ಸೊರಬ: ಬರಗಾಲದ ಹಿನ್ನೆಲೆಯಲ್ಲಿ ಕೆರೆಬೇಟೆ ನಿಷೇಧ ಮಾಡುವಂತೆ ಒತ್ತಾಯಿಸಿ, ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿಯಿಂದ ಮಂಗಳವಾರ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಹುಸೇನ್ ಸರಕಾವಸ್ ಅವರಿಗೆ ಮನವಿ (Shivamogga News) ಸಲ್ಲಿಸಲಾಯಿತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಮಿತಿಯ ಅಧ್ಯಕ್ಷ ಜೆ.ಎಸ್. ಚಿದಾನಂದ ಗೌಡ ಮಾತನಾಡಿ, ತಾಲೂಕಿನಲ್ಲಿ ಈ ವರ್ಷ ಬರಗಾಲ ಆವರಿಸಿದ್ದು, ಈಗಾಗಲೇ ರಾಜ್ಯ ಸರ್ಕಾರ ತಾಲೂಕನ್ನು ಬರಪೀಡಿದ ಪ್ರದೇಶ ಎಂದು ಘೋಷಣೆ ಮಾಡಿದೆ. ಜಲಮೂಲಗಳಲ್ಲಿ ನೀರಿಲ್ಲದೇ ಜನ ಮತ್ತು ಜಾನುವಾರು ಪರಿತಪಿಸುವಂತಾಗಿದೆ. ತಾಲೂಕಿನಲ್ಲಿ ಸುಮಾರು 1400ಕ್ಕೂ ಅಧಿಕ ಕೆರೆಗಳಿವೆ. ಈಗಾಗಲೇ ಆನವಟ್ಟಿ ಸೇರಿದಂತೆ ತಾಲೂಕಿನಲ್ಲಿ ಅನೇಕ ಕೆರೆಗಳು ಬತ್ತಿ ಹೋಗಿವೆ. ಕೆಲ ಕೆರೆಗಳಲ್ಲಿ ಅಲ್ಪ ಸ್ವಲ್ಪ ನೀರಿದೆ. ಕಳೆದ ವರ್ಷ ಸಮರ್ಪಕವಾಗಿ ಮಳೆ ಬಾರದ ಹಿನ್ನಲೆಯಲ್ಲಿ ಕೆರೆಗಳು ಭರ್ತಿಯಾಗಲಿಲ್ಲ. ಇದರಿಂದ ರೈತ ಸಮೂಹ ತೀವ್ರ ಸಂಕಷ್ಟದಲ್ಲಿದೆ. ಕೊಳವೆ ಬಾವಿಗಳಲ್ಲೂ ನೀರಿಲ್ಲದೇ ರೈತರು ಬೆಳೆಗಳನ್ನು ಉಳಿಸಿಕೊಳ್ಳಲು ಸೆಣಸಾಡುತ್ತಿದ್ದಾರೆ. ಈ ನಡುವೆ ಕೆಲ ಕೆರೆಗಳಲ್ಲಿ ಸಣ್ಣ ಪ್ರಮಾಣದಲ್ಲಿ ನೀರಿದ್ದು, ಕೆರೆಬೇಟೆ ನಡೆಸಿದರೆ ಕೆರೆಗಳು ಸಂಪೂರ್ಣ ಬತ್ತಿ ಹೋಗುವ ಸನ್ನಿವೇಶ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇದನ್ನೂ ಓದಿ: Cardiopulmonary Resuscitation: ಜೀವರಕ್ಷಕ ಸಿಪಿಆರ್; ಈ ವಿಧಾನ ಅನುಸರಿಸಿ, ಜೀವ ಉಳಿಸಿ
ಕೆರೆಯಲ್ಲಿನ ಅಳಿದುಳಿದ ನೀರನ್ನು ಉಳಿಸಲು ಕೆರೆಬೇಟೆ ನಿಷೇಧ ಮಾಡುವುದು ಅಗತ್ಯವಿದೆ. ಕೆರೆ ಬೇಟೆಯಿಂದ ಆಗುವ ನೀರಿನ ಅಭಾವದ ಕುರಿತು ವೈಜ್ಞಾನಿಕವಾಗಿ ವರದಿ ತರಿಸಿಕೊಂಡು ಕೂಡಲೇ ಕೆರೆಬೇಟೆ ನಿಷೇಧಕ್ಕೆ ಮುಂದಾಗಬೇಕು. ಕೆರೆಬೇಟೆ ನಿಷೇಧ ಮಾಡಿ ಕೆರೆಯ ನೀರು ಉಳಿಸಿ ಮತ್ತು ವನ್ಯ ಜೀವಿಗಳನ್ನು ಉಳಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: Akka Cafe : ಇದು ಸರ್ಕಾರಿ ಕೆಫೆ; ಸ್ವಾದಿಷ್ಟ, ಒಲವಿನ ಊಟ ಕೊಡಲು ಬಂದಿದ್ದಾಳೆ ʻಅಕ್ಕʼ
ಈ ಸಂದರ್ಭದಲ್ಲಿ ಸಮಿತಿಯ ಉಪಾಧ್ಯಕ್ಷ ಶರತ್ ಸ್ವಾಮಿ, ಕಾರ್ಯದರ್ಶಿ ನಾಗಪ್ಪ ಬಿದರಗೇರಿ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ ಆರೇಕೊಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಅನಿಶ್ ಗೌಡ, ಪ್ರಮುಖರಾದ ಯು.ಬಿ. ಬಸವರಾಜ್, ಕುಮಾರ್, ಬಿ. ಮಂಜೇಶ್ ಸೇರಿದಂತೆ ಇತರರಿದ್ದರು.