Site icon Vistara News

Youth drowned : ಗಾಜನೂರು ಡ್ಯಾಂನಲ್ಲಿ ಯುವಕ ನೀರುಪಾಲು ಪ್ರಕರಣಕ್ಕೆ ಟ್ವಿಸ್ಟ್‌; ಜತೆಗೆ ಬಂದವರೇ ನೀರಿಗೆ ತಳ್ಳಿದರೇ?

Gajanur accident

ಶಿವಮೊಗ್ಗ: ಗಾಜನೂರು ಡ್ಯಾಂ (Gajanur Dam) ಪ್ರದೇಶದಲ್ಲಿ ಸಂಭವಿಸಿದ ದುರಂತದಲ್ಲಿ ಮಿಡ್ಲಘಟ್ಟದ ಹರೀಶ್‌ (22) ಎಂಬಾತ ಶುಕ್ರವಾರ ಮೃತಪಟ್ಟಿದ್ದ (Youth drowned). ಇದೊಂದು ಆಕಸ್ಮಿಕ (Accidental death) ಎಂದು ದಾಖಲಾಗಿತ್ತು. ಆದರೆ, ಈಗ ಆತನ ಕುಟುಂಬದವರು ಇದೊಂದು ಕೊಲೆ ಇರಬಹುದು (Murder suspected) ಎಂಬ ಸಂಶಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ.

ಶಿವಮೊಗ್ಗ ತಾಲೂಕಿನ ಗಾಜನೂರು ಜಲಾಶಯದಲ್ಲಿ ಈ ದುರ್ಘಟನೆ ನಡೆದಿತ್ತು. ಶುಕ್ರವಾರ ಹರೀಶ್‌ ಪ್ರವಾಸಕ್ಕೆಂದು ಸ್ನೇಹಿತರೊಂದಿಗೆ ಬಂದಿದ್ದ. ಡ್ಯಾಂ ಪ್ರವೇಶಕ್ಕೆ ನಿಷೇಧ ಇದ್ದ ಕಾರಣಕ್ಕೆ ಸಿಬ್ಬಂದಿಗಳ ಕಣ್ಣು ತಪ್ಪಿಸಿ ಚಾನಲ್ ಪಕ್ಕದ ದಾರಿಯಲ್ಲಿ ಹೋಗಿದ್ದರು. ಅಲ್ಲಿನ ಕಾಮಗಾರಿ ಸೇತುವೆಗೆ ಹೋಗಿದ್ದಾಗ ಹರೀಶ್‌ ನೀರುಪಾಲಾಗಿದ್ದ. 3 ದಿನಗಳಿಂದ ಯುವಕನಿಗಾಗಿ ಶೋಧ ಕಾರ್ಯ ನಡೆಯುತ್ತಿದ್ದರೂ ಶವ ಸಿಕ್ಕಿಲ್ಲ.

ಈ ನಡುವೆ, ಹರೀಶನ ಕುಟುಂಬಿಕರು ಇದೊಂದು ಕೊಲೆಯಾಗಿರುವ ಸಾಧ್ಯತೆ ಇದೆ. ಉದ್ದೇಶಪೂರ್ವಕವಾಗಿ ನೀರಿಗೆ ದೂಡಿರುವ ಅನುಮಾನವಿದೆ ಎಂದು ಆರೋಪಿಸಿದ್ದಾರೆ.

ಹರೀಶ ತನ್ನ ಗೆಳೆಯರಾದ ಪಮ್ಮು, ರಘು, ಸಂತೋಷ್ ಜೊತೆಗೆ ಹೋಗಿದ್ದ. ಹರೀಶ್ ನನ್ನು ಕರೆದುಕೊಂಡು ಬಂದವರು ನೀರಿಗೆ ದೂಡಿದ್ದಾರೆ ಎಂದು ಸಹೋದರ ಸುರೇಶ್‌ ಗಂಭೀರ ಆರೋಪ ಮಾಡಿದ್ದಾರೆ.

ಹರೀಶ್‌ಗಾಗಿ ಹುಡುಕಾಟ ನಡೆಸುತ್ತಿರುವ ಅಗ್ನಿಶಾಮಕ ದಳ ಸಿಬ್ಬಂದಿ

ಮೂರು ವರ್ಷದ ಹಿಂದೆ ಹರೀಶನ ಕೈಯಿಂದ ಸ್ನೇಹಿತ ಪಮ್ಮು 13500 ರೂ. ಸಾಲ ಪಡೆದಿದ್ದ. ಆದರೆ ಈವರೆಗೆ ಹಣ ಮರಳಿ ಕೊಟ್ಟಿಲ್ಲ. ಈ ಬಗ್ಗೆ ಹರೀಶ್ ಆಗಾಗ ಹೇಳುತ್ತಿದ್ದ. ಹೋಗ್ಲಿ ಬಿಡು ಅಂತ ಸಮಾಧಾನ ಮಾಡಿದ್ದೆ. ಈಗ ಅವರು ಅವನನ್ನು ಕರೆದುಕೊಂಡು ಹೋಗಿ ನೀರಿಗೆ ದೂಡಿರುವ ಸಂಶಯವಿದೆ ಎನ್ನುತ್ತಾರೆ ಸುರೇಶ್‌.

ಹರೀಶನ ಜತೆ ಹೋದವರ ಮೊಬೈಲ್‌ ಸ್ವಿಚ್‌ ಆಫ್‌ ಬರುತ್ತಿರುವುದು ನಮ್ಮ ಸಂಶಯವನ್ನು ಇನ್ನಷ್ಟು ಹೆಚ್ಚಿಸಿದೆ ಎನ್ನುತ್ತಾರೆ ಸುರೇಶ್‌. ಅವರಿಗೆ ಈಜು ಬರುತ್ತಿರಲಿಲ್ಲ. ಆದರೂ ನೀರಿಗೆ ಇಳಿಯಲು ಹೇಗೆ ಹೋದ. ಹಣ ಕೇಳುತ್ತಿದ್ದಾನೆಂದು ನೀರಿಗೆ ದೂಡಿದ್ರಾ? ಎನ್ನುವುದು ಹರೀಶ್ ಸಹೋದರ ಸುರೇಶ್ ಅನುಮಾನ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಅವರೇ ಸಂಶಯದ ಸಿಕ್ಕನ್ನು ಬಿಡಿಸಬೇಕಾಗಿದೆ.

ಇದನ್ನೂ ಓದಿ : ಷೇರು ಮಾರುಕಟ್ಟೆ ಲಾಭದ ಆಸೆ ತೋರಿಸಿ ಬೆಂಗಳೂರಿನಲ್ಲಿ ಜನರಿಗೆ ವಂಚಿಸುತ್ತಿದ್ದ ಕೇರಳದ ಖತರ್ನಾಕ್‌ ದಂಪತಿ ಅರೆಸ್ಟ್‌

ಅರಶಿನ ಗುಂಡಿಯಲ್ಲಿ ಇತ್ತೀಚೆಗೆ ಶರತ್‌ ಎಂಬಾತ ಸಾವನ್ನಪ್ಪಿದ್ದ. ಅವನು ಕೂಡಾ ಸಿಬ್ಬಂದಿಗಳ ಕಣ್ಣು ತಪ್ಪಿಸಿ ಸಾಹಸಕ್ಕೆ ಮುಂದಾಗಿದ್ದ. ಅದೇ ಮಾದರಿಯಲ್ಲಿ ಇನ್ನೂ ಯುವಕರು ಅಪಾಯವನ್ನು ಮೈಮೇಲೆ ಎಳೆದುಕೊಂಡಿದ್ದಾರೆ ಎಂಬ ಚರ್ಚೆ ಜೋರಾಗಿದೆ. ಅಧಿಕಾರಿಗಳು ನಿರ್ದಿಷ್ಟ ಕಾರಣಕ್ಕಾಗಿಯೇ ಪ್ರವೇಶವನ್ನು ನಿರ್ಬಂಧಿಸಿರುತ್ತಾರೆ. ಆದರೆ, ಜನರು ಅದನ್ನು ಮೀರಿ ತಮ್ಮ ಪ್ರಾಣಕ್ಕೆ ತಾವೇ ಕುತ್ತು ತಂದುಕೊಳ್ಳುತ್ತಿದ್ದಾರೆ. ಆದರೆ, ಇಲ್ಲಿ ಅದನ್ನೂ ಮೀರಿದ ಕಾರಣವಿದೆ ಎನ್ನುವುದು ಕುಟುಂಬದವರ ಆರೋಪ. ಪೊಲೀಸರೇ ಇದನ್ನು ಬಗೆಹರಿಸಬೇಕಾಗಿದೆ.

Exit mobile version