Site icon Vistara News

Shivamogga News: ಬಿಜೆಪಿಗೆ ಗುಡ್‌ ಬೈ ಹೇಳಿದ ಚೇತನರಾಜ ಕಣ್ಣೂರು; ಶೀಘ್ರ ಮುಂದಿನ ನಿರ್ಧಾರ

#image_title

ಸಾಗರ: ಅತ್ಯಂತ ಬೇಸರದಿಂದ ಭಾರತೀಯ ಜನತಾ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಮತ್ತು ಸ್ಥಾನಕ್ಕೆ ರಾಜಿನಾಮೆ ನೀಡುತ್ತಿರುವುದಾಗಿ ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಜಿಲ್ಲಾ ವಿಶೇಷ ಆಹ್ವಾನಿತ ಚೇತನರಾಜ ಕಣ್ಣೂರು ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರ ದುವರ್ತನೆ ಮತ್ತು ಸರ್ವಾಧಿಕಾರಿ ಧೋರಣೆಯಿಂದ ಬೇಸತ್ತು ರಾಜಿನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ನನ್ನಂತೆಯೆ ಪಕ್ಷದಲ್ಲಿ ಸಾಕಷ್ಟು ಜನರು ಶಾಸಕರ ವರ್ತನೆಯಿಂದ ಬೇಸತ್ತಿದ್ದು ಭಯದಿಂದ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

“ಕಳೆದ ಹನ್ನೆರಡು ವರ್ಷದ ಹಿಂದೆ ಬಿಜೆಪಿಗೆ ಸೇರಿದ ನಾನು ಯುವ ಮೋರ್ಚಾದಿಂದ ಹಿಡಿದು ತಾಲೂಕು ಅಧ್ಯಕ್ಷನಾಗಿ, ಜಿಲ್ಲಾ ಕಾರ್ಯದರ್ಶಿಯಾಗಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದೇನೆ. ಕೆಜೆಪಿ ಮತ್ತು ಬಿಜೆಪಿ ಇಬ್ಭಾಗವಾದಾಗ ತಾಲೂಕು ಅಧ್ಯಕ್ಷನಾಗಿ ಪಕ್ಷವನ್ನು ತಳಮಟ್ಟದಿಂದ ಮತ್ತೊಮ್ಮೆ ಸಂಘಟಿಸುವಲ್ಲಿ ನನ್ನ ವಕೀಲ ವೃತ್ತಿಯನ್ನು ಬಿಟ್ಟು ತನುಮನ ಧನ ಹಾಕಿ ಯಶಸ್ಸು ಕಂಡಿದ್ದೇನೆ. 21 ಗ್ರಾಮ ಪಂಚಾಯ್ತಿಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ನನ್ನ ಪ್ರಯತ್ನ ವಿಶೇಷವಾಗಿದೆ. 2018ರ ಚುನಾವಣೆಯಲ್ಲಿ ಹರತಾಳು ಹಾಲಪ್ಪ ಅವರನ್ನು ಸಾಗರಕ್ಕೆ ಕರೆತಂದು ಅವರಿಗೆ ಟಿಕೆಟ್ ಕೊಡಿಸುವುದರಿಂದ ಹಿಡಿದು ಗೆಲ್ಲಿಸುವವರೆಗೂ ಅವಿರತವಾಗಿ ಶ್ರಮಿಸಿದ್ದೇನೆ. ನಂತರ ನಡೆದ ಎಲ್ಲ ಚುನಾವಣೆಯಲ್ಲೂ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದೇನೆ. ಎಪಿಎಂಸಿ ಚುನಾವಣೆ ಸಂದರ್ಭದಲ್ಲಿ ಸಹ ನನ್ನ ಸ್ವಂತ ಶಕ್ತಿಯಿಂದ ಅಧ್ಯಕ್ಷ ಸ್ಥಾನ ಪಡೆದಿದ್ದೇನೆ. ಪಕ್ಷ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದ ನನ್ನನ್ನು ಶಾಸಕ ಹಾಲಪ್ಪ ಹರತಾಳು ಮತ್ತಿತರರು ನಿರಂತರವಾಗಿ ರಾಜಕೀಯವಾಗಿ ತುಳಿಯುವ ಪ್ರಯತ್ನ ನಡೆಸಿದ್ದಾರೆ” ಎಂದು ಅವರು ದೂರಿದರು.

ಇದನ್ನೂ ಓದಿ: Karnataka Elections : ಸಾಗರದಲ್ಲಿ ಹಾಲಪ್ಪ ಅಭ್ಯರ್ಥಿತನಕ್ಕೆ ಹಿರಿಯ ಬಿಜೆಪಿ ಮುಖಂಡರಿಂದಲೇ ವಿರೋಧ; ಸೋಲಿಸುವ ಪಣ

“2015ರಲ್ಲಿ ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಆವಿನಹಳ್ಳಿ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದ ನನಗೆ ಹಾಲಪ್ಪ ಟಿಕೆಟ್ ತಪ್ಪಿಸಿದರು. 2018ರ ಉಪ ಚುನಾವಣೆಯಲ್ಲಿ ನನಗೆ ಟಿಕೆಟ್ ಸಿಗುತ್ತದೆ ಎಂದು ಪಕ್ಷದ ಎಲ್ಲ ಪ್ರಮುಖರು, ಕಾರ್ಯಕರ್ತರು ಭಾವಿಸಿದ್ದರು. ಆದರೆ, ಶಾಸಕ ಹಾಲಪ್ಪ ಹರತಾಳು ತನ್ನ ಅಣ್ಣನ ಮಗ ರವಿ ಬಸ್ರಾಣಿ ಅವರಿಗೆ ಟಿಕೆಟ್ ಕೊಡಿಸುವ ಮೂಲಕ ಕುಟುಂಬ ರಾಜಕಾರಣಕ್ಕೆ ಮುನ್ನುಡಿ ಬರೆದಿದ್ದರು. ರಾಜಕೀಯವಾಗಿ ನನಗೆ ಸಾಕಷ್ಟು ಅನ್ಯಾಯ ಮಾಡಿದ್ದರೂ ನಾನು ಎಲ್ಲವನ್ನೂ ಸಹಿಸಿಕೊಂಡು ಬಿಜೆಪಿ ತತ್ವ ಸಿದ್ಧಾಂತದಡಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ನನ್ನನ್ನು ಹಿಂದುಳಿದ ವರ್ಗದ ಆಯೋಗದ ಸದಸ್ಯರನ್ನಾಗಿ ಮಾಡಲು ಸಾಕಷ್ಟು ಅವಕಾಶವಿತ್ತು. ಈ ಬಗ್ಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಶಾಸಕರಿಗೆ ಮನವಿ ಸಹ ಮಾಡಲಾಗಿತ್ತು. ಆದರೆ ಆ ಹುದ್ದೆಯನ್ನು ಸೊರಬದ ಹಾಲಪ್ಪ ಅವರ ಸಂಬಂಧಿಕರಿಗೆ ನೀಡಲಾಯಿತು. ಒಟ್ಟಾರೆ ನಿಷ್ಠಾವಂತಿಕೆಯಿಂದ ಪಕ್ಷ ಕಟ್ಟಿದ ನನ್ನನ್ನು ಮೂಲೆಗುಂಪು ಮಾಡಿದ್ದಾರೆಯೇ ವಿನಃ ಅವಕಾಶ ಸಿಕ್ಕಾಗ ಯಾವುದೇ ಹುದ್ದೆ ಕೊಟ್ಟಿಲ್ಲ” ಎಂದರು.

“ಶಾಸಕ ಹಾಲಪ್ಪ ತಮ್ಮ ರಾಜಕೀಯ ಲಾಭಕ್ಕಾಗಿ ಎಂಥವರನ್ನು ಬೇಕಾದರೂ ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ. ಈಚೆಗೆ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ರತ್ನಾಕರ ಹೊನಗೋಡು ಅವರನ್ನು ಬಿಜೆಪಿಗೆ ಸೇರಿಸಿಕೊಂಡಿದ್ದಾರೆ. ವೈಯಕ್ತಿಕವಾಗಿ ರತ್ನಾಕರ ಹೊನಗೋಡು ಮೇಲೆ ನನಗೆ ದ್ವೇಷ ಇರಲಿಲ್ಲ. ಆದರೆ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಶಾಸಕ ಹಾಲಪ್ಪ ವಿರುದ್ದ ಕೆಂಜಿಗಾಪುರ ದೇವಸ್ಥಾನ, ಪಿಡಿಒ ವರ್ಗಾವಣೆ ಸಂದರ್ಭದಲ್ಲಿ ರತ್ನಾಕರ ಹೊನಗೋಡು ಪ್ರತಿಭಟನೆ ಮಾಡಿದ್ದಾರೆ ಎನ್ನುವ ಕಾರಣಕ್ಕೆ ನಾನು ಅವರ ವಿರುದ್ಧ ಪ್ರತಿಭಟನೆ ನಡೆಸಿದ್ದೇನೆ. ಹೊನಗೋಡು ವಿರುದ್ಧ ನನ್ನಿಂದ ಪ್ರತಿಭಟನೆ ಮಾಡಿಸಿ ಈಗ ಅವರನ್ನೇ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿರುವುದು ಎಷ್ಟು ಸರಿ” ಎಂದು ಪ್ರಶ್ನಿಸಿದ ಚೇತನರಾಜ್, “ಪಕ್ಷದಲ್ಲಿ ಹಾಲಪ್ಪ ಮಿಲ್ಟ್ರೀ ಸಿಸ್ಟಂ ತಂದಿದ್ದಾರೆ. ತಮ್ಮ ವಿರುದ್ಧ ಯಾರೇ ಮಾತನಾಡಿದರೂ ಅವರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಬೇಸತ್ತು ನನ್ನ ಬೆಂಬಲಿಗರ ಜತೆ ಬಿಜೆಪಿಗೆ ರಾಜಿನಾಮೆ ನೀಡಿದ್ದು, ಮುಂದೆ ಯಾವ ಪಕ್ಷಕ್ಕೆ ಸೇರಬೇಕು ಎನ್ನುವ ಕುರಿತು ಸದ್ಯದಲ್ಲಿಯೇ ತೀರ್ಮಾನಿಸಲಾಗುತ್ತದೆ” ಎಂದು ಹೇಳಿದರು.

ರವಿಕುಮಾರ್ ಯಡೇಹಳ್ಳಿ, ಆನಂದ್ ಮೇಸ್ತ್ರಿ, ಚಂದ್ರಶೇಖರ ಮಡಸೂರು, ಮಂಜುನಾಥ್, ಸುನಿಲ್, ಷಣ್ಮುಖಪ್ಪ ಎಸ್., ಷಣ್ಮುಖಪ್ಪ ಮನೆಘಟ್ಟ, ಮಹೇಶ್ ಕಣ್ಣೂರು, ಜಯಪ್ರಕಾಶ್, ಪುನಿತ್ ರಾಜ್ ಕಣ್ಣೂರು ಹಾಜರಿದ್ದರು.

Exit mobile version