Site icon Vistara News

Shivamogga Dasara 2022 | ಶಿವಮೊಗ್ಗ ದಸರಾದಲ್ಲಿ ಕರಾಟೆ, ಸೈಕ್ಲಿಂಗ್‌ ಸ್ಪರ್ಧೆ; ಚಲನ ಚಿತ್ರೋತ್ಸವಕ್ಕೂ ಚಾಲನೆ

Shivamogga Dasara 2022

ಶಿವಮೊಗ್ಗ: ಕರಾಟೆ ಒಳ್ಳೆಯ ಆರೋಗ್ಯ, ಒಳ್ಳೆಯ ಬದುಕು ಮತ್ತು ಜೀವನಕ್ಕೆ ದಾರಿ ದೀಪವಾಗುವಂತಹ ಕ್ರೀಡೆ ಎಂದು ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ ಹೇಳಿದ್ದಾರೆ. ನಗರದ ಅಗಮುಡಿ ಕನ್ವೆನ್ಷನ್ ಹಾಲ್ ನಲ್ಲಿ ಮಹಾನಗರ ಪಾಲಿಕೆಯಿಂದ ಹಮ್ಮಿಕೊಂಡಿದ್ದ ಮಕ್ಕಳ ದಸರಾ (Shivamogga Dasara 2022 ) ಅಂಗವಾಗಿ ನಡೆದ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿ-೨೦೨೨ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕರಾಟೆಯಿಂದ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಬಹುದು. ಹಿಂದೆ ರಾಜ ಮಹಾರಾಜರ ಕಾಲದಲ್ಲಿಯೂ ಅಂಗರಕ್ಷಕ ಪಡೆಗಳಿಗೆ ಕರಾಟೆಯಂತಹ ತರಬೇತಿ ನೀಡಲಾಗುತ್ತಿತ್ತು. ದೈಹಿಕ, ಮಾನಸಿಕ ಸದೃಢತೆಗೆ ಈ ಕ್ರೀಡೆ ಅತ್ಯುತ್ತಮವಾಗಿದ್ದು, ಹಂತ ಹಂತವಾಗಿ ಬೆಳೆಯುತ್ತಾ ಬಂದಿದೆ ಎಂದರು.

ಕರಾಟೆ ಪಂದ್ಯಾವಳಿ ಉದ್ಘಾಟನೆಯ ದೃಶ್ಯ

ಸ್ಪರ್ಧಾ ಕಣದಲ್ಲಿ ಆರೋಗ್ಯಕರ ಪೈಪೋಟಿ ನಡೆಯಲಿ. ಇಲ್ಲಿ ಗೆದ್ದವರು ರಾಷ್ಟ್ರಮಟ್ಟದಲ್ಲಿ ಹೆಸರುಗಳಿಸಲಿ. ಸೋಲು ಗೆಲವನ್ನು ಸಮಾನವಾಗಿ ಸ್ವೀಕರಿಸಿ. ಕರಾಟೆ ಎಂದಾಕ್ಷಣ ಶಿವಮೊಗ್ಗ ವಿನೋದ್ ಜ್ಞಾಪಕಕ್ಕೆ ಬರುತ್ತಾರೆ. ಸುಮಾರು ೮ ಜಿಲ್ಲೆಗಳಿಂದ ಈ ಪಂದ್ಯಾವಳಿಗೆ ಕ್ರೀಡಾಪಟುಗಳು ಆಗಮಿಸಿದ್ದು, ಈ ರೀತಿಯ ಕರಾಟೆ ಪಂದ್ಯಾವಳಿಗಳನ್ನು ವಿನೋದ್ ಅವರು ಹಮ್ಮಿಕೊಳ್ಳುತ್ತಾ ಬಂದಿದ್ದಾರೆ. ಮಹಾನಗರ ಪಾಲಿಕೆ ಮಕ್ಕಳ ದಸರಾ ಸಂದರ್ಭದಲ್ಲಿ ಇಂತಹ ಕ್ರೀಡೆಗಳಿಗೆ ಉತ್ತೇಜನ ನೀಡುತ್ತಿರುವುದು ಸಂತೋಷದ ವಿಚಾರವಾಗಿದೆ ಎಂದರು.

ಈ ಸಂದರ್ಭದಲ್ಲಿ ಮಕ್ಕಳ ದಸರಾ ಸಮಿತಿ ಅಧ್ಯಕ್ಷೆ ಲತಾ ಗಣೇಶ್, ಮೇಯರ್ ಸುನಿತಾ ಅಣ್ಣಪ್ಪ, ಸುವರ್ಣಾ ಶಂಕರ್, ಸುರೇಖಾ ಮುರಳೀಧರ್, ಯು.ಹೆಚ್. ವಿಶ್ವನಾಥ್, ಕಲ್ಪನಾ ರಾಮು, ಜ್ಞಾನೇಶ್ವರ್, ಪ್ರಭು, ವಿನೋದ್, ಅಲ್ತಾಫ್ ಪಾಷಾ, ಸೈಯದ್ ರಿಝಾ, ದಿವಾಕರ್, ಕೃಷ್ಣಮೂರ್ತಿ, ಲೋಕೇಶ್, ರತ್ನಾಕರ್ ಮೊದಲಾದವರಿದ್ದರು.

ರಂಗ ಜಾಥಾಕ್ಕೆ ಚಾಲನೆ

ಶಿವಮೊಗ್ಗ ಮಹಾನಗರ ಪಾಲಿಕೆ ಆವರಣದಲ್ಲಿ ರಂಗ ದಸರಾ (Shivamogga Dasara 2022) ಅಂಗವಾಗಿ ರಂಗ ಜಾಥಾಕ್ಕೆ ಹಿರಿಯ ರಂಗ ನಿರ್ದೇಶಕ ಹಾಲೇಶ್ ಅವರು ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮೇಯರ್ ಸುನಿತಾ ಅಣ್ಣಪ್ಪ, ಹಿರಿಯ ರಂಗಕರ್ಮಿಗಳಾದ ಟಿ.ವಿ. ಹೆಗ್ಡೆ, ಕಾಂತೇಶ್, ಕದರಮಂಡಲಗಿ, ಕೊಟ್ರಪ್ಪ ಜಿ. ಹಿರೇಮಾಗಡಿ, ಆರ್.ಎಸ್. ಹಾಲಸ್ವಾಮಿ, ಹೊನ್ನಾಳಿ ಚಂದ್ರಶೇಖರ್, ಚನ್ನಬಸಪ್ಪ, ಆಯುಕ್ತ ಮಾಯಣ್ಣಗೌಡ, ರಂಗದಸರಾ ಸಮಿತಿ ಅಧ್ಯಕ್ಷ ಶಿರೀಶ್ ಎಂ.ಹೆಚ್., ಕೆ.ಜಿ. ವೆಂಕಟೇಶ್, ಧೀರರಾಜ್ ಹೊನ್ನವಿಲೆ, ರೇಣುಕಪ್ಪ ಮತ್ತಿತರರು ಇದ್ದರು.

ದಸರಾ ಚಲನಚಿತ್ರೋತ್ಸವಕ್ಕೂ ಚಾಲನೆ

ಶಿವಮೊಗ್ಗ ದಸರಾದ (Shivamogga Dasara 2022) ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾಗಿರುವ “ದಸರಾ ಚಲನಚಿತ್ರೋತ್ಸವ -೨೦೨೨ʼʼ ಕ್ಕೂ ಚಾಲನೆ ನೀಡಲಾಗಿದೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಬಿ.ಎಸ್. ಲಿಂಗದೇವರು ಕಾರ್ಯಕ್ರಮ ಉದ್ಘಾಟಿಸಿದರು. ಅವರು ಮಾತನಾಡಿ, ಯುವ ಜನತೆಯನ್ನು ಸದಭಿರುಚಿಯತ್ತ ಕೊಂಡೊಯ್ಯುವ ಸಿನಿಮಾಗಳು ಬರಬೇಕು ಎಂದು ಅಭಿಪ್ರಾಯಪಟ್ಟರು.

ದಸರಾ ಚಲನಚಿತ್ರೋತ್ಸವ -2022 ಉದ್ಘಾಟಿಸುತ್ತಿರುವ ಗಣ್ಯರು

ನಗರದ ಲಕ್ಷ್ಮಿ ಚಿತ್ರಮಂದಿರದಲ್ಲಿ ಮಹಾನಗರ ಪಾಲಿಕೆ, ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಶಿವಮೊಗ್ಗ ಬೆಳ್ಳಿ ಮಂಡಲ, ಸಿನಿಮೊಗೆ ಶಿವಮೊಗ್ಗ ಚಿತ್ರಸಮಾಜ ಸಂಯುಕ್ತವಾಗಿ, ದಸಾರದ ಭಾಗವಾಗಿ ಪುನೀತ್ ರಾಜ್ ಕುಮಾರ್ ಪುಣ್ಯ ಸ್ಮರಣೆಯಲ್ಲಿ “ದಸರಾ ಚಲನಚಿತ್ರೋತ್ಸವ -೨೦೨೨ʼʼ ಹಮ್ಮಿಕೊಂಡಿವೆ.

ಅಂಗೈಯಲ್ಲೇ ಎಲ್ಲಾ ತಾಂತ್ರಿಕತೆಗಳು ಇರುವುದರಿಂದ ಉತ್ತಮ ಗುಣಮಟ್ಟದ ಚಲನಚಿತ್ರ ಮೊಬೈಲ್ ನಿಂದಲೇ ಮಾಡಲು ಸಾಧ್ಯವಿದೆ. ಸಮಾಜವನ್ನು ಸಾಯಿಸಲು ನೀರಿಗೆ ವಿಷ ಹಾಕಬೇಕಾಗಿಲ್ಲ. ಜನರ ಮನ್ಸನ್ನು ಕಲುಷಿತಗೊಳಿಸಿ ಮಲೀನಗೊಳಿಸುವಂತೆ ಚಲನಚಿತ್ರಗಳು ಬರುತ್ತಿವೆ., ಜನರನ್ನು ದಿಕ್ಕುತಪ್ಪಿಸಿ ಕ್ಷೋಭೆ ಉಂಟು ಮಾಡುವಂತಹ ಸಿನಿಮಾಗಳು ಬರುತ್ತಿವೆ. ಸಿನಿಮಾ ಗೆದ್ದ ಮಾತ್ರಕ್ಕೆ ಅದು ಗುಣಮಟ್ಟದ್ದು ಎಂದು ಹೇಳುವಂತಿಲ್ಲ. ಯುವಶಕ್ತಿಯನ್ನು ಸದಭಿರುಚಿಗೆ ಒಯ್ಯುವ ಚಿತ್ರಗಳು ಬರಬೇಕು ಎಂದು ಬಿ.ಎಸ್. ಲಿಂಗದೇವರು ಅಭಿಪ್ರಾಯ ಪಟ್ಟರು.

ದಸರಾ ಅಂಗವಾಗಿ ಮಹಿಳೆಯರಿಗೆ ಆ್ಯಪಲ್​ ತಿನ್ನುವ ಸ್ಪರ್ಧೆ

ಸಾಂಸ್ಕೃತಿಕ ಶ್ರೀಮಂತಿಕೆಯ ಅಗತ್ಯವಿದೆ ಎಂದ ಅವರು, ಸಿನಿಮಾದ ಉದ್ದೇಶ ಏನೆಂದು ಕೇಳಿದರೆ ಕೆಲವರು ಮನರಂಜನೆ ಎನ್ನುತ್ತಾರೆ. ಕೆಲವರು ಇವತ್ತು ಸಿನಿಮಾ ಉದ್ಯಮವಾಗಿ ಬೆಳೆದಿದ್ದು, ಹಣ ಮಾಡುವುದೇ ಉದ್ದೇಶವೆನ್ನುತ್ತಾರೆ. ಮತ್ತೆ ಕೆಲವರು ಸಿನಿಮಾ ಒಂದು ಕಲೆ ಎನ್ನುತ್ತಾರೆ. ಇನ್ನೂ ಕೆಲವರು ನನ್ನ ನೆಲದ ಬಗ್ಗೆ, ನನ್ನ ಕಷ್ಟದ ಬಗ್ಗೆ ಜಗತ್ತಿಗೆ ಹೇಳುವಂತಹ ಮಾಧ್ಯಮ ಎಂದು ಕರೆಯುತ್ತಾರೆ. ಈ ರೀತಿ ವಿಭಿನ್ನ ಪ್ರತಿಕ್ರಿಯೆ ಸಿನಿಮಾದ ಬಗ್ಗೆ ಬರುತ್ತದೆ ಎಂದರು.

ಈ ಸಂದರ್ಭದಲ್ಲಿ ನಟಿಯರಾದ ಮೇಘಶ್ರೀ, ಅಂಕಿತಾ ಅಮರ್, ಶಾಸಕ ಡಿ.ಎಸ್. ಅರುಣ್, ಮೇಯರ್ ಸುನಿತಾ ಅಣ್ಣಪ್ಪ, ದಸರಾ ಚಿತ್ರೋತ್ಸವ ಸಮಿತಿ ಅಧ್ಯಕ್ಷೆ ಮಂಜುಳಾ ಶಿವಣ್ಣ, ಬೆಳ್ಳಿ ಮಂಡಲ ಸಂಚಾಲಕ ವೈದ್ಯನಾಥ್, ಚಿತ್ರಮಂದಿರ ಮಾಲೀಕರಾದ ಅಶೋಕ್, ಧೀರರಾಜ್ ಹೊನ್ನವಿಲೆ, ಚನ್ನಬಸಪ್ಪ, ಯೋಗೀಶ್, ಸುರೇಖಾ ಮುರಳೀಧರ್ ಮೊದಲಾದವರಿದ್ದರು.

ಸ್ಕೇಟಿಂಗ್ ಕ್ರೀಡಾಕೂಟ ಉದ್ಘಾಟನೆ

ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಗೋಪಾಳದ ಕ್ರೀಡಾ ಸಂಕೀರ್ಣದಲ್ಲಿ ʼʼಮಕ್ಕಳ ದಸರಾʼʼ ಅಂಗವಾಗಿ ರಾಜ್ಯಮಟ್ಟದ ಸ್ಕೇಟಿಂಗ್ ಕ್ರೀಡಾ ಕೂಟವನ್ನು ಶಾಸಕ ಕೆ.ಎಸ್. ಈಶ್ವರಪ್ಪ ಉದ್ಘಾಟಿಸಿರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸ್ಕೇಟಿಂಗ್ ಅತ್ಯುತ್ತಮ ಕ್ರೀಡೆಯಾಗಿದ್ದು, ಇಲ್ಲಿ ರಕ್ಷಣೆ ಅತಿಮುಖ್ಯವಾಗಿರುತ್ತದೆ. ವೇಗದ ಈ ಪಂದ್ಯಾವಳಿಯನ್ನು ಶಿವಮೊಗ್ಗ ದಸರಾ ಸಂಭ್ರಮದಲ್ಲಿ ನಿರಂತರವಾಗಿ ನಡೆಸುತ್ತಾ ಬಂದಿರುವುದ ಹೆಮ್ಮೆಯ ವಿಷಯ ಎಂದರು.

ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದ ಮೇಯರ್​ ಸುನೀತಾ ಅಣ್ಣಪ್ಪ

ಮಕ್ಕಳ ದಸರಾ ಸಮಿತಿಯ ಸದಸ್ಯೆ ಹಾಗೂ ಮಾಜಿ ಉಪಮೇಯರ್ ಸುರೇಖಾ ಮುರುಳೀಧರ್ ಅವರು ಮಾತನಾಡುತ್ತಾ, ಈ ಕ್ರೀಡಾ ಸಂಕಿರಣದಲ್ಲಿ ಈಜು ಹಾಗೂ ಇತರೆ ಕ್ರೀಡೆಗಳಂತೆ ಸ್ಕೇಟಿಂಗ್ ಸಹ ಅತ್ಯುತ್ತಮ ಕ್ರೀಡಾಂಗಣವನ್ನು ಹೊಂದಿದ್ದು, ಇದರ ಸದ್ಬಳಕೆ ಮಾಡಿಕೊಂಡ ಇಲ್ಲಿನ ನೂರಾರು ಮಕ್ಕಳು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹಿರಿಮೆಗಳಿಸಿರುವುದು ಸ್ವಾಗತಾರ್ಹ. ಶಿವಮೊಗ್ಗ ಮಹಾ ನಗರ ಪಾಲಿಕೆ ದಸರಾದ ಈ ಸಂದರ್ಭಧಲ್ಲಿ ನಡೆಸುತ್ತಿದ್ದ ನಗರಮಟ್ಟದ ಈ ಪಂದ್ಯಾ ಈಗ ರಾಜ್ಯಮಟ್ಟದವರೆಗೆ ವಿಸ್ತರಿಸಿದೆ ಎಂದರು.

ಈ ಸಂದರ್ಭದಲ್ಲಿ ಲತಾ ಗಣೇಶ್, ಸುರೇಖಾ ಮುರಳೀಧರ್,ಲತಾಗಣೇಶ್ ಮಂಜುನಾಥ್, ಶಿವಕುಮಾರ್, ಜ್ಞಾನೇಶ್ವರ್, ಸುವರ್ಣಾ ಶಂಕರ್, ರವಿ ಮೊದಲಾದವರಿದ್ದರು.

ರೈತ ದಸರಾ ಸಂಭ್ರಮ

ಕೆಸರು ಗದ್ದೆ ಓಟಕ್ಕೆ ಮೇಯರ್​ ಸುನೀತಾ ಅಣ್ಣಪ್ಪ ಚಾಲನೆ

ಶಿವಮೊಗ್ಗದ ಮಲವಗೊಪ್ಪದಲ್ಲಿ “ರೈತ ದಸರಾʼʼದ ಅಂಗವಾಗಿ ಕೆಸರು ಗದ್ದೆ ಓಟ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸುತ್ತಮುತ್ತಲ ಬಡಾವಣೆಯ ನಿವಾಸಿಗಳು ಈ ಸ್ಪರ್ಧೆಗಳಲ್ಲಿ ಭಾಗಹಿಸಿ ಖುಷಿ ಪಟ್ಟರು. ಮಲವಗೊಪ್ಪದ ಗದ್ದೆಯೊಂದರಲ್ಲಿ ಈ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಮಹಿಳೆಯರು, ಮಕ್ಕಳು ಸಹ ಹಲವರು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ | Shivamogga Dasara 2022 | ಶಿವಮೊಗ್ಗದ ಅದ್ಧೂರಿ ದಸರಾಕ್ಕೆ ಚಾಲನೆ

Exit mobile version