Site icon Vistara News

Shivamogga News: ಕೂಡಲೇ ಬೆಳೆ ವಿಮೆ ಮಾಡಿಸಿಕೊಳ್ಳಲು ಸಂಸದ ಬಿ.ವೈ. ರಾಘವೇಂದ್ರ ಮನವಿ

Farmers should get crop insurance immediately says MP BY Raghavendra

ಸೊರಬ: ಪ್ರಸಕ್ತ ಸಾಲಿನಲ್ಲಿ ಅಧಿಕ ಮಳೆಯಾಗುತ್ತಿದ್ದು, ಪ್ರಮುಖ ನದಿಗಳು ತುಂಬಿ ಹರಿಯುತ್ತಿವೆ. ಈ ಕಾರಣದಿಂದ ನದಿಪಾತ್ರದ ಜಮೀನುಗಳಿಗೆ ಪ್ರವಾಹ ಎದುರಾಗಿದ್ದು, ರೈತ ಸಮೂಹ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ. ಆದ್ದರಿಂದ ಬೆಳೆ ವಿಮೆ ಮಾಡಿಸದ ರೈತರು ಕೂಡಲೇ ಬೆಳೆ ವಿಮೆಗೆ ಮುಂದಾಗಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ (Shivamogga News) ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಮಳೆ ಹಾನಿ ಬಗ್ಗೆ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ನಂತರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆ ಕಳೆದ ಬಾರಿ ಬರಗಾಲ ಪರಿಸ್ಥಿತಿಯನ್ನು ಎದುರಿಸುವಂತಾಗಿತ್ತು. ಆದರೆ ಈ ಬಾರಿ ಮುಂಗಾರು ತಡವಾಗಿ ಪ್ರಾರಂಭವಾದರೂ ಉತ್ತಮ ಮಳೆಯಾಗುತ್ತಿದೆ. ಜಿಲ್ಲೆಯ ಪ್ರಮುಖ ನದಿಗಳು ತುಂಬಿ ಹರಿಯುತ್ತಿವೆ ಎಂದರು.

ಇದನ್ನೂ ಓದಿ: Uttara Kannada News: ಗೋಕರ್ಣದ ʼಅಶೋಕೆʼಯಲ್ಲಿ ಜು. 21ರಿಂದ ರಾಘವೇಶ್ವರಶ್ರೀ ಚಾತುರ್ಮಾಸ್ಯ

ತಾಲೂಕಿನ ದಂಡಾವತಿ ಮತ್ತು ವರದಾ ನದಿಗಳು ಈಗಾಗಲೇ ತುಂಬಿ ಹರಿಯುತ್ತಿದ್ದು, ಅಪಾಯದ ಮಟ್ಟ ತಲುಪಿವೆ. ವಿಶೇಷವಾಗಿ ವರದಾ ನದಿ ಪ್ರವಾಹದಿಂದ ತಾಲೂಕಿನ ಅಬಸೆ, ಕಡಸೂರು, ಹೊಳೆಜೋಳದಗುಡ್ಡೆ, ತಟ್ಟಿಕೆರೆ, ಹೆಚ್ಚೆ, ಹಿರೇನೆಲ್ಲೂರು, ಸೈದೂರು, ತಾಳಗುಪ್ಪ ಗ್ರಾಮಗಳ ರೈತರ ಜಮೀನುಗಳು ಜಲಾವೃತವಾಗಿವೆ. ಸುಮಾರು 650 ಹೆಕ್ಟೇರ್ ಭತ್ತ ಮುಳುಗಡೆಯಾಗಿದೆ ಎಂದು ಹೇಳಿದರು.

ಇನ್ನೂ ಬೆಳೆ ವಿಮೆ ಮಾಡಿಸದ ರೈತರಿಗೆ ಜುಲೈ 31 ರವರೆಗೆ ಅವಕಾಶವಿದೆ. ರೈತರು ಇದರ ಸದುಪಯೋಗ ಪಡೆಯಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.

ಹಾನಿಯಾದ ವರದಿ ಸರ್ಕಾರಕ್ಕೆ ಸಲ್ಲಿಸಿ

ಜಿಲ್ಲೆಯಲ್ಲಿ ಜೂನ್ ತಿಂಗಳಿನಲ್ಲಿ ವಾಡಿಕೆಗಿಂತ ಶೇ. 36ರಷ್ಟು ಮಳೆ ಕೊರತೆ ಎದುರಾಗಿತ್ತು. ಜುಲೈ ತಿಂಗಳ ವಾಡಿಕೆ ಮಳೆ 423 ಮಿ.ಮೀ. ಆದರೆ 577 ಮಿ.ಮೀ. ಮಳೆಯಾಗಿದ್ದು, ಶೇ. 36ರಷ್ಟು ಅಧಿಕ ಮಳೆಯಾಗಿದೆ. ತಾಲೂಕಿನಾದ್ಯಂತ 21 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 2 ಎಮ್ಮೆ, 1 ಹಸು ಮೃತಪಟ್ಟಿವೆ. ಈ ಕಾರಣ ತಹಸೀಲ್ದಾರ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ನೆರೆ ಪ್ರದೇಶದ ಗ್ರಾಮ ಮತ್ತು ಜಮೀನುಗಳಿಗೆ ಭೇಟಿ ನೀಡಿ ಮಳೆಯಿಂದ ಹಾನಿಯಾದ ಬಗ್ಗೆ ಸರ್ಕಾರಕ್ಕೆ ಪ್ರಾಥಮಿಕ ವರದಿ ಸಲ್ಲಿಸುವಂತೆ ತಿಳಿಸಲಾಗಿದೆ ಎಂದರು.

ಮಳೆಯಿಂದ ಮನೆಯ ಒಂದು ಭಾಗದ ಗೋಡೆ ಬಿದ್ದರೆ ಇಡೀ ಮನೆಗೆ ಹಾನಿಯಾದಂತೆ. ಹಾಗಾಗಿ ಅಧಿಕಾರಿಗಳು ಸಂಪೂರ್ಣ ಪರಿಹಾರಕ್ಕೆ ಇಂತಹ ಮನೆಗಳನ್ನೂ ಪರಿಗಣಿಸಬೇಕು ಎಂದ ಅವರು, ರಸ್ತೆಗಳಲ್ಲಿ ಸರಾಗವಾಗಿ ನೀರು ಹರಿಯದೇ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಇದರಿಂದ ಅಪಘಾತಗಳು ಸಂಭವಿಸುತ್ತಿವೆ. ಜಿ.ಪಂ. ಮತ್ತು ಪಿ.ಡಬ್ಲ್ಯೂ.ಡಿ. ಇಲಾಖೆ ಹೆಚ್ಚಿನ ಗಮನ ಹರಿಸಿ, ರಸ್ತೆಯ ಎರಡೂ ಬದಿಗಳಲ್ಲಿ ಕಾಲುವೆ ನಿರ್ಮಿಸುವ ಮೂಲಕ ನೀರು ಸರಾಗವಾಗಿ ಹರಿಯಲು ಹೆಚ್ಚಿನ ನಿಗಾ ವಹಿಸಬೇಕು ಎಂದರು.

ಇದನ್ನೂ ಓದಿ: Kannada New Movie: ಹಾರರ್ ಜಾನರ್‌ನ ʼಹಗ್ಗʼ ಚಿತ್ರದ ಟೀಸರ್ ಅನಾವರಣ

ಸುದ್ದಿಗೋಷ್ಠಿಯಲ್ಲಿ ತಹಸೀಲ್ದಾರ್ ಮಂಜುಳಾ ಹೆಗಡಾಳ್, ಕೃಷಿ ಸಹಾಯಕ ನಿರ್ದೇಶಕ ಕೆ.ಜಿ. ಕುಮಾರ್ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಮತ್ತು ಮಾಜಿ ಶಾಸಕ ಕುಮಾರ ಬಂಗಾರಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ಪ್ರಕಾಶ್ ತಲಕಾಲುಕೊಪ್ಪ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಕಡಸೂರು, ಜಿಲ್ಲಾ ಕಾರ್ಯದರ್ಶಿ ದೇವೇಂದ್ರಪ್ಪ ಚನ್ನಾಪುರ, ಮುಖಂಡರಾದ ಗುರುಕುಮಾರ ಪಾಟೀಲ್, ಪ್ರಕಾಶ್ ಅಗಸನಹಳ್ಳಿ ಹಾಗೂ ಇತರರು ಇದ್ದರು.

Exit mobile version