ರಿಪ್ಪನ್‌ಪೇಟೆ: ಕಳೆದ ವಿಧಾನಸಭಾ ಚುನಾವಣೆ ವೇಳೆ ರಾಜ್ಯದ ಮತದಾರರಿಗೆ ಕಾಂಗ್ರೆಸ್ ಪಕ್ಷವು (Congress Party) ನೀಡಿದ ಭರವಸೆಯಂತೆ ರಾಜ್ಯದ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸುವ ಮೂಲಕ ಯಶಸ್ವಿಯಾಗಿ ಕಾರ್ಯನಿರ್ವಹಿಸಿ ನುಡಿದಂತೆ ನಡೆದಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು (Shivamogga News) ಹೇಳಿದರು.
ಪಟ್ಟಣದ ಸಮೀಪದ ಕೆಂಚನಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿವಾಡಿ ಕೇಂದ್ರ ಕಟ್ಟಡ, ಪ್ರಾಥಮಿಕ ಶಾಲೆಯ ಹೆಚ್ಚುವರಿ ಕೊಠಡಿ, ಅಕ್ಷರ ದಾಸೋಹ ಕೊಠಡಿ,. ಎನ್.ಆರ್.ಎಲ್. ಎಂ. ಕೊಠಡಿ ಉದ್ಘಾಟನೆ ಹಾಗೂ ಕೆಂಚನಾಲ ಮಾರಿಕಾಂಬ ದೇವಸ್ಥಾನ ಸಮೀಪ ಸಮುದಾಯ ಭವನ ಮತ್ತು ಜಲಜೀವನ್ ಯೋಜನೆ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಮತದಾರರಿಗೆ ನೀಡಿದ್ದ ಐದು ಗ್ಯಾರಂಟಿಗಳನ್ನು ಅರ್ಹ ಫಲಾನುಭವಿಗಳಿಗೆ ತ್ವರಿತವಾಗಿ ತಲುಪಿಸುವ ಮೂಲಕ ಇತಿಹಾಸ ನಿರ್ಮಿಸಿದೆ ಎಂದರು.
ಇದನ್ನೂ ಓದಿ: UPI service: ಶ್ರೀಲಂಕಾ, ಮಾರಿಷಸ್‌ನಲ್ಲಿ ಭಾರತೀಯ ಯುಪಿಐ ಸೇವೆ ಆರಂಭ
ಇದೇ ವೇಳೆ ಕೆಂಚನಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನೌಕರರಿಗೆ ಹಾಗೂ ಕಲೆ, ಸಾಹಿತ್ಯ, ಕೃಷಿ, ಕ್ರೀಡೆಯಲ್ಲಿ ಸಾಧನೆ ಮಾಡಿದ ಸಾಧಕರನ್ನು ಮತ್ತು ನಿವೃತ್ತ ಯೋಧರನ್ನು ಗ್ರಾಮ ಪಂಚಾಯಿತಿ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕೆಂಚನಾಲ ಗ್ರಾಮ ಪಂಚಾಯತಿ ಅಧ್ಯಕ್ಷ ಉಬೇದುಲ್ಲಾ ಶರೀಫ್ ಅಧ್ಯಕ್ಷತೆ ವಹಿಸಿದ್ದರು.
ರಾಜ್ಯ ಅರಣ್ಯ ಕೈಗಾರಿಕೆ ನಿಗಮದ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ಗ್ರಾಮಕ್ಕೆ ಆಗಮಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು ಅವರನ್ನು ನೂರಾರು ಅಭಿಮಾನಿಗಳು ಪಟಾಕಿ ಸಿಡಿಸಿ, ಬೃಹತ್ ಮಾಲಾರ್ಪಣೆ ಮಾಡುವ ಮೂಲಕ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾರಿಕಾಂಬಾ ದೇವಸ್ಥಾನ ಸಮಿತಿಯ ಅಧ್ಯಕ್ಷ ಕೆ.ಎಂ.ಬಸವರಾಜ್, ಇಒ ನರೇಂದ್ರ ಕುಮಾರ್, ಬಿಇಒ ಕೃಷ್ಣಮೂರ್ತಿ, ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ರಮ್ಯಾ, ಸದಸ್ಯರಾದ ಮಹಮದ್ ಶರೀಫ್, ಕೃಷ್ಣ, ಪರಮೇಶ್ವರ್, ಪುಟ್ಟಮ್ಮ, ಹೂವಮ್ಮ, ಗೌರಮ್ಮ, ಅರಸಾಳು ಗ್ರಾ.ಪಂ ಮಾಜಿ ಅಧ್ಯಕ್ಷ ಉಮಾಕರ್, ರಿಪ್ಪನ್‌ಪೇಟೆ ಗ್ರಾಮ ಪಂಚಾಯತಿ ಸದಸ್ಯರಾದ ಮಧುಸೂದನ್, ಆಶೀಫ್ ಬಾಷಾ, ಗಣಪತಿ, ಸಿಡಿಪಿಒ ಸುರೇಶ್, ಮೊಬೈಲ್ ಹರ್ಷ ಸೇರಿದಂತೆ ಇತರರು ಉಪಸ್ಥಿತರಿದ್ದರು.