳ್ಳಿ ಭಾಗದ ಪ್ರಯಾಣಿಕರಿಗೆ ಇದರಿಂದ ಅನುಕೂಲವಾಗಲಿದೆ.