Site icon Vistara News

Go to Pakistan : ಮುಸ್ಲಿಂ ವಿದ್ಯಾರ್ಥಿಗಳನ್ನು ಪಾಕಿಸ್ತಾನಕ್ಕೆ ಹೋಗಿ ಇದು ನಿಮ್ಮ ದೇಶ ಅಲ್ಲ ಎಂದ ಶಿಕ್ಷಕಿ; ತನಿಖೆ ಆರಂಭ

School teacher

ಬೆಂಗಳೂರು: ಇದು ನಿಮ್ಮ ದೇಶ ಅಲ್ಲ, ನೀವು ಪಾಕಿಸ್ತಾನಕ್ಕೆ ಹೋಗಿ (Go to Pakistan), ಯಾವತ್ತಿದ್ದರೂ ನೀವು ನಮ್ಮ ಗುಲಾಮರೇ- ಎಂದು ಇಬ್ಬರು ಮುಸ್ಲಿಂ ವಿದ್ಯಾರ್ಥಿಗಳನ್ನು (Muslim Students) ಶಿಕ್ಷಕಿಯೊಬ್ಬರು (School teacher) ಹೀಯಾಳಿಸಿದ ಘಟನೆಗೆ ಸಂಬಂಧಿಸಿ ಶಿಕ್ಷಣ ಇಲಾಖೆ ತನಿಖೆ ಆರಂಭಿಸಿದೆ. ಶಿವಮೊಗ್ಗದ ಟಿಪ್ಪು ನಗರದ ಸರ್ಕಾರಿ ಉರ್ದು ಶಾಲೆಯಲ್ಲಿ (Urdu school in Shivamogga) ಕಳೆದ ಗುರುವಾರ ಈ ಘಟನೆ ನಡೆದಿದೆ. ಈ ರೀತಿಯಾಗಿ ಮಕ್ಕಳನ್ನು ಗದರಿಸಿದ ಶಿಕ್ಷಕಿ ಮಂಜುಳಾ ದೇವಿ ಅವರನ್ನು ಈಗಾಗಲೇ ನಿಯೋಜನೆ ಮೇರೆಗೆ ಬೇರೆ ಶಾಲೆಗೆ ಕಳುಹಿಸಲಾಗಿದೆ.

ಕ್ಷೇತ್ರ ಶಿಕ್ಷಣಾಧಿಕಾರಿಯಾಗಿರುವ ಬಿ. ನಾಗರಾಜ್‌ ಅವರು ಈಗಾಗಲೇ ಈ ಘಟನೆಯ ಬಗ್ಗೆ ತನಿಖೆ ನಡೆಸಿದ್ದು, ಕ್ಲಾಸಿನಲ್ಲಿದ್ದ ಇತರ ವಿದ್ಯಾರ್ಥಿಗಳನ್ನು ಕೂಡಾ ವಿಚಾರಣೆ ನಡೆಸಿದ್ದಾರೆ. ಆಗ ಮಂಜುಳಾ ದೇವಿ ಅವರು ಈ ರೀತಿ ಹೇಳಿದ್ದು ನಿಜವೆಂದು ಸಾಬೀತಾಗಿದೆ.

ಏನಿದು ಘಟನೆ? ಶಿಕ್ಷಕಿ ಈ ರೀತಿ ಹೇಳಿದ್ದೇಕೆ?

ಕಳೆದ ಗುರುವಾರ ಶಿವಮೊಗ್ಗದ ಉರ್ದು ಶಾಲೆಯಲ್ಲಿ ಇಬ್ಬರು ಮುಸ್ಲಿಂ ವಿದ್ಯಾರ್ಥಿಗಳು ಜಗಳವಾಡಿಕೊಂಡಿದ್ದರು. ಪರಸ್ಪರ ಬೈದಾಡಿಕೊಳ್ಳುತ್ತಿದ್ದ ಅವರನ್ನು ನಿಯಂತ್ರಿಸುವ ಬದಲು ಶಿಕ್ಷಕಿ ಮಂಜುಳಾ ದೇವಿ ಅವರು ಇಬ್ಬರಿಗೂ ದೇಶ ಬಿಟ್ಟು ಹೋಗಿ ಎಂಬರ್ಥದ ಮಾತುಗಳಲ್ಲಿ ಹೀಯಾಳಿಸಿದ್ದಾರೆ ಎನ್ನಲಾಗಿದೆ.

ಇದು ನಿಮ್ಮ ದೇಶ ಅಲ್ಲ, ನೀವು ಪಾಕಿಸ್ತಾನಕ್ಕೆ ಹೋಗಿ, ಯಾವತ್ತಿದ್ದರೂ ನೀವು ನಮ್ಮ ಗುಲಾಮರೇ ಎಂದು ಶಿಕ್ಷಕಿ ಹೇಳಿದ್ದರು. ಆ ಘಟನೆ ಅಲ್ಲಿಗೆ ಮುಕ್ತಾಯವಾಗಿತ್ತು. ಆದರೆ, ಶಾಲೆಯಲ್ಲಿ ನಡೆದ ಘಟನಾವಳಿಗಳು ಮಕ್ಕಳ ಮೂಲಕ ಮನೆಯವರಿಗೆ ತಿಳಿದ ನಂತರ ಜಾತ್ಯತೀತ ಜನತಾದಳ ಶಿವಮೊಗ್ಗ ಜಿಲ್ಲಾಧ್ಯಕ್ಷ ಎ. ನಝ್ರುಲ್ಲಾ ಅವರು ಶಿಕ್ಷಣ ಇಲಾಖೆಗೆ ದೂರು ನೀಡಿದ್ದರು.

ʻʻಮಕ್ಕಳು ನಮಗೆ ವಿಷಯ ತಿಳಿಸಿದಾಗ ಆಘಾತವಾಯಿತು. ಮಕ್ಕಳಲ್ಲಿ ಈ ರೀತಿ ಬೇದಭಾವ ಸೃಷ್ಟಿಸುವುದು ಎಷ್ಟು ಸರಿ ಎಂದು ಭಾವಿಸಿದ ನಾವು ಡಿಡಿಪಿಐ ಅವರಿಗೆ ದೂರು ನೀಡಿದ್ದೆವು. ಮತ್ತು ಇಲಾಖೆ ಈ ಬಗ್ಗೆ ತನಿಖೆ ಆರಂಭಿಸಿದೆʼʼ ಎಂದು ನಝ್ರುಲ್ಲಾ ತಿಳಿಸಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ನಾಗರಾಜ್‌ ಅವರು ತನಿಖೆ ನಡೆಸಿದ್ದು ಈಗಾಗಲೇ ಒಂದು ಸುತ್ತಿನ ಮಾಹಿತಿ ಸಂಗ್ರಹ ಮಾಡಿದ್ದಾರೆ.

ಬಿ. ನಾಗರಾಜ್‌ ಅವರು ಈಗಾಗಲೇ ತಮ್ಮ ವರದಿಯನ್ನು ಉನ್ನತ ಅಧಿಕಾರಿಗಳಿಗೆ ಕಳುಹಿಸಿದ್ದಾರೆ. ಅವರು ಹೇಳಿದಂತೆ ಮುಂದಿನ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಶಿಕ್ಷಕಿ ಮಂಜುಳಾ ದೇವಿ ಅವರು ಕಳೆದ ಏಳೆಂಟು ವರ್ಷಗಳಿಂದ ಇದೇ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಇದುವರೆಗೂ ಈ ರೀತಿ ಬೇಧ ಭಾವ ಮಾಡಿದ ಉದಾಹರಣೆಗಳು ಇಲ್ಲ. ಜಗಳ ಮಾಡುತ್ತಿದ್ದ ವಿದ್ಯಾರ್ಥಿಗಳು ಮಾತು ಕೇಳದೆ ಇದ್ದಾಗ ಈ ರೀತಿ ಗದರಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: School Teacher : ಮುಸ್ಲಿಂ ಬಾಲಕನಿಗೆ ಬೇರೆ ಮಕ್ಕಳಿಂದ ಕಪಾಳಕ್ಕೆ ಹೊಡೆಸಿದ ಟೀಚರ್​!

ಉತ್ತರ ಪ್ರದೇಶದಲ್ಲೂ ಇಂಥ ಘಟನೆ ನಡೆದಿತ್ತು

ಉತ್ತರ ಪ್ರದೇಶದ ಮುಝಫ್ಫರ್‌ ನಗರ ಜಿಲ್ಲೆಯಲ್ಲಿ ಶಿಕ್ಷಕಿಯೊಬ್ಬರು ಮಗ್ಗಿ ಹೇಳಲು ಬಾರದ ಮುಸ್ಲಿಂ ವಿದ್ಯಾರ್ಥಿಗೆ ಹಿಂದು ವಿದ್ಯಾರ್ಥಿಯ ಕೈಯಿಂದ ಕಪಾಳಕ್ಕೆ ಹೊಡೆಸಿದ್ದಲ್ಲದೆ ಕೋಮು ಸೂಕ್ಷ್ಮ ಹೇಳಿಕೆಗಳನ್ನು ನೀಡಿದ್ದು ಸುದ್ದಿಯಾಗಿತ್ತು. ಕೇವಲ ಎರಡನೇ ತರಗತಿಯ ಮಕ್ಕಳ ಜತೆ ಇಂಥ ಕೋಮು ಭಾವನೆ ಕೆರಳುವ ರೀತಿಯಲ್ಲಿ ನಡೆದುಕೊಂಡಿದ್ದು ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಹುಡುಗನ ಮನೆಯವರ ದೂರಿನಂತೆ ಶಿಕ್ಷಕಿ ಮೇಲೆ ಕ್ರಮ ಕೈಗೊಳ್ಳಲಾಗಿತ್ತು.

Exit mobile version