Site icon Vistara News

Shivamogga Dasara 2022 | ವಿಜೃಂಭಣೆಯಿಂದ ನಡೆಯುತ್ತಿರುವ ದಸರಾದಲ್ಲಿ ನಾಟಕೋತ್ಸವ, ಶ್ವಾನ ಪ್ರದರ್ಶನ

Shivamogga Dasara 2022

ಶಿವಮೊಗ್ಗ: ಮಹಾನಗರ ಪಾಲಿಕೆ ವತಿಯಿಂದ ನಡೆಯುತ್ತಿರುವ ಶಿವಮೊಗ್ಗ ದಸರಾ ಮಹೋತ್ಸವ (Shivamogga Dasara 2022) ಅತ್ಯಂತ ವಿಜೃಂಭಣೆಯಿಂದ ಮುಂದುವರಿದಿದ್ದು, ಬುಧವಾರ ಮಕ್ಕಳ ದಸರಾದಲ್ಲಿ ಸಾವಿರಾರು ಮಕ್ಕಳು ಭಾಗವಹಿಸಿದ್ದರು.

ನಗರದ ಗೋಪಿವೃತ್ತದಲ್ಲಿ ಮಕ್ಕಳ ಕಲರವ ಮುಗಿಲು ಮುಟ್ಟಿತ್ತು. ಸಾವಿರಾರು ಮಕ್ಕಳು ಒಟ್ಟಿಗೆ ಸೇರಿ ಮಕ್ಕಳ ದಸರಾದಲ್ಲಿ ಸಂಭ್ರಮಿಸಿದರು. ನೃತ್ಯ ಮಾಡಿದರು. ಕೀಲು ಕುದುರೆ ಇತರೆ ಜಾನಪದ ಕಲಾತಂಡಗಳು ಭಾಗಿಯಾಗಿಯಾಗಿ ಮಕ್ಕಳ ಸಂಭ್ರಮವನ್ನು ಹೆಚ್ಚಿಸಿದ್ದವು.

ಮಕ್ಕಳ ದಸರಾವನ್ನು ಈ ಬಾರಿಯ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ೬೨೫ ಕ್ಕೆ ೬೨೫ ಅಂಕ ಪಡೆದ ಪಂಚಮಿ, ನಯನಾ ಸಿದ್ದಪ್ಪ ಪೂಜಾರ್ ಅವರು ಉದ್ಘಾಟಿಸಿದರು. ನಗರದ ಸರ್ಕಾರಿ ಹಾಗೂ ಅನುದಾನ ಮತ್ತು ಅನುದಾನರಹಿತ ಶಾಲೆಗಳ ಸಾವಿರಾರು ಸಂಖ್ಯೆಯ ಮಕ್ಕಳು ಗೋಪಿ ವೃತ್ತದಿಂದ ಫ್ರೀಡಂ ಪಾರ್ಕ್ ವರೆಗೆ ಜಾಥಾ ನಡೆಸಿದರು. ಮೇಯರ್ ಸುನಿತಾ ಅಣ್ಣಪ್ಪ, ಮಕ್ಕಳದಸರಾ ಸಮಿತಿ ಅಧ್ಯಕ್ಷೆ ಲತಾ ಗಣೇಶ್ ಮೊದಲಾದವರಿದ್ದರು.

ಫ್ರೀಡಂ ಪಾರ್ಕ್‌ನಲ್ಲಿ ಸಾಗರದ “ನಮ್ಮ ವನಶ್ರೀʼʼ ತಂಡದಿಂದ ನೃತ್ಯ-ಯೋಗ, ಜಿಲ್ಲಾ ಪೊಲೀಸ್ ತಂಡದಿಂದ ಶ್ವಾನಗಳ ಪ್ರದರ್ಶನ ಮತ್ತು ಜಿಲ್ಲಾ ಅಗ್ನಿಶಾಮಕದಳದಿಂದ ಅಗ್ನಿ ಅವಘಡ ಕುರಿತು ಅಣಕು ಪ್ರದರ್ಶನ ನಡೆದವು.

ಮಕ್ಕಳ ದಸರಾದಲ್ಲಿ ಶಾಲಾ ಮಕ್ಕಳ ಕಲರವ

“ಪರಿಸರ ದಸರಾʼʼ ಅಂಗವಾಗಿ ಬಿ.ಎಚ್.ರಸ್ತೆಯ ಮೇನ್ ಮಿಡ್ಲ್ ಸ್ಕೂಲ್ನಲ್ಲಿ ಶಾಲಾ ಮಕ್ಕಳಿಗೆ ಕ್ವಿಜ್ ಮತ್ತು ಪ್ರಬಂಧ ಸ್ಪರ್ಧೆ ನಡೆಯಿತು. ಯುವ ದಸರಾ ನಿಮಿತ್ತ ಕ್ರಾಸ್ ಕಂಟ್ರಿ ಓಟದ ಸ್ಪರ್ಧೆ ಸಹ್ಯಾದ್ರಿ ಕಾಲೇಜಿನಲ್ಲಿ ನಡೆಯಿತು. ನೆಹರು ಕ್ರೀಡಾಂಗಣದಲ್ಲಿ ಸಂಜೆ ನಡೆದ ಕಬಡ್ಡಿ ಪಂದ್ಯಾವಳಿ ಯುವ ದಸರಾಕ್ಕೆ ಮೆರುಗು ನೀಡಿತು. ಯುವ ದಸರಾ ಸಮಿತಿ ಅಧ್ಯಕ್ಷ ಧೀರರಾಜ್ ಹೊನ್ನವಿಲೆ, ಪಾಲಿಕೆ ಸದಸ್ಯ ಬಿ.ಎ.ರಮೇಶ್ ಹೆಗ್ಡೆ, ಸಮಿತಿ ಸದಸ್ಯರಾದ ನಾಗರಾಜ್ ಕಂಕಾರಿ ಅನಿತಾ ರವಿಶಂಕರ್ ಮತ್ತಿತರರು ಇದ್ದರು.

ಕಲಾ ದಸರಾದಲ್ಲಿ ಛಾಯಾ ಚಿತ್ರ ಪ್ರದರ್ಶನ

ಕುವೆಂಪು ರಂಗಮಂದಿರದಲ್ಲಿ ನಡೆದ “ಕಲಾ ದಸರಾʼʼದಲ್ಲಿ ಹವ್ಯಾಸಿ ಛಾಯಾಗ್ರಾಹಕರ ಛಾಯಾಚಿತ್ರ ಪ್ರದರ್ಶನವನ್ನು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಉದ್ಘಾಟಿಸಿದರು. ಚಿತ್ರಕಲಾ ಪ್ರದರ್ಶನ ಮತ್ತು ಚಿತ್ರ ಸಂತೆಗೂ ಚಾಲನೆ ನೀಡಲಾಯಿತು. ಸಂಜೆ ಕವಿಗೋಷ್ಠಿ, ವಿಚಾರ ಸಂಕಿರಣ ನಡೆಯಿತು. ಎಂ.ಎಸ್.ನರಸಿಂಹಮೂರ್ತಿ, ವೈ.ಎಚ್. ಗುಂಡೂರಾವ್, ಇಂದುಮತಿ ಸಾಲಿಮಠ, ಉಮೇಶ್ ಗೌಡ ಅವರಿಂದ ಹರಟೆ ಕಾರ್ಯಕ್ರಮ ಕೂಡ ಜನರ ಮೆಚ್ಚುಗೆಗೆ ಪಾತ್ರವಾಯಿತು.

ಕಲಾ ತಂಡಗಳ ನೃತ್ಯ ಪ್ರದರ್ಶನ

ಮಹಿಳೆಯರ ಸ್ವಾತಂತ್ರ್ಯದ ನಡಿಗೆ

“ಮಹಿಳಾ ದಸರಾʼʼದ ಭಾಗವಾಗಿ ನಗರದ ಗೋಪಿ ವೃತ್ತದಿಂದ ಫ್ರೀಡಂ ಪಾರ್ಕ್‌ವರೆಗೆ ಮಹಿಳಾ ಸ್ವಾತಂತ್ರ್ಯದ ನಡಿಗೆ ಜರುಗಿತು. ಕಲಾ ಸಾಂಸ್ಕೃತಿಕ ತಂಡಗಳು, ಬೊಂಬೆ ಕುಣಿತ, ಡೊಳ್ಳು ಹಾಗೂ ವಿವಿಧ ವೇಷಭೂಷಣಗಳನ್ನು ತೊಟ್ಟ ಮಹಿಳೆಯರು ಹೆಜ್ಜೆ ಹಾಕಿದರು. ತದ ನಂತರ ನಡೆದ “ಮಹಿಳಾ ದಸರಾʼʼದ ಸಮಾರೋಪ ಸಮಾರಂಭವನ್ನು ಕಿರುತೆರೆ ನಟಿಯರಾದ ನಯನಾ ಹಾಗೂ ಅನ್ವಿತಾ ಉದ್ಘಾಟಿಸಿದರು.

ಕಾಫಿನಾಡು ಚಂದು ವಿಶೇಷ ಅತಿಥಿಯಾಗಿದ್ದರು. ಮೇಯರ್ ಸುನೀತಾ ಅಣ್ಣಪ್ಪ, ರೇಖಾ ರಂಗನಾಥ್, ಅನಿತಾ ರವಿಶಂಕರ್, ಎಸ್.ಜ್ಞಾನೇಶ್ವರ್, ಆರತಿ ಪ್ರಕಾಶ್, ಸುವರ್ಣಾ ಶಂಕರ್, ಸುರೇಖಾ ಮುರುಳೀಧರ್, ಮಂಜುಳಾ ಶಿವಣ್ಣ, ಸಂಗೀತಾ ನಾಗರಾಜು, ಭಾನುಮತಿ ವಿನೋದಕುಮಾರ್, ಕಲ್ಪನಾ ರಮೇಶ್, ಲಕ್ಷ್ಮೀ ಶಂಕರ್ ನಾಯ್ಕ, ಅನ್ನಪೂರ್ಣಾ ಇತರರು ಇದ್ದರು.

ಜಿಲ್ಲಾ ಪೊಲೀಸ್ ತಂಡದಿಂದ ಶ್ವಾನಗಳ ಪ್ರದರ್ಶನ

ಇಂದಿನಿಂದ ಹಾಸ್ಯನಾಟಕ ಸ್ಪರ್ಧೆ

ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಆಯೋಜನೆಗೊಂಡಿರುವ ರಂಗದಸರಾ ಭಾಗವಾಗಿ ಇಂದಿನಿಂದ ( ಸೆ. ೨೯) ರಾಜ್ಯ ಮಟ್ಟದ ಹಾಸ್ಯ ನಾಟಕ ಸ್ಪರ್ಧೆಗಳು ಆಯೋಜನೆಗೊಂಡಿವೆ. ಈ ನಾಟಕ ಸ್ಪರ್ಧೆಗಳು ಸೆ. ೨೯ ಮತ್ತು ೩೦ ರಂದು ಕುವೆಂಪು ರಂಗ ಮಂದಿರ ಹಾಗೂ ಅ. ೦೧ ಮತ್ತು ೦೨ ರಂದು ಸುವರ್ಣ ಸಂಸ್ಕೃತಿ ಭವನದಲ್ಲಿ ನಡೆಯಲಿವೆ.

ರಾಜ್ಯದ ವಿವಿಧೆಡೆಯಿಂದ ಬಂದ ಒಟ್ಟು 28 ತಂಡಗಳು ಈ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸುತ್ತಿವೆ. ಈ ಪೈಕಿ ಸಮಯ ಹಾಗೂ ಸ್ಥಳದ ಲಭ್ಯತೆಯ ಆಧಾರದ ಮೇಲೆ ೧೬ ನಾಟಕಗಳನ್ನು ಮಾತ್ರ ಪ್ರದರ್ಶನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ವಿಜೇತ ತಂಡಕ್ಕೆ ಪ್ರಥಮ ಬಹುಮಾನವಾಗಿ 30,000 ರೂ., ದ್ವಿತೀಯ ಬಹುಮಾನ 20,000 ರೂ. ಹಾಗೂ ತೃತೀಯ ಬಹುಮಾನ 15,000 ರೂ. ನಗದು ಪುರಸ್ಕಾರ ಜೊತೆಗೆ ಚಾಮುಂಡೇಶ್ವರಿ ಟ್ರೋಫಿ ನೀಡಲಾಗುತ್ತದೆ. ಇದಲ್ಲದೇ ಶ್ರೇಷ್ಠ ನಟ, ಶ್ರೇಷ್ಠ ನಟಿ ಹಾಗೂ ಶ್ರೇಷ್ಠ ನಿರ್ದೇಶನಕ ಪ್ರಶಸ್ತಿ ನೀಡಲಾಗುತ್ತದೆ. ಇದಕ್ಕೆ ನಗದು ಪುರಸ್ಕಾರವೂ ಇದೆ.

ಈ ನಾಟಕ ಸ್ಪರ್ಧೆಗಳನ್ನು ಹೆಸರಾಂತ ರಂಗಕರ್ಮಿ, ಪರಿಸರಚಿಂತಕ, ವಿಶ್ರಾಂತ ಪ್ರಾಚಾರ್ಯ ಪ್ರೊ. ಬಿ. ಎಂ.ಕುಮಾರಸ್ವಾಮಿ ಉದ್ಘಾಟಿಸಲಿದ್ದು, ರಂಗಕರ್ಮಿಗಳಾದ ಬಿ.ಎಂ.ರಾಜಕುಮಾರ್, ಗಾಯತ್ರಿ, ಅಭಿರುಚಿತಂಡದ ಅಧ್ಯಕ್ಷರಾದ ಡಾ.ಶಿವರಾಮ ಕೃಷ್ಣನ್, ರಂಗದಸರಾ ಸಮಿತಿಯ ಸದಸ್ಯ ಎಸ್. ಎನ್. ಚೆನ್ನಬಸಪ್ಪ, ಪ್ರಭಾಕರ್, ರಾಹುಲ್ ಬಿದರೆ, ಆರ್.ಸಿ.ನಾಯ್ಕ, ಆರ್. ಎಸ್. ಸತ್ಯನಾರಾಯಣ, ಮೀನಾ ಗೋವಿಂದರಾಜ್, ಹೆಚ್.ಮೂರ್ತಿ, ಮಧು ನಾಯ್ಕ, ಡಾ.ರೇಖಾ, ಕೆ. ಸುರೇಶ್, ಶ್ರೀಕಾಂತ್, ಅನಿಲ್ ಮೂರ್ತಿ, ಪ್ರತೀಕ್ಷಾ, ಶೋಭಾ, ವಿನೀತ್, ರೂಪಾ, ಲಕ್ಷ್ಮೀ, ನಾಗರಾಜ್‌ ರಾವ್‌ ಪಾಲ್ಗೊಳ್ಳಲಿದ್ದಾರೆ. ರಂಗದಸರಾ ಸಮಿತಿಯ ಅಧ್ಯಕ್ಷ ಶಿರೀಶ್ ಅಧ್ಯಕ್ಷತೆ ವಹಿಸಲಿದ್ದಾರೆ.

ರಾಜ್ಯಮಟ್ಟದ ಶ್ವಾನ ಪ್ರದರ್ಶನ
“ರೈತ ದಸರಾ -2022ʼʼ ಅಂಗವಾಗಿ ಅ.2ರಂದು ಬೆಳಗ್ಗೆ 9ಕ್ಕೆ ಗಾಂಧಿ ಪಾರ್ಕ್ ಆವರಣದಲ್ಲಿ ರಾಜ್ಯ ಮಟ್ಟದ ಶ್ವಾನ ಪ್ರದರ್ಶನ ಏರ್ಪಡಿಸಲಾಗಿದೆ.
ಈ ಬಾರಿಯ ಶ್ವಾನ ಪ್ರದರ್ಶನದಲ್ಲಿ 15 ಕ್ಕೂ ಹೆಚ್ಚು ವಿವಿಧ ಆಕರ್ಷಕ ತಳಿಯ ಶ್ವಾನಗಳು ಪಾಲ್ಗೊಳ್ಳಲಿದ್ದು, 10 ಕೋಟಿ ರೂಪಾಯಿ ಬೆಲೆ ಬಾಳುವ ಟಿಬೇಟಿಯನ್ ಮ್ಯಾಸ್ಟಿಫ್ ಶ್ವಾನವು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ. ಪ್ರದರ್ಶನದಲ್ಲಿ ಭಾಗವಹಿಸುವ ಅತ್ಯುತ್ತಮ ಶ್ವಾನಗಳಿಗೆ ತಳಿವಾರು ಪ್ರಥಮ ಬಹುಮಾನ15,000 ರೂ., ದ್ವಿತೀಯ ಬಹುಮಾನ10,000 ರೂ. ಹಾಗೂ ತೃತೀಯ ಬಹುಮಾನ 7000 ರೂ., 4ನೇ ಬಹುಮಾನ ರೂ. 5000, 5ನೇ ಬಹುಮಾನ ರೂ. 3000ಗಳೊಂದಿಗೆ ಪಾರಿತೋಷಕ ಹಾಗೂ 6 ರಿಂದ 8ನೇ ಬಹುಮಾನ ಪಾರಿತೋಷಕವನ್ನು ನೀಡಲಾಗುವುದು.
ಆಸಕ್ತ ಶ್ವಾನ ಮಾಲೀಕರು ತಮ್ಮ ಶ್ವಾನಗಳ ಭಾಗವಹಿಸಲು ನೊಂದಾಯಿಸಲು ಹತ್ತಿರದ ಪಶುವೈದ್ಯರನ್ನು ಸಂಪರ್ಕಿಸುವುದು. ಶ್ವಾನ ಮಾಲೀಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡುವಂತೆ ರೈತ ದಸರಾ ಸಮಿತಿ ಅಧ್ಯಕ್ಷ ಡಿ. ನಾಗರಾಜ ಕೋರಿದ್ದಾರೆ.

ಯಾವ್ಯಾವ ನಾಟಕ ಪ್ರದರ್ಶನ?: ಸೆ.29ರಂದು ಕುವೆಂಪು ರಂಗಮಂದಿರದಲ್ಲಿ ಸಂಜೆ 4 ರಿಂದ ಬೆಂಗಳೂರಿನ ಉದಯ ಕಲಾ ನಿಕೇತನತಂಡದಿಂದ “ಬ್ಲಾಕ್ಔಟ್ʼʼ, ತೆಕ್ಕಟ್ಟೆಯ ಕಲಾಶಕ್ತಿ ಕಲಾ ತಂಡದಿಂದ “ಆಟಗಾರʼʼ, ಬಳ್ಳಾರಿಯ ಧಾತ್ರಿ ಸಿರಿಗೆರೆ ತಂಡದಿಂದ ರಾಜೇಂದ್ರ ಕಾರಂತ್‌ ರಚನೆಯ ದಾವಣಗೆರೆ ಭೀಮೇಶ್ ನಿರ್ದೇಶನದ “ಮುದ್ದಣ್ಣನ ಪ್ರಮೋಷನ್ ಪ್ರಸಂಗʼʼ ನಾಟಕ ಪ್ರದರ್ಶನಕಾಣಲಿವೆ.
ಸೆ.30 ರಂದು ಸಂಜೆ 4ರಿಂದ ಶಿವಮೊಗ್ಗದ ಬೆಳಕು ತಂಡದಿಂದ “ಚೋರಚರಣದಾಸʼʼ, ಶಿಕಾರಿಪುರದ ರಂಗ ಜೀವಿಗಳು ತಂಡದಿಂದ “ಲ್ಯಾಂಡ್ ಟು ಭೂಲೋಕʼʼ, ದಾವಣಗೆರೆ ರಂಗ ಅನಿಕೇತನ ತಂಡದಿಂದ “ಪುಕ್ಕಟೆ ಸಲಹೆʼʼ ಹಾಗೂ ಕಲ್ಪ ಸಹ್ಯಾದ್ರಿ ತಂಡದಿಂದ “ಚೀಟಿಕಾಟʼʼ ನಾಟಕಗಳ ಪ್ರದರ್ಶನ ನಡೆಯಲಿದೆ.

ಮಕ್ಕಳಿಂದ ನೃತ್ಯ ಪ್ರದರ್ಶನ

ಅ.1 ರಂದು ಸುವರ್ಣ ಸಂಸ್ಕೃತಿ ಭವನದಲ್ಲಿ ಸಂಜೆ 4ರಿಂದ ಬೆಂಗಳೂರಿನ ಶಾರದಾ ಕಲಾ ನಿಕೇತನ ತಂಡದಿಂದ “ಹೋಂ ರೂಲ್ʼʼ, ಸಂಜೆ 5.30ರಿಂದ ಬೆಂಗಳೂರಿನ ಪ್ರವರ್ ಥಿಯೇಟರ್‌ ತಂಡದಿಂದ “ಬೆಗ್ ಬಾರೋ ಅಳಿಯʼʼ, ಬೆಂಗಳೂರಿನ ರಂಗ ಪಯಣತಂಡದಿಂದ “ಬಿದ್ದೂರಿನ ಬಿಗ್ ಬೆನ್ʼʼ ಹಾಗೂ ರಂಗ ಸಂಗಮ ತಂಡದಿಂದ “ಕೃಷ್ಣ ರಾಯಭಾರʼʼ ನಾಟಕಗಳು ಪ್ರದರ್ಶನ ಕಾಣಲಿವೆ.
ಅ.2 ರಂದು ಮಧ್ಯಾಹ್ನ 10.30ರಿಂದ ಬೆಂಗಳೂರಿನ ಜನಪದರು ಸಾಂಸ್ಕೃತಿಕ ವೇದಿಕೆ ತಂಡದಿಂದ “ಸಮ್ ಸಾರʼʼ, ಮೈಸೂರಿನ ರಂಗ ಬದುಕುತಂಡದಿಂದ “ಮುದುಕನ ಮದುವೆʼʼ, ಮಂಗಳೂರಿನ ಅಸ್ತಿತ್ವ ತಂಡದಿಂದ “ಕಂಡೋನಿಯನ್ಸ್ʼʼ ನಾಟಕಗಳು ಪ್ರದರ್ಶನಗೊಳ್ಳಲಿವೆ.

ಇದನ್ನೂ ಓದಿ | Shivamogga Dasara 2022 | ಶಿವಮೊಗ್ಗ ದಸರಾದಲ್ಲಿ ಕರಾಟೆ, ಸೈಕ್ಲಿಂಗ್‌ ಸ್ಪರ್ಧೆ; ಚಲನ ಚಿತ್ರೋತ್ಸವಕ್ಕೂ ಚಾಲನೆ

Exit mobile version