ಬೆಂಗಳೂರು: ಸುಮಾರು ಏಳು ವರ್ಷಗಳಿಂದ ಮುಚ್ಚಿರುವ ಭದ್ರಾವತಿಯಲ್ಲಿರುವ ಮೈಸೂರು ಪೇಪರ್ ಮಿಲ್(ಎಂಪಿಎಂ) ಕಾರ್ಖಾನೆಯನ್ನು (MPM Factory) ಆರಂಭಿಸುವ ಕುರಿತು ಸಿಹಿ ಸುದ್ದಿಯನ್ನು ರಾಜ್ಯ ಸರ್ಕಾರ ನೀಡಿದೆ. ಕಾರ್ಖಾನೆಯನ್ನು ಪುನಃ ಆರಂಭಿಸುವ ಕುರಿತು ಸರ್ಕಾರ ಉತ್ಸುಕವಾಗಿದ್ದು, ಖಾಸಗಿ ಮೂಲಕ ನಿರ್ವಹಣೆಗೆ ನಿರ್ಧಾರ ಮಾಡಿದೆ.
ಈ ಕುರಿತು ವಿಧಾನಸಭೆಯಲ್ಲಿ ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ವರ್ ಕೇಳಿದ ಪ್ರಶ್ನೆಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಶುಕ್ರವಾರ ಉತ್ತರಿಸಿದ್ದಾರೆ.
ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಮೈಸೂರು ಕಾಗದ ಕಾರ್ಖಾನೆಯನ್ನು ಸರ್ಕಾರದ ಸ್ವಾಮ್ಯದಲ್ಲಿಯೇ ಉಳಿಸುವ ಚಿಂತನೆ ಸರ್ಕಾರಕ್ಕೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಎಂ.ಬಿ. ಪಾಟೀಲ್, ಮೈಸೂರು ಕಾಗದ ಕಾರ್ಖಾನೆಯ ಚಟುವಟಿಕೆಗಳನ್ನು ಖಾಸಗಿಯವರಿಗೆ ಗುತ್ತಿಗೆ ಆಧಾರದ ಮೇಲೆ ವಹಿಸಲು ತೀರ್ಮಾನಿಸಲಾಗಿದೆ ಎಂದಿದ್ದಾರೆ.
ಈ ಕಾರ್ಖಾನೆಯನ್ನು ಖಾಸಗೀಕರಣ ಮಾಡುವ ಕುರಿತು ಸರ್ಕಾರದ ನಿಲುವೇನು? ಎಂಬ ಕುರಿತ ಪ್ರಶ್ನೆಗೆ ಉತ್ತರಿಸಿರುವ ಎಂ.ಬಿ. ಪಾಟೀಲ್, ಕಾರ್ಖಾನೆಯ ಕಾರ್ಯಾಚರಣೆಯನ್ನು ಗುತ್ತಿಗೆ ಆಧಾರದ ಮೇಲೆ ನೀಡುವ ಸಲುವಾಗಿ ಮೆ. ಐಡೆಕ್‌ನ ಸೇವೆಗಳನ್ನು ತೊಡಗಿಸಿಕೊಳ್ಳುವ ಮೂಲಕ ಎಂಪಿಎಂ ಲಿಮಿಟೆಡ್‌ನ ಪುನರ್ವಸತಿ, ಕಾರ್ಯಾಚರಣೆ ಹಾಗೂ ನಿರ್ವಹಣೆಗಾಗಿ ಗುತ್ತಿಗೆದಾರರ ಆಯ್ಕೆಗಾಗಿ ಎಂಪಿಎಂ ಕ್ರಮವನ್ನು ಪ್ರಾರಂಭಿಸಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: VISL Factory: ವಿಐಎಸ್‌ಎಲ್ ಉಳಿಸಲು ಕಾರ್ಮಿಕರು ನಡೆಸುವ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ
ಎಂಪಿಎಂ ಕಾರ್ಖಾನೆ ಪ್ರತಿ ವರ್ಷ ಸುಮಾರು 450 ಕೋಟಿ ರೂ. ವಹಿವಾಟು ಮಾಡುತ್ತಿತ್ತು. 600 ಕೋಟಿ ರೂ. ನಷ್ಟವಾಗಿದೆ ಎಂಬ ಕಾರಣಕ್ಕೆ 7 ವರ್ಷಗಳ ಹಿಂದೆ ಕಾರ್ಖಾನೆಯನ್ನು ಮುಚ್ಚಲಾಯಿತು. 2020ರಲ್ಲೂ ಟೆಂಡರ್ ಆಹ್ವಾನಿಸುವ ಪ್ರಕ್ರಿಯೆ ನಡೆದಿತ್ತು. ಆದರೆ ಖಾಸಗೀಕರಣಕ್ಕೆ ಅನೇಖರು ವಿರೋಧ ವ್ಯಕ್ತಪಡಿಸಿದ್ದರು. ಕಾರ್ಖಾನೆಗೆ ಬಂಡವಾಳವನ್ನು ತೊಡಗಿಸಿ ವಿಶವೇಶ್ವರಯ್ಯನವರ ಹೆಸರನ್ನು ಉಳಿಸಬೇಕು ಎಂದು ಕಾರ್ಮಿಕ ಸಂಘಟನೆಗಳು ಸರ್ಕಾರಕ್ಕೆ ಒತ್ತಾಯಿಸುತ್ತಾ ಬಂದಿವೆ.
ಕಾರ್ಖಾನೆಯನ್ನು ಪುನಾರಂಭಗೊಳಿಸಬೇಕೆಂದು ಈ ಹಿಂದೆ ಸಿಎಂ ಆಗಿದ್ದ ಬಿ.ಎಸ್. ಯಡಿಯೂರಪ್ಪ ಆಸಕ್ತಿ ತೋರಿದ್ದರು. ಈ ಕುರಿತು ಬೆಂಗಳೂರಿನಲ್ಲಿ ಅಧಿಕಾರಿಗಳ ಸಭೆಯೂ ನಡೆದಿತ್ತು. ಕಾರ್ಖಾನೆಯ ವ್ಯಾಫ್ತಿಯಲ್ಲಿರುವ ಅರಣ್ಯವನ್ನು ಕಾರ್ಖಾನೆಗೇ ಉಳಿಸಿಕೊಳ್ಳಲು ತೀರ್ಮಾನಿಸಲಾಗಿತ್ತು. ಈಗ ಅಲ್ಲಿರುವ ಮರಗಳನ್ನು ಖಾಸಗಿಯವರಿಗೆ ನೀಡಲಾಗುತ್ತಿದೆ. ಎಂಪಿಎಂ ಆರಂಭವಾದರೆ ಬಳಸಿಕೊಳ್ಳಬಹುದು. ವಿಧಾನಸಭೆ ಚುನಾವಣೆ ಸಮಯದಲ್ಲೂ ಎಂಪಿಎಂ ಹಾಗೂ ವಿಐಎಸ್‌ಎಲ್ ಪುನಾರಂಭಿಸುವ ಕುರಿತು ವಿವಿಧ ರಾಜಕೀಯ ಪಕ್ಷಗಳಿಗೆ ನೌಕರರು ಒತ್ತಾಯ ಮಾಡಿದ್ದರು.
ಚುನಾವಣೆಗೂ ಮುನ್ನ ಭದ್ರಾವತಿಯಲ್ಲಿ ಕಾರ್ಮಿಕರ ಮುಷ್ಕರ ಸ್ಥಳಕ್ಕೆ ತೆರಳಿ ಮಾತನಾಡಿದ್ದ ಡಿ.ಕೆ. ಶಿವಕುಮಾರ್ ಅವರು, ವಿಐಎಸ್‌ಎಲ್ ಹಾಗೂ ಎಂಪಿಎಂ ನೌಕರರ ಜತೆಗೆ ನಾವಿರುತ್ತೇವೆ ಎಂದು ಭರವಸೆ ನೀಡಿದ್ದರು.