Site icon Vistara News

Shivamogga News: ಸೊರಬದಲ್ಲಿ ಆಡಳಿತ ಯಂತ್ರ ಸಂಪೂರ್ಣ ಸ್ಥಗಿತ ಆರೋಪ

soraba BJP Mandala president prakash talakaalukoppa pressmeet

ಸೊರಬ: ಕಳೆದ ಒಂದು ವರ್ಷದಿಂದ ಅಭಿವೃದ್ಧಿ ಚಟುವಟಿಕೆಗಳು ನಡೆಯದ ಕಾರಣ ತಾಲೂಕಿನಲ್ಲಿ ಆಡಳಿತ ಯಂತ್ರ ಸಂಪೂರ್ಣ ಸ್ಥಗಿತಗೊಂಡಿದೆ. (Shivamogga News) ಆಯ್ಕೆ ಮಾಡಿದ ಜನರಿಗೆ ಕ್ಷೇತ್ರದ ಶಾಸಕರು ನಂಬಿಕೆ ದ್ರೋಹ ವೆಸಗಿದ್ದಾರೆ ಎಂದು ಸೊರಬ ಬಿಜೆಪಿ ಮಂಡಲ ಅಧ್ಯಕ್ಷ ಪ್ರಕಾಶ್ ತಲಕಾಲುಕೊಪ್ಪ ಆರೋಪಿಸಿದರು.

ಶುಕ್ರವಾರ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಯ್ಕೆಯಾಗಿ, ಸಚಿವರಾಗಿ ಒಂದು ವರ್ಷ ಕಳೆದರೂ ಒಂದೇ ಒಂದು ಬಿಡಿಗಾಸಿನ ಅನುದಾನ ತರದ ಮಧು ಬಂಗಾರಪ್ಪ ಅವರಿಗೆ ಅಭಿವೃದ್ಧಿ ಎನ್ನುವ ಪದದ ಅರ್ಥವೇ ತಿಳಿದಿಲ್ಲ. ಹಾಗಾಗಿ ತಾಲೂಕನ್ನು ಮರೆತಿದ್ದಾರೆ. ಆದ್ದರಿಂದ ಬಿಜೆಪಿ ಕಾರ್ಯಕರ್ತರು ಸ್ಥಗಿತಗೊಂಡಿರುವ ಆಡಳಿತ ಯಂತ್ರವನ್ನು ಚಾಲನೆ ತರುವ ಕೆಲಸಕ್ಕೆ ಮುಂದಾಗಬೇಕಿದೆ ಎಂದರು.

ಇದನ್ನೂ ಓದಿ: Cyber Crime: ವಾಟ್ಸ್ಆ್ಯಪ್‌ ಗ್ರೂಪ್‌ ಮೆಸೇಜ್‌ ಓಪನ್‌ ಮಾಡಿ ಲಕ್ಷಾಂತರ ರೂ. ಕಳೆದುಕೊಂಡ ವ್ಯಾಪಾರಿ

ಈಗಾಗಲೇ ಮಳೆಗಾಲ ಪ್ರಾರಂಭಗೊಂಡಿದೆ. ರಸಗೊಬ್ಬರ, ಬಿತ್ತನೆ ಬೀಜ ಸಾಕಷ್ಟು ದಾಸ್ತಾನು ಇಲ್ಲದ ಕಾರಣ ರೈತರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗುವ ಸಂದರ್ಭ ಎದುರಾಗಿದೆ. ಅಲ್ಲದೇ ರೈತ ಪರಿಕರಗಳ ದರ ದುಪ್ಪಟ್ಟಾಗಿದೆ. ಈ ಬಗ್ಗೆ ಯಾವುದೇ ಸಭೆ ನಡೆದಿಲ್ಲ. ಬರಿಯ ಚುನಾವಣೆಗಷ್ಟೇ ಸೀಮಿತವಾಗಿರುವ ಸಚಿವರು, ವರ್ಷ ಕಳೆದರೂ ಒಂದೇ ಒಂದು ಕೆಡಿಪಿ ಮತ್ತು ಅಧಿಕಾರಿಗಳ ಸಭೆಗೆ ಭಾಗವಹಿಸಿಲ್ಲ. ಈ ಕಾರಣ ರೈತರು ಮತ್ತು ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಅವರಿಂದ ಹೇಗೆ ಸಾಧ್ಯವಾಗುತ್ತದೆ ಎಂದು ಆರೋಪಿಸಿದ ಅವರು, ಕೂಡಲೇ ಸಚಿವರು ಅಧಿಕಾರಿಗಳ ಸಭೆ ನಡೆಸಬೇಕು ಮತ್ತು ತಾಲೂಕಿನ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸಿ, ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

ಸಚಿವರು ವರ್ಷದಿಂದ ಅಭಿವೃದ್ಧಿ ಅನುದಾನದ ಹಣವನ್ನು ತರದೇ ಕಾಲಹರಣ ಮಾಡಿದ್ದಾರೆ. ಕುಮಾರ್ ಬಂಗಾರಪ್ಪ ಅವರ ಅವಧಿಯಲ್ಲಿ ಬಿಡುಗಡೆಯಾದ ಅನುದಾನದ ಹಣದಲ್ಲಿ ನಿರ್ಮಾಣವಾಗುತ್ತಿರುವ ಈಡಿಗ ಸಮುದಾಯ ಭವನ, ನೌಕರರ ಭವನ, ಕನ್ನಡ ಸಾಹಿತ್ಯ ಪರಿಷತ್ ಭವನ ಸೇರಿದಂತೆ ವಿವಿಧ ಸಮುದಾಯಗಳ ಭವನಗಳಿಗೆ ಹಣದ ಕೊರತೆ ಎದುರಾಗಿ ಕಾಮಗಾರಿ ಕುಂಠಿತಗೊಂಡಿವೆ. ಆದ್ದರಿಂದ ಸರ್ಕಾರದಿಂದ ಹೆಚ್ಚಿನ ಹಣ ಬಿಡುಗಡೆಗೊಳಿಸಿ ತಕ್ಷಣ ಪೂರ್ಣಗೊಳಿಸಿ ಸಾರ್ವನಿಕರ ಸೇವೆಗೆ ಅನುವು ಮಾಡಿಕೊಡುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ನೈರುತ್ಯ ಪದವೀಧರ ಕ್ಷೇತ್ರದಿಂದ ಆಯ್ಕೆಯಾದ ಡಾ. ಧನಂಜಯ ಸರ್ಜಿ ಮತ್ತು ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದ ಎಲ್. ಭೋಜೇಗೌಡ ಅವರ ಗೆಲುವಿಗೆ ಸಹಕರಿಸಿದ ಪ್ರಜ್ಞಾವಂತ ಮತದಾರರಿಗೆ ಕೃತಜ್ಞತೆಗಳನ್ನು ಅರ್ಪಿಸಿದ ಅವರು, ಡಾ.ಧನಂಜಯ ಸರ್ಜಿ, ಎಸ್‌.ಎಲ್. ಭೋಜೇಗೌಡ ಮತ್ತು ವಿಧಾನ ಪರಿಷತ್‍ಗೆ ಅವಿರೋಧವಾಗಿ ಆಯ್ಕೆಯಾದ ಸಿ.ಟಿ. ರವಿ, ಎನ್. ರವಿಕುಮಾರ್, ಎಂ.ಜಿ. ಮುಳೆ ಅವರಿಗೆ ಪಕ್ಷದ ಪರವಾಗಿ ಅಭಿನಂದನೆ ಸಲ್ಲಿಸಿದರು.

ಇದನ್ನೂ ಓದಿ: Money Guide: ಪಿಎಫ್‌ ನಿಯಮಗಳಲ್ಲಿ ಮಹತ್ವದ ಬದಲಾವಣೆ; ಇಲ್ಲಿದೆ ಸಂಪೂರ್ಣ ಮಾಹಿತಿ

ಈ ವೇಳೆ ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ ಕಡಸೂರು, ಮುಖಂಡರಾದ ಪ್ರಕಾಶ ಅಗಸನಹಳ್ಳಿ, ದೇವೇಂದ್ರಪ್ಪ ಚನ್ನಾಪುರ, ಎಂ.ಡಿ. ಉಮೇಶ, ಕೊಟ್ರೇಶಸ್ವಾಮಿ ಆನವಟ್ಟಿ, ಓಂಕಾರಪ್ಪ ತತ್ತೂರು, ಗುರುಮೂರ್ತಿ ಹಿರೇಶಕುನ, ಹರೀಶ್, ವಿಶ್ವನಾಥ, ವಿನಯ್ ಗುತ್ತೇರ್, ಟೀಕಪ್ಪ ಕೊಡಕಣಿ, ಬಸವರಾಜ ಕೊಡಕಣಿ, ಜಾನಕಪ್ಪ ಒಡೆಯರ್ ಯಲಸಿ, ಅಶೋಕ್ ಶೇಟ್, ಡಿ. ಶಿವಯೋಗಿ ಸೇರಿದಂತೆ ಇತರರು ಇದ್ದರು.

Exit mobile version