Site icon Vistara News

Shivamogga News: ಕೆ.ಎಸ್.‌ ಈಶ್ವರಪ್ಪ ಅವರು ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ: ಮಾಜಿ ಶಾಸಕ ಪ್ರಸನ್ನ ಕುಮಾರ್‌

#image_title

ಶಿವಮೊಗ್ಗ: ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರು ಚುನಾವಣೆ ವೇಳೆ ಗಲಭೆಯಾಗಲಿದೆ ಎಂದು ಹೇಳಿಕೆ ನೀಡಿದ್ದು, ಈ ಬಗ್ಗೆ ಪೊಲೀಸರು ಗಮನ ಹರಿಸಬೇಕು ಎಂದು ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಶಾಸಕ ಪ್ರಸನ್ನ ಕುಮಾರ್‌ ಒತ್ತಾಯಿಸಿದರು.

“ಚುನಾವಣೆ ಸಮಯದಲ್ಲಿ ಬಿಜೆಪಿಯ ಕಾರ್ಯಕರ್ತರು ಗಲಭೆ ನಡೆಸುವುದಕ್ಕೆ ಸಿದ್ಧರಾಗಿದ್ದಾರೆ ಎಂದು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದ್ದಾರೆ. ಈ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ ಅವರಿಗೆ ಧನ್ಯವಾದಗಳು. ಮಾಜಿ ಸಚಿವ ಕೆ.ಎಸ್.‌ ಈಶ್ವರಪ್ಪ ಅವರು ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದೂ ಅವರು ಹೇಳಿದ್ದಾರೆ. ಸಿಎಂ ಸ್ಥಾನದಿಂದ ಬಿ.ಎಸ್.‌ ಯಡಿಯೂರಪ್ಪ ಅವರನ್ನು ಪದಚ್ಯುತಿ ಮಾಡಿರುವ ಕಾರಣ, ಅಗೌರವ ನೀಡಿದ ಬಗ್ಗೆಯೂ ಹೇಳಿಕೆ ಕೊಟ್ಟಿದ್ದಾರೆ. ಈಶ್ವರಪ್ಪನವರಿಂದ ಅಭಿವೃದ್ಧಿ ಕೆಲಸ ಆಗಿಲ್ಲ. ಅಭಿವೃದ್ಧಿಗಳನ್ನು ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರ ಮಾಡಿದ್ದು ಎಂದಿದ್ದಾರೆ” ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

“ಹೌದು, ಸಿದ್ದರಾಮಯ್ಯ ಅವರ ಸರ್ಕಾರದಲ್ಲಾದ ಕೆಲಸಗಳನ್ನು ಈಶ್ವರಪ್ಪ ಮುಂದುವರಿಸಿದ್ದಾರಷ್ಟೇ. ಹೊಸದಾಗಿ ಅವರು ನಗರಕ್ಕೆ ಏನನ್ನೂ ಮಾಡಿಲ್ಲ. ಅಲ್ಲದೇ, ಆಯನೂರು ಅವರು ಹಿಂದು-ಮುಸ್ಲಿಂ ಗಲಾಟೆ, ಯುವಕರ ಬಲಿ, ಅಶಾಂತಿ ಸೃಷ್ಟಿ ಮಾಡಿ ಗೆಲ್ಲುತ್ತಾರೆ ಎಂದಿದ್ದಾರೆ. ಜೊತೆಗೆ ವಾರ್ಡ್‌ಗಳಲ್ಲಿ ಅಕ್ರಮ ಹಣ, ಗಲಾಟೆ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಹೀಗಾಗಿ ಜಿಲ್ಲಾಧಿಕಾರಿ ಮತ್ತು ಚುನಾವಣಾಧಿಕಾರಿಗಳು ಚುನಾವಣೆಯಲ್ಲಿ ಅಕ್ರಮ ಹಣದ ಹರಿವಿನ ಬಗ್ಗೆ ಎಚ್ಚರ ವಹಿಸಬೇಕು. ನಗರದಲ್ಲಿ ಗಲಾಟೆಯಾಗದಂತೆ ಪೊಲೀಸರು, ಅಧಿಕಾರಿಗಳು ಎಚ್ಚರ ವಹಿಸಬೇಕು” ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Karnataka Election 2023: ಶಿವಮೊಗ್ಗ, ರಾಯಚೂರು ಸೇರಿ ವಿವಿಧೆಡೆ ನಗದು ಸೇರಿ 44.86 ಲಕ್ಷ ರೂ. ಮೌಲ್ಯದ ಮದ್ಯ, ಅಕ್ಕಿ ವಶ

ಆಯನೂರು ಮಂಜುನಾಥ್ ಕಾಂಗ್ರೆಸ್ ಪಕ್ಷಕ್ಕೆ ಬರುವ ಚರ್ಚೆ ವಿಚಾರಕ್ಕೆ ಸಂಬಂಧಿಸಿದಂತೆ, “ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ ಯಾರೇ ಬಂದರೂ ಸ್ವಾಗತ ಕೋರುತ್ತೇನೆ. ಅವರು ಪಕ್ಷಕ್ಕೆ ಬಂದರೆ, ವೈಯಕ್ತಿಕವಾಗಿ ನನ್ನ ಅಭ್ಯಂತರವೇನೂ ಇಲ್ಲ. ಮುಂಚೆಯೂ ಒಮ್ಮೆ ಬಂದಿದ್ದರು. ಸಿದ್ಧಾಂತ ಸರಿಯಾಗದೇ ಹಾಗೇ ಹೋಗಿದ್ದರು. ನಾನು ಕೂಡ ಆಕಾಂಕ್ಷಿ. ಜತೆಗೆ 11 ಜನ ಟಿಕೆಟ್‌ ಆಕಾಂಕ್ಷಿಗಳಿದ್ದೇವೆ. ಇದರ ಬಗ್ಗೆ ಹೈಕಮಾಂಡ್‌ಗೂ ತಿಳಿಸಿದ್ದೇವೆ. ಜನರ ಸೇವೆ ಮಾಡಲು ಇದೇ ಸರಿಯಾದ ಪಕ್ಷ. ಯಾರು ಬೇಕಾದರೂ ಬರಲಿ. ಕಾಂಗ್ರೆಸ್ ಸೇರೋಕೆ ನಾವು ಯಾವ ಕಾರಣಕ್ಕೂ ವಿರೋಧ ಮಾಡಲ್ಲ. ಚುನಾವಣೆ ಟಿಕೆಟ್ ಬಗ್ಗೆ ಪಕ್ಷದ ನಾಯಕರು ತೀರ್ಮಾನ ಮಾಡುತ್ತಾರೆ. ಹೈಕಮಾಂಡ್ ಯಾರಿಗೇ ಕೊಟ್ಟರೂ ಚುನಾವಣೆ ಕೆಲಸ ಮಾಡುತ್ತೇನೆ. ಹೈಕಮಾಂಡ್ ಹೇಳಿದರೆ ಹನ್ನೆರಡೇ ಏಕೆ 13ನೇ ಅಭ್ಯರ್ಥಿಗೂ ಕೆಲಸ ಮಾಡುತ್ತೇವೆ. ಆದರೆ ಆ ಸಂದರ್ಭ ಇನ್ನೂ ಒದಗಿ ಬಂದಿಲ್ಲ. ಅರ್ಜಿ ಹಾಕಿರುವ 11 ಜನರಲ್ಲೇ ಒಬ್ಬರಿಗೆ ಟಿಕೆಟ್ ನೀಡುವಂತೆ ಕೇಳಿದ್ದೇವೆ” ಎಂದು ಪ್ರಸನ್ನಕುಮಾರ್ ಹೇಳಿದ್ದಾರೆ.

Exit mobile version