ರಿಪ್ಪನ್‌ಪೇಟೆ: ವಿದ್ಯುತ್ ತಂತಿ (Electric Wire) ತುಂಡಾಗಿ ಮನೆ ಬೇಲಿಗೆ ಬಿದ್ದ ಪರಿಣಾಮ ವಿದ್ಯುತ್ ತಗುಲಿ ವೃದ್ಧ ಮಹಿಳೆ ಮೃತಪಟ್ಟ ಘಟನೆ ಸಮೀಪದ ಹುಂಚದಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಗ್ಗುಂಡಿ ಗ್ರಾಮದಲ್ಲಿ ನಡೆದಿದೆ.
ಕಗ್ಗುಂಡಿ ವರಮಹಾಲಕ್ಷ್ಮಿ (73) ಮೃತಪಟ್ಟ ವೃದ್ಧೆ ಎಂದು ಗುರುತಿಸಲಾಗಿದೆ. ಬುಧವಾರ ತಡರಾತ್ರಿ ಭಾರೀ ಮಳೆ ಸುರಿದ ಪರಿಣಾಮ ಹಳೆಯದಾದ ವಿದ್ಯುತ್ ತಂತಿಯೊಂದು ವೃದ್ಧೆಯ ಮನೆಯ ಪಕ್ಕದಲ್ಲೇ ತುಂಡಾಗಿ ಮನೆಯ ಆವರಣದ ಬೇಲಿಗೆ ಬಿದ್ದಿತ್ತು.
ಇದನ್ನು ನೋಡದ ವೃದ್ಧೆ ಎಂದಿನಂತೆ ವೃದ್ಧೆ ಗುರುವಾರ ಬೆಳಗ್ಗೆ ದೇವಸ್ಥಾನಕ್ಕೆ ಪೂಜೆಗೆಂದು ಹೊರಟಿದ್ದರು. ದೇಗುಲಕ್ಕೆ ಹೋಗುವ ಭರದಲ್ಲಿ ವೃದ್ಧೆ ಗೇಟ್ ತೆಗೆಯಲು ಮುಂದಾದಾಗ ಶಾಕ್ ಹೊಡೆದಿದೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ವೃದ್ಧೆಯ ರಕ್ಷಣೆಗೆ ಮಕ್ಕಳು ಘಟನಾ ಸ್ಥಳಕ್ಕೆ ಓಡೋಡಿ ಬಂದಿದ್ದಾರೆ. ಆಗ ವೃದ್ಧೆಯ ಮಕ್ಕಳಿಗೆ ವಿದ್ಯುತ್ ತಗುಲಿದೆ. ಬಳಿಕ ವಿದ್ಯುತ್ ಸಂಪರ್ಕ ತಪ್ಪಿಸೋದಕ್ಕೆ ಮಾಹಿತಿ ನೀಡುವಷ್ಟರಲ್ಲಿ ವೃದ್ಧೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.ಈ ಕುರಿತು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.