ಶಿವಮೊಗ್ಗ: ಪೊಲೀಸರು ಠಾಣೆಗೆ ಕರೆಯಿಸಿ ಹಲ್ಲೆ ನಡೆಸಿದ್ದರಿಂದ (Police atrocity) ಮನನೊಂದು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭದ್ರಾವತಿ ತಾಲೂಕು ಹೊಳೆಹೊನ್ನೂರಿನ ಕನ್ನೆಕೊಪ್ಪ ಗ್ರಾಮದಲ್ಲಿ ನಡೆದಿದೆ. ಕನ್ನೆಕೊಪ್ಪ ಗ್ರಾಮದ ಮಂಜುನಾಥ್(30) ಆತ್ಮಹತ್ಯೆ (Suicide case) ಮಾಡಿಕೊಂಡ ವ್ಯಕ್ತಿ.
ಮಂಜುನಾಥನನ್ನು ಹೊಳೆಹೊನ್ನೂರು ಪೊಲೀಸರು ವಿಚಾರಣೆಗೆಂದು ಜೂನ್ 11ರಂದು ಕರೆದುಕೊಂಡು ಹೋಗಿ ಅಂದೇ ವಾಪಸ್ ಕಳುಹಿಸಿದ್ದರು. ಯಾವುದೇ ಪ್ರಕರಣಕ್ಕೆ ಸಂಬಂಧಿಸಿ ಈ ಘಟನೆ ನಡೆದಿತ್ತು. ಪೊಲೀಸ್ ಠಾಣೆಗೆ ವಿಚಾರಣೆಗೆಂದು ಕರೆದುಕೊಂಡು ಹೋಗಿ ಪೊಲೀಸರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಇದರಿಂದ ಮಂಜುನಾಥ್ ಮಂಕಾಗಿದ್ದು, ಮನೆಯಿಂದ ಹೊರಗೆ ಹೋಗದೆ ಮನೆಯಲ್ಲಿಯೇ ಇರುತ್ತಿದ್ದರು.
ಜೂನ್ 15ರ ರಾತ್ರಿ ಮಂಜುನಾಥ್ ಊಟ ಮುಗಿದ ಮೇಲೆ ʻʻನಾನು ಕ್ರಿಕೆಟ್ ನೋಡಿಕೊಂಡು ಬರುತ್ತೇನೆ. ನಂತರ ಮನೆಯ ಮುಂದಿನ ರೂಂನಲ್ಲಿ ಮಲಗಿರುತ್ತೇನೆʼʼ ಎಂದು ಹೇಳಿ ಹೊರಗೆ ಹೋಗಿದ್ದ.
ಶುಕ್ರವಾರ ಬೆಳಗ್ಗೆ ಬೆಳಗ್ಗೆ ಮನೆಯ ಬಾಗಿಲು ಬಡಿದಾಗ ಬಾಗಿಲು ತೆರೆಯಲೇ ಇಲ್ಲ. ಬಳಿಕ ಮನೆಯವರು ಅಕ್ಕಪಕ್ಕದವರನ್ನು ಕರೆಯಿಸಿ ಬಾಗಿಲು ತೆಗೆದು ನೋಡಿದಾಗ ಮಂಜುನಾಥ್ ಮನೆಯ ಅಟ್ಟಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂತು.
ಮಂಜುನಾಥ್‌ಗೆ ಎರಡು ವರ್ಷದ ಮಗು ಇದ್ದು, ಪತ್ನಿ ಕಮಲಾಕ್ಷಿ ಗರ್ಭಣಿಯಾಗಿದ್ದಾರೆ. ತನ್ನ ಪತಿಯ ಸಾವಿಗೆ ಪೊಲೀಸರು ನಡೆಸಿದ ಹಲ್ಲೆಯೇ ಕಾರಣ ಎಂದು ಪತ್ನಿ ಕಮಲಾಕ್ಷಿ ದೂರು ನೀಡಿದ್ದಾರೆ.
ಚರಂಡಿ ನೀರು ವಿಚಾರದಲ್ಲಿ ಕುಟುಂಬಗಳ ಫೈಟ್: ಯುವಕ ದಾರುಣ ಸಾವು
ತುಮಕೂರು: ಜಾಗದ ವಿಚಾರದಲ್ಲಿ ಅಕ್ಕ ಪಕ್ಕದ ಜಮೀನು ಮಾಲೀಕರು, ಕುಟುಂಬಗಳ ಒಳಗಿನ ಸಣ್ಣಪುಟ್ಟ ವೈಮನಸ್ಸುಗಳು ಇತ್ತೀಚೆಗೆ ದೊಡ್ಡ ಮಟ್ಟದ ಮಾರಾಮಾರಿಗೆ (family fight) ಕಾರಣವಾಗುತ್ತಿವೆ. ಜನರು ಬಡಿಗೆ ಎತ್ತಿಕೊಂಡು, ಕತ್ತಿ ಚೂರಿ ಹಿಡಿದುಕೊಂಡು ಹೊಡೆದಾಡಲು ಮುಂದಾಗುತ್ತಿರುವ ವಿದ್ಯಮಾನಗಳು ಅಲ್ಲಲ್ಲಿ ನಡೆಯುತ್ತಿವೆ. ಅಂಥಹುದೇ ಒಂದು ಹೊಡೆದಾಟ ತುಮಕೂರಿನಲ್ಲಿ ನಡೆದಿದ್ದು ಯುವಕನೊಬ್ಬ ದಾರುಣವಾಗಿ (young man death) ಪ್ರಾಣ ಕಳೆದುಕೊಂಡಿದ್ದಾನೆ.
ಚರಂಡಿ ನೀರು ಹರಿದುಹೋಗುವ ವಿಚಾರದಲ್ಲಿ ಎರಡು ಕುಟುಂಬದ ನಡುವೆ ಹುಟ್ಟಿಕೊಂಡ ಜಗಳ ಹೊಡೆದಾಟಕ್ಕೆ ತಿರುಗಿದ್ದು, ಗಲಾಟೆಯಲ್ಲಿ ಗಾಯಗೊಂಡಿದ್ದ ಯುವಕ ಈಗ ಮೃತಪಟ್ಟಿದ್ದಾನೆ.
ತಿಪಟೂರು ತಾಲೂಕಿನ ಕನ್ನುಘಟ್ಟ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ಮೃತಪಟ್ಟ ಯುವಕನನ್ನು ವಸಂತಕುಮಾರ್ (24) ಎಂದು ಗುರುತಿಸಲಾಗಿದೆ.
ಶಿವಬಸವಯ್ಯ ಮತ್ತು ಬಸವಲಿಂಗಯ್ಯರ ಕುಟುಂಬದ ನಡುವೆ ನಡೆದ ಗಲಾಟೆ ನಡೆದಿತ್ತು. ಬಸವಲಿಂಗಯ್ಯ ಕುಟುಂಬ ಶಿವಬಸವಯ್ಯರ ಕುಟುಂಬದ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿತ್ತು. ಇದರ ಪರಿಣಾಮವಾಗಿ ಶಿವಬಸವಯ್ಯರ ಪುತ್ರ ವಸಂತಕುಮಾರ್ ಗಂಭೀರವಾಗಿ ಗಾಯಗೊಂಡಿದ್ದರು. ಇದೀಗ ಅವರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ.
ಘಟನೆಗೆ ಸಂಬಂಧಿಸಿ ಬಸವಲಿಂಗಯ್ಯ, ಕುಮಾರ್, ವಿಜಯ್ ಸೇರಿದಂತೆ ಒಟ್ಟು 8 ಜನರ ವಿರುದ್ದ ದೂರು ದಾಖಲಾಗಿದೆ. ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಲು ಮುಂದಾಗಿದ್ದಾರೆ.
ಇದನ್ನೂ ಓದಿ : Cyber Crime: ಯುವ ವೈದ್ಯೆಯ ಬೆನ್ನುಬಿದ್ದ ಕಿರಾತಕ; ಅಶ್ಲೀಲ ಫೋಟೊ ತಂದೆಗೆ ಕಳಿಸಿ ಬ್ಲ್ಯಾಕ್‌ಮೇಲ್