Site icon Vistara News

Shivamogga Election Result 2024: ಶಿವಮೊಗ್ಗದಲ್ಲಿ ಬಿಜೆಪಿಯ ಬಿ.ವೈ.ರಾಘವೇಂದ್ರಗೆ ವಿಜಯಮಾಲೆ

Shivamogga Election Result 2024

Shivamogga Election Result 2024: BY Raghavendra Wins Against Geetha Shivarajkumar

ಶಿವಮೊಗ್ಗ: ಕರ್ನಾಟಕದಲ್ಲಿಯೇ ಅತಿ ಹೆಚ್ಚು ಕುತೂಹಲ ಕೆರಳಿಸಿರುವ ಕ್ಷೇತ್ರಗಳಲ್ಲಿ ಒಂದಾಗಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ (Shivamogga Election Result 2024) ಬಿಜೆಪಿಯ ಬಿ.ವೈ.ರಾಘವೇಂದ್ರ ಗೆಲುವು ಸಾಧಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಪುತ್ರ ಬಿ.ವೈ. ರಾಘವೇಂದ್ರ, ಮತ್ತೊಬ್ಬ ಮಾಜಿ ಸಿಎಂ ಎಸ್‌.ಬಂಗಾರಪ್ಪ ಅವರ ಪುತ್ರಿ, ನಟ ಶಿವರಾಜ್‌ ಕುಮಾರ್‌ ಅವರ ಪತ್ನಿ ಗೀತಾ ಶಿವರಾಜ್‌ ಕುಮಾರ್‌ (Geetha Shivarajkumar) ಅವರ ನಡುವಿನ ಪೈಪೋಟಿಯ ಮಧ್ಯೆ ರಾಘವೇಂದ್ರ ಗೆಲುವು ಸಾಧಿಸಿದ್ದಾರೆ. ಬಂಡಾಯದ ಬಾವುಟ ಬೀಸಿದ್ದ ಕೆ.ಎಸ್.ಈಶ್ವರಪ್ಪ (KS Eshwarappa) ಅವರಿಗೆ ಹಿನ್ನಡೆಯಾದಂತಾಗಿದೆ.

ಯಾರಿಗೆ ಎಷ್ಟು ಮತ?

ಬಿ.ವೈ.ರಾಘವೇಂದ್ರ (ಬಿಜೆಪಿ): 7,78,721

ಗೀತಾ ಶಿವರಾಜ್‌ಕುಮಾರ್‌ (ಕಾಂಗ್ರೆಸ್): 5,35,006

ಕೆ.ಎಸ್.ಈಶ್ವರಪ್ಪ (ಪಕ್ಷೇತರ): 30,050

ರಾಘವೇಂದ್ರ ಗೆಲುವಿನ ಅಂತರ: 2,43,715

ಕ್ಷೇತ್ರದಲ್ಲಿ ಬಿ.ವೈ.ರಾಘವೇಂದ್ರ ಅವರಿಗೆ ಹಲವು ರೀತಿಯ ಅನುಕೂಲಕರ ವಾತಾವರಣವಿತ್ತು. ಕ್ಷೇತ್ರವು ಬಿಜೆಪಿ ಭದ್ರಕೋಟೆಯಾಗಿದೆ. ಬಿ.ಎಸ್‌.ಯಡಿಯೂರಪ್ಪ ಅವರು ತವರು ಜಿಲ್ಲೆ ಶಿವಮೊಗ್ಗ. ರಾಘವೇಂದ್ರ ಅವರ ಸಹೋದರ ಬಿ.ವೈ.ವಿಜಯೇಂದ್ರ ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ. ಅದರಲ್ಲೂ, ಸಂಸದರಾಗಿ ಬಿ.ವೈ.ರಾಘವೇಂದ್ರ ಅವರು ರೈಲು ಸಂಪರ್ಕ ಸೇರಿ ಹಲವು ರೀತಿಯ ಅಭಿವೃದ್ಧಿಗೆ ಕಾರಣರಾಗಿದ್ದರು. ನರೇಂದ್ರ ಮೋದಿ ಅವರ ಅಲೆಯೂ ಇಲ್ಲಿ ಕೆಲಸ ಮಾಡುವ ಸಾಧ್ಯತೆ ಇತ್ತು. ಹಾಗಾಗಿ, ರಾಘವೇಂದ್ರ ಅವರು ಗೆಲುವಿನ ವಿಶ್ವಾಸದಲ್ಲಿದ್ದರು. ಅದರಂತೆ ಅವರು ಮುನ್ನಡೆ ಸಾಧಿಸಿದ್ದಾರೆ.

ಎಸ್.‌ ಬಂಗಾರಪ್ಪ ಅವರ ಪುತ್ರಿ ಗೀತಾ ಶಿವರಾಜ್‌ ಕುಮಾರ್‌ ಅವರು ಎರಡನೇ ಬಾರಿ ಶಿವಮೊಗ್ಗ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದು, ಈ ಬಾರಿ ರಣತಂತ್ರ ರೂಪಿಸಿದ್ದರು. ಶಿವರಾಜ್‌ ಕುಮಾರ್‌ ಅವರ ವರ್ಚಸ್ಸು, ಎಸ್‌. ಬಂಗಾರಪ್ಪ ಅವರ ಹೆಸರು, ಸಹೋದರ, ಸಚಿವ ಮಧು ಬಂಗಾರಪ್ಪ ನೆರವಿನ ಬಲದೊಂದಿಗೆ ಅವರು ಅಬ್ಬರದ ಪ್ರಚಾರ ಕೈಗೊಂಡಿದ್ದ ಕಾರಣ ಬಿ.ವೈ.ರಾಘವೇಂದ್ರ ಅವರಿಗೆ ಗೆಲುವು ಸುಲಭವಲ್ಲ ಎಂದು ಹೇಳಲಾಗುತ್ತಿತ್ತು. ಆದರೆ, ಗೀತಾ ಶಿವರಾಜ್‌ ಕುಮಾರ್‌ ಅವರಿಗೆ ಮತ್ತೆ ಹಿನ್ನಡೆಯಾದಂತಾಗಿದೆ.

ಕೆ.ಎಸ್.ಈಶ್ವರಪ್ಪ ಅವರು ಪುತ್ರ ಕಾಂತೇಶ್‌ಗೆ ಟಿಕೆಟ್‌ ನೀಡಲಿಲ್ಲ ಎಂದು ಬಿಜೆಪಿ ವಿರುದ್ಧ ಬಂಡಾಯವೆದ್ದು, ಪಕ್ಷೇತರರಾಗಿ ಚುನಾವಣೆ ಕಣಕ್ಕಿಳಿದಿದ್ದರು. ಕಟ್ಟಾ ಆರೆಸ್ಸೆಸ್ಸಿಗರಾಗಿರುವ ಕೆ.ಎಸ್.ಈಶ್ವರಪ್ಪ ಅವರು ಹಿಂದುತ್ವದ ನೆಲೆಗಟ್ಟಿನಲ್ಲಿ ಮತಯಾಚನೆ ಮಾಡಿದ್ದರು. ಹಾಗಾಗಿ, ಇವರು ಮತಗಳನ್ನು ಒಡೆದಿದ್ದರೂ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿತ್ತು. ಇಷ್ಟೆಲ್ಲ ಕಾರಣಗಳಿಂದಾಗಿ ಶಿವಮೊಗ್ಗ ಲೋಕಸಭೆ ಕ್ಷೇತ್ರವು ಎಲ್ಲರಿಗೂ ಪ್ರತಿಷ್ಠೆಯ ಕಣವಾಗಿತ್ತು.

2019, 2014ರ ಫಲಿತಾಂಶ ಏನಾಗಿತ್ತು?

2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಬಿ.ವೈ.ರಾಘವೇಂದ್ರ ಅವರು 2.23 ಲಕ್ಷ ಮತಗಳ ಅಂತರದಲ್ಲಿ ಜೆಡಿಎಸ್‌ನ ಮಧು ಬಂಗಾರಪ್ಪ ಅವರ ವಿರುದ್ಧ ಗೆಲುವು ಸಾಧಿಸಿದ್ದರು. 2014ರಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿಯಿಂದ ಸ್ಪರ್ಧಿಸಿ ಸುಮಾರು 3 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದರು. ಆಗ ಎಸ್.‌ ಬಂಗಾರಪ್ಪ ಅವರ ಪುತ್ರಿ, ನಟ ಶಿವರಾಜ್‌ ಕುಮಾರ್‌ ಪತ್ನಿ ಗೀತಾ ಶಿವರಾಜ್‌ ಕುಮಾರ್‌ ಅವರು ಕೂಡ ಸ್ಪರ್ಧಿಸಿ, ಮೂರನೇ ಸ್ಥಾನ ಪಡೆದಿದ್ದರು. ಈಗ ಮತ್ತೆ ಗೀತಾ ಶಿವರಾಜ್‌ ಕುಮಾರ್‌ ಅವರು ಕಣಕ್ಕಿಳಿದಿದ್ದರು.

ಇದನ್ನೂ ಓದಿ: Raichur Election Result 2024: ರಾಯಚೂರಿನಲ್ಲಿ ಕಾಂಗ್ರೆಸ್‌ನ ಕುಮಾರ್‌ ನಾಯಕ್‌ ಜಯಭೇರಿ; ಹಾಲಿ ಎಂಪಿಗೆ ಮುಖಭಂಗ

Exit mobile version