ಶಿವಮೊಗ್ಗ: ದೇಶಕ್ಕೀಗ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಹೋರಾಟಗಾರರನ್ನು ನೆನಪಿಸಿಕೊಳ್ಳುವ ಉದ್ದೇಶದಿಂದ ಕಾಂಗ್ರೆಸ್ ವತಿಯಿಂದ ರಾಜ್ಯಾದ್ಯಂತ ಪಾದಯಾತ್ರೆಯನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ತೀರ್ಥಹಳ್ಳಿ ತಾಲೂಕಿನ ಹಾರೋಗೊಳಿಗೆ ಗ್ರಾಮದಿಂದ ಪಟ್ಟಣದವರೆಗೆ ಗುರುವಾರ ಮಹಾತ್ಮ-ಹುತಾತ್ಮರ ನೆನಪಿನ ನಡಿಗೆ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.
“ದೇಶಕ್ಕೆ ಕೊಡುಗೆ ನೀಡಿದಂತಹ, ತ್ಯಾಗ ಮಾಡಿದಂತಹ ಮಹಾತ್ಮರು, ಹುತಾತ್ಮರು ಅನೇಕರಿದ್ದಾರೆ. ಅವರನ್ನು ನೆನಪಿಸಿಕೊಳ್ಳುವುದು ಇಂದಿನ ಅವಶ್ಯಕತೆಗಳಲ್ಲಿ ಒಂದು. ಇತಿಹಾಸ ನೆನಪಿದ್ದರೆ ಮಾತ್ರ ಉತ್ತಮ ಭವಿಷ್ಯವನ್ನು ನಾವು ಕಟ್ಟಿಕೊಳ್ಳಬಹುದು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಜನರಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಜಾಗೃತಿ ಸೇರಿದಂತೆ ದೇಶದ ಮಹನೀಯರ ನೆನಪನ್ನು ಮಾಡಿಕೊಡುವ ಕೆಲಸವನ್ನು ಪಾದಯಾತ್ರೆ ಮೂಲಕ ಮಾಡುತ್ತಿದೆ” ಎಂದು ಪಾದಯಾತ್ರೆಯ ನೇತೃತ್ವ ವಹಿಸಿದ್ದ ಕೆಪಿಸಿಸಿ ಸಹಕಾರ ವಿಭಾಗದ ಸಂಚಾಲಕ ಆರ್. ಎಂ ಮಂಜುನಾಥ್ ಗೌಡ ಹೇಳಿದರು.
ಕತ್ತಲಿನಿಂದ ಬೆಳಕಿನೆಡೆಗೆ-ಸ್ವಾತಂತ್ರ್ಯ ಜಾಗೃತಿ ಯಾತ್ರೆ
ಕತ್ತಲಿನಿಂದ ಬೆಳಕಿನೆಡೆಗೆ-ಸ್ವಾತಂತ್ರ್ಯ ಜಾಗೃತಿ ಯಾತ್ರೆ ಘೋಷವಾಕ್ಯದಡಿ ಪಾದಯಾತ್ರೆ ನಡೆದಿದ್ದು, ನೂರಾರು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಸುಮಾರು 15 ಕಿ.ಮೀ. ಹೆಜ್ಜೆ ಹಾಕಿದರು. ಇದಕ್ಕೂ ಮುನ್ನ ತೀರ್ಥಹಳ್ಳಿಯ ಹಾರೋಗೊಳಿಗೆ ಗ್ರಾಮದಲ್ಲಿ ಮಾಜಿ ಸಿಎಂ ಕಡಿದಾಳ ಮಂಜಪ್ಪ ಸಮಾಧಿಗೆ ಪುಷ್ಪ ನಮನ ಸಲ್ಲಿಸಿ, ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
ಕೆಪಿಸಿಸಿ ಸಹಕಾರ ವಿಭಾಗದ ಸಂಚಾಲಕ ಆರ್.ಎಂ.ಮಂಜುನಾಥ್ ಗೌಡ ನೇತೃತ್ವದಲ್ಲಿ ಈ ಪಾದಯಾತ್ರೆ ನಡೆಯಿತು.
ಗಾಂಧಿ ಟೋಪಿ ಧರಿಸಿದ ಪಾದಯಾತ್ರಿಗಳ ಕೈಯಲ್ಲಿ ರಾಷ್ಟ್ರಧ್ವಜ, ರಾರಾಜಿಸಿದವು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಈ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರು.
ಪಕ್ಷದಲ್ಲೇ ವಿರೋಧ
ಕಸಾಪ, ಪ್ರಗತಿಪರ ಸಂಘಟನೆಗಳು, ಸಹಕಾರ ಸಂಘಗಳ ಮುಖಂಡರು ಈ ಪಾದಯಾತ್ರೆಗೆ ಬೆಂಬಲವನ್ನು ವ್ಯಕ್ತಪಡಿಸಿತ್ತು. ಆದರೆ, ಕಾಂಗ್ರೆಸ್‌ನ ಈ ಪಾದಯಾತ್ರೆಗೆ ಕಾಂಗ್ರೆಸ್ ನಾಯಕರೇ ವಿರೋಧವನ್ನು ವ್ಯಕ್ತಪಸಿದ್ದರು. ಡಾ. ಆರ್.ಎಂ. ಮಂಜುನಾಥ ಗೌಡ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಎಂದು ಕಿಮ್ಮನೆ ರತ್ನಾಕರ್ ಅವರು ಪತ್ರ ಬರೆದು ಅಸಮಾಧಾನವನ್ನು ಹೊರಹಾಕಿದ್ದರು. ಆದರೆ, ಇದು ಪಕ್ಷದ ಕಾರ್ಯಕ್ರಮವಾಗಿದ್ದು, ವರಿಷ್ಠರ ಸೂಚನೆಯನ್ನು ಪಾಲಿಸುವುದು ನಮ್ಮೆಲ್ಲರ ಕರ್ತವ್ಯ. ಹೀಗಾಗಿ ತಾವು ಪಾದಯಾತ್ರೆಯನ್ನು ಮಾಡೇ ಮಾಡುವುದಾಗಿ ಮಂಜುನಾಥ ಗೌಡ ಹೇಳಿಕೊಂಡಿದ್ದಲ್ಲದೆ, ಯಶಸ್ವಿಯಾಗಿ ಪಾದಯಾತ್ರೆಯನ್ನು ಆಯೋಜಿಸಿದ್ದರು. ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಗೈರಿನ ನಡುವೆಯೂ ಪಾದಯಾತ್ರೆಯು ಯಾವುದೇ ಗೊಂದಲ ಇಲ್ಲದೆ, ಸರಾಗವಾಗಿ ನೆರವೇರಿತು.
ಇದನ್ನೂ ಓದಿ | ಆರಗ ಜ್ಞಾನೇಂದ್ರ ರಾಜೀನಾಮೆಗೆ ಒತ್ತಾಯಿಸಿ ಶಿವಮೊಗ್ಗದಲ್ಲಿ ಹಿಂದು ಜಾಗರಣಾ ವೇದಿಕೆಯಿಂದ ಪ್ರತಿಭಟನೆ
ಪಕ್ಷಾತೀತ ಕಾರ್ಯಕ್ರಮ
ಆರ್.ಎಂ.ಮಂಜುನಾಥ್ ಗೌಡ ಮಾತನಾಡಿ, “ಇದೊಂದು ಸ್ಮರಣೀಯ ಕಾರ್ಯಕ್ರಮ. ಇದು ಯಾವುದೇ ಸರ್ಕಾರದ ವಿರುದ್ಧ ಪ್ರತಿಭಟನೆಯಲ್ಲ. ಕಾಂಗ್ರೆಸ್ ಮುಂದಾಳತ್ವದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಿರುವ ಕುರಿತು ಜನತೆಗೆ ತಿಳಿಸುವ ಕಾರ್ಯಕ್ರಮ. ಇದರಲ್ಲಿ ಯಾವುದೇ ದ್ವೇಷ ರಾಜಕಾರಣ ಇಲ್ಲ. ಕಾಂಗ್ರೆಸ್ ನೇತೃತ್ವವಾದರೂ ಇದೊಂದು ಪಕ್ಷಾತೀತ ಕಾರ್ಯಕ್ರಮವಾಗಿದೆ. ಕೆಪಿಸಿಸಿ ಅದ್ಯಕ್ಷರ ಸೂಚನೆ ಮೇರೆಗೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಬೆಂಗಳೂರಿನಲ್ಲಿ ಆ. 15ರಂದು ನಡೆಯುವ ಕಾರ್ಯಕ್ರಮದ ಭಾಗವಾಗಿ ಪಾದಯಾತ್ರೆ ನಡೆಯುತ್ತಿದೆ. ಈ ಮೂಲಕ ಯುವ ಪೀಳಿಗೆಗೆ ಕಾಂಗ್ರೆಸ್ ಪಾತ್ರದ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುತ್ತಿದೆ. ಮಹಾತ್ಮ ಗಾಂಧಿ, ನೆಹರು, ಶಾಸ್ತ್ರಿ, ಸರ್ದಾರ್ ವಲ್ಲಭಭಾಯಿ ಪಟೇಲ್, ಜಫರ್ ಖಾನ್ ಮತ್ತಿತರ ನೇತೃತ್ವದಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂತು. ಅದನ್ನು ಜನರಿಗೆ ತಿಳಿಸುವ ಕಾರ್ಯ ನಡೆಯುತ್ತಿದೆ” ಎಂದರು.
ಪಾದಯಾತ್ರೆಗೆ ಚಾಲನೆ ನೀಡಿದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ʻಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಕೈಗೊಂಡ ಕಾರ್ಯಕ್ರಮಕ್ಕೆ ಎಲ್ಲರೂ ಪಕ್ಷಾತೀತವಾಗಿ ಭಾಗವಹಿಸುತ್ತಿರುವುದು ಶ್ಲಾಘನೀಯ ಎಂದರು.
ಕಿಮ್ಮನೆಗೆ ಹಿನ್ನಡೆ?
ಸ್ಥಳೀಯ ಕಾಂಗ್ರೆಸ್ ನಾಯಕ, ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಅವರು ಪಾದಯಾತ್ರೆಯನ್ನು ತೀವ್ರವಾಗಿ ವಿರೋಧಿಸಿದ್ದರು. ಈ ಮಧ್ಯೆಯೂ ಆರ್.ಎಂ. ಮಂಜುನಾಥ ಗೌಡ ಯಶಸ್ವಿಯಾಗಿ ಪಾದಯಾತ್ರೆ ನಡೆಸುವ ಮೂಲಕ ತಾವೂ ನಿರ್ವಹಣೆಯನ್ನು ಮಾಡಬಲ್ಲೆ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಈ ಬೆಳವಣಿಗೆಯು ಕಿಮ್ಮನೆಗೆ ಹಿನ್ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ.