ಹೊಸನಗರ: ಬರದ (Drought) ಸಮಸ್ಯೆ ಎದುರಾಗಿದ್ದು, ಸಾರ್ವಜನಿಕರಿಂದ ಕುಡಿಯುವ ನೀರಿನ (Drinking Water) ಸಮಸ್ಯೆ ಕುರಿತು ದೂರುಗಳು ಬಾರದಂತೆ ಅಧಿಕಾರಿ ವರ್ಗ ಎಚ್ಚೆತ್ತುಕೊಂಡು ಕಾರ್ಯನಿರ್ವಹಿಸಬೇಕಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಬರ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಅಗತ್ಯ ಅನುದಾನ ಬಿಡುಗಡೆ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ಹಳ್ಳಿಗಳಲ್ಲಿ ದೂರದ ಮನೆಗಳು ಇರುವುದರಿಂದ ನಲ್ಲಿ ಸಂಪರ್ಕ ಕಲ್ಪಿಸಲು ತೊಡಕಾಗಿದೆ. ಜೆಜೆಎಂ ಯೋಜನೆಯಡಿ ವರಾಹಿ ಜಲಾಶಯದಿಂದ ನೀರಿನ ಸಂಪರ್ಕ ಕಲ್ಪಿಸುವ ಯೋಜನೆ ಪ್ರಗತಿಯಲ್ಲಿದೆ. ಆದರೆ ಅಲ್ಲಿಯವರೆಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕಿದೆ.
ಇದನ್ನೂ ಓದಿ: Co-Operative week : ಸರ್ಕಾರಿ ಹಣ ಸಹಕಾರ ಬ್ಯಾಂಕ್‌ನಲ್ಲೇ ಠೇವಣಿಗೆ ಚಿಂತನೆ; ಸಿದ್ದರಾಮಯ್ಯ
ಲಭ್ಯವಿರುವ ಅನುದಾನ ಬಳಸಿಕೊಂಡು ಕೊಳವೆ ಬಾವಿ ಅಗತ್ಯವಿರುವ ಕಡೆಗಳಲ್ಲಿ ಕಾಮಗಾರಿ ಕೈಗೊಳ್ಳಿ. ನೀರು ಸರಬರಾಜು ವ್ಯವಸ್ಥೆಗೆ ಹೆಚ್ಚುವರಿ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಲು ಆದ್ಯತೆ ನೀಡಿ. ತೀರಾ ಸಮಸ್ಯೆ ಉಂಟಾದ ಪ್ರದೇಶಗಳಲ್ಲಿ ಖಾಸಗಿಯಾಗಿ ನೀರು ಖರೀದಿಸಲು ಲಭ್ಯವಿರುವ ಸಂಪನ್ಮೂಲಗಳ ಕಡೆಯೂ ಗಮನ ಹರಿಸಿ. ಎಲ್ಲವನ್ನೂ ನಿಯಮದಲ್ಲಿ ಅವಕಾಶವಿಲ್ಲ ಎಂದು ಕೈಚೆಲ್ಲಬೇಡಿ. ಮಾನವೀಯತೆಯ ಆಧಾರದಲ್ಲಿ ಜನಹಿತವನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಮಲೆನಾಡು ಭಾಗದ ಗುಡ್ಡಗಾಡು ಪ್ರದೇಶದಲ್ಲಿ ನೀರಿನ ಸಮಸ್ಯೆ ಭೀಕರವಾಗಿ ತಲೆದೋರುವ ಲಕ್ಷಣಗಳಿವೆ. ಕಠಿಣ ಪರಿಸ್ಥಿತಿಯನ್ನು ಎದುರಿಸಲು ಅಧಿಕಾರಿವರ್ಗ ಎಲ್ಲ ರೀತಿಯಲ್ಲಿಯೂ ಸಜ್ಜಾಗಬೇಕಿದೆ. ಪ್ರಸ್ತುತ ಜೆಜೆಎಂ ನಲ್ಲಿ ಮಾತ್ರ ಅನುದಾನ ಲಭ್ಯವಿದೆ. ಬರದ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಜೆಜೆಎಂ ಅನುದಾನ ಬಳಸಿ ಅಗತ್ಯ ಕ್ರಮ ಕೈಗೊಳ್ಳಿ ಎಂದರು.
ಇದನ್ನೂ ಓದಿ: Acid Reflux: ನಿಮಗೆ ಗೊತ್ತಿರಲಿ, ಚಳಿಗಾಲಕ್ಕೂ ಹುಳಿತೇಗಿಗೂ ಇದೆ ಸಂಬಂಧ!
ಸಭೆಯಲ್ಲಿ ತಾಲೂಕು ಪಂಚಾಯಿತಿ ಇಓ ನರೇಂದ್ರಕುಮಾರ್, ತಹಸೀಲ್ದಾರ್ ರಶ್ಮಿ, ಮೆಸ್ಕಾಂ ಎಇಇ ಚಂದ್ರಶೇಖರ, ಗ್ರಾಮ ಪಂಚಾಯಿತಿ ಪಿಡಿಓಗಳು ತಾಲ್ಲೂಕು ಕಛೇರಿಯ ಗ್ರೇಡ್ 2 ತಹಸೀಲ್ದಾರ್ ರಾಕೇಶ್, ಶಿರಾಸ್ಥೆದಾರ್ ಮಂಜುನಾಥ್ ಕಟ್ಟೆ, ಗುಮಾಸ್ಥರಾದ ಚಿರಾಗ್ ಇನ್ನೂ ಮುಂತಾದ ಅಧಿಕಾರಿಗಳು ಹಾಜರಿದ್ದರು.