ಸೊರಬ: ಪಟ್ಟಣ ಸೇರಿ ತಾಲೂಕಿನಾದ್ಯಂತ ಮಹಾಶಿವರಾತ್ರಿ (Mahashivaratri) ಅಂಗವಾಗಿ ಶುಕ್ರವಾರ ಶಿವ ದೇವಾಲಯಗಳಲ್ಲಿ ರುದ್ರಾಭಿಷೇಕ, ಬಿಲ್ವಾರ್ಚನೆ, ಸಹಸ್ರನಾಮ ಅರ್ಚನೆ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳು (Shivamogga News) ನೆರವೇರಿದವು.
ಪಟ್ಟಣದ ದಂಡಾವತಿ ನದಿ ದಂಡೆಯಲ್ಲಿರುವ ಶ್ರೀ ಚಂದ್ರಮೌಳೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಅಂಗವಾಗಿ ಕಳೆದ ಒಂದು ವಾರದಿಂದ ಶಿವಪಂಚಾಕ್ಷರಿ ಜಪ ನಡೆಯುತ್ತಿದ್ದು, ಇಂದು ಶಿವಪಂಚಾಕ್ಷರಿ ಹವನ ಮತ್ತು ಚಂದ್ರಮೌಳೇಶ್ವರ ಸ್ವಾಮಿಗೆ ಸುಮಾರು 14 ಜನ ಪುರೋಹಿತರಿಂದ ಶತರುದ್ರಾಭಿಷೇಕ ಹಾಗೂ ವಿಶೇಷ ಪೂಜೆ, ಮಧ್ಯಾಹ್ನ ಮಹಾ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿತರಣೆ ನಡೆಯಿತು.
ಪಟ್ಟಣದ ಶ್ರೀ ರಂಗನಾಥ ದೇವಸ್ಥಾನ ಸಮೀಪದ ಶ್ರೀ ಉಮಾಮಹೇಶ್ವರ ದೇವರ ಸನ್ನಿಧಿಯಲ್ಲಿ ಉಮಾಮಹೇಶ್ವರ ಭಾವೆ ಫೌಂಡೇಷನ್ ವತಿಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ ಶ್ರೀ ದೇವರಿಗೆ ವಿಶೇಷ ಪೂಜೆ, ರುದ್ರಾಭಿಷೇಕ ನಂತರ ಪ್ರಸಾದ ವಿತರಣೆ ನಡೆಯಿತು. ವಿಶೇಷವಾಗಿ ಶಿವನಿಗೆ ಬಿಲ್ವ ಪತ್ರೆ, ಕುಂಸಲ ಹೂವು,ಮುತ್ತುಗದ ಹೂವು, ಪಾರಿಜಾತ ಹೂವು, ಎಕ್ಕದ ಹೂವು, ಗಂಟೆ ಹೂವು, ಕಣಗಾಲ ಹೂವುಗಳನ್ನು ಅರ್ಪಿಸಿ, ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.
ಇದನ್ನೂ ಓದಿ: Karnataka Weather : ಇಂದಿನಿಂದ ಮಾರ್ಚ್ 14ರವರೆಗೆ ರಾಜ್ಯಾದ್ಯಂತ ಒಣಹವೆ ಸಾಧ್ಯತೆ
ಐತಿಹಾಸಿಕ ಪ್ರಸಿದ್ಧ ಶ್ರೀ ರೇಣುಕಾಂಬ ದೇವಸ್ಥಾನಕ್ಕೂ ಸಹ ಸಾವಿರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು. ಜತೆಗೆ ದೇವಸ್ಥಾನದ ಆವರಣದಲ್ಲಿರುವ ಶ್ರೀ ಕಾಲಭೈರವ, ಪರಶುರಾಮ, ತ್ರಿಶೂಲದ ಭೈರಪ್ಪ ಸೇರಿದಂತೆ ಪರಿವಾರ ದೇವರುಗಳಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.
ಶಿವರಾತ್ರಿಯ ಅಂಗಾವಾಗಿ ಪ್ರತಿ ವರ್ಷದಂತೆ ಶ್ರೀ ರಂಗನಾಥ ದೇವಾಲಯದಲ್ಲಿ ಧಾರ್ಮಿಕ, ರಾಷ್ಟ್ರೀಯ ಹಾಗೂ ಸಾಹಿತ್ಯಿಕ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿತ್ತು.
ಇದನ್ನೂ ಓದಿ: Ind vs Eng : ಗಿಲ್, ರೋಹಿತ್ ಶತಕ, ಭಾರತಕ್ಕೆ 255 ರನ್ ಮುನ್ನಡೆ
ಮಹಾಶಿವರಾತ್ರಿ ಅಂಗವಾಗಿ ಶಿವದೇವಾಲಯಗಳಿಗೆ ಭಕ್ತರ ದಂಡೆ ಹರಿದು ಬಂದಿತ್ತು. ನದಿ ದಂಡೆಯ ಶ್ರೀಚಂದ್ರ ಮೌಳೇಶ್ವರ ದೇವಾಲಯದಲ್ಲಿ ನೂರಾರು ಭಕ್ತರು ಸರತಿ ಸಾಲಿನಲ್ಲಿ ಬಂದು ವಿಶೇಷ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದರು. ಬಸ್ ನಿಲ್ದಾಣ ಸಮೀಪದ ಶ್ರೀ ಕಲ್ಲೇಶ್ವರ ದೇವಸ್ಥಾನ, ಜಡೆ ಸಂಸ್ಥಾನ ಮಠ ಹಾಗೂ ಹಿರೇಮಠ, ಗೊಗ್ಗೆಹಳ್ಳಿ ಮಠ, ಬಂಕಸಾಣದ ಶ್ರೀ ಹೊಳೆಲಿಂಗೇಶ್ವರ, ಕರಡಿಗೇರಿ ಶ್ರೀ ರಾಮೇಶ್ವರ, ಉರುಗನಹಳ್ಳಿಯ ಶ್ರೀ ಕಾಳಿಂಗೇಶ್ವರ, ಕುಪ್ಪಗಡ್ಡೆ ರಾಮೇಶ್ವರ, ಆನವಟ್ಟಿ ಸಮೀಪದ ಕೋಟಿಪುರದ ಕದಂಬರ ಕಾಲದ ಶ್ರೀ ಕೈಠಭೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ಶಿವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು.