ಶಿವಮೊಗ್ಗ: ರಾಜ್ಯದಲ್ಲಿ ಝಿಕಾ ವೈರಸ್ (Zika Virus) ಆತಂಕ ಹೆಚ್ಚಾಗಿದ್ದು, ಶಿವಮೊಗ್ಗದಲ್ಲಿ ಝಿಕಾ ವೈರಸ್‌ಗೆ 74 ವರ್ಷದ ವೃದ್ಧರೊಬ್ಬರು ಬಲಿಯಾಗಿದ್ದಾರೆ. ಝಿಕಾ ವೈರಸ್ ಜತೆಗೆ ಬಹು ಅಂಗಾಂಗ ವೈಫಲ್ಯಗಳಿಂದ ವೃದ್ಧ ಬಳಲುತ್ತಿದ್ದರು ಎನ್ನಲಾಗಿದೆ.
ಕಳೆದ ಹತ್ತು ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕೇವಲ ಝಿಕಾ ವೈರಸ್‌ಗೆ ವ್ಯಕ್ತಿ ಸಾಯಲು ಸಾಧ್ಯವಿಲ್ಲ. ಅವರು ಬಹು ಅಂಗಾಂಗ ವೈಫಲ್ಯಗಳಿಂದ ಬಳಲುತ್ತಿದ್ದರು ಎಂದು ಸಾವಿನ ಬಗ್ಗೆ ಶಿವಮೊಗ್ಗ ಡಿಎಚ್‌ಒ ಡಾ.ನಟರಾಜ್ ಸ್ಪಷ್ಟನೆ ಪಡಿಸಿದ್ದಾರೆ.
ಯುವಕನಲ್ಲೂ ಝಿಕಾ ವೈರಸ್ ಪತ್ತೆ
ಶಿವಮೊಗ್ಗದ ಸಾಗರ ಮೂಲದ 24 ವರ್ಷದ ಯುವಕನಲ್ಲೂ ಝಿಕಾ ವೈರಸ್ ಪತ್ತೆಯಾಗಿದೆ ಎನ್ನಲಾಗಿದೆ. ಯುವಕನಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಝಿಕಾ ರೋಗದ ಲಕ್ಷಣಗಳೇನು?
- ಕಣ್ಣು ಕೆಂಪಾಗುವಿಕೆ, ತಲೆ ನೋವು, ಜ್ವರ, ಕೀಲುಗಳಲ್ಲಿ ನೋವು, ಗಂಧೆಗಳು, ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
ಜನರು ಯಾವ ನಿಯಮ ಪಾಲಿಸಬೇಕು?
ರೋಗದ ಲಕ್ಷಣ ಕಂಡು ಬಂದರೆ ಕೂಡಲೇ ಜನರು ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಈ ಮೂಲಕ ತಮ್ಮ ಜೀವಕ್ಕೆ ಕುತ್ತು ತಂದುಕೊಳ್ಳಬಾರದು ಎಂಬ ಸಲಹೆಯನ್ನು ಆರೋಗ್ಯ ಇಲಾಖೆ ನೀಡಿದೆ.
ರೋಗ ಲಕ್ಷಣಗಳು ಸೌಮ್ಯ ಹಾಗೂ ಸಾಧಾರಣ ಸ್ವರೂಪವಾಗಿದ್ದು, 2 ರಿಂದ 7 ದಿನಗಳವರೆಗೆ ಇರುತ್ತದೆ. ಗರ್ಭಿಣಿಯರು ವಿಶೇಷವಾಗಿ ಎಚ್ಚರಿಕೆ ವಹಿಸಬೇಕು. ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ. ಯಾವುದೇ ರೋಗ ಲಕ್ಷಣಗಳು ಕಂಡುಬಂದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆ/ವೈದ್ಯರನ್ನು ಸಂಪರ್ಕ ಮಾಡಬೇಕು ಎಂದು ಆರೋಗ್ಯ ಇಲಾಖೆ ಮಾರ್ಗಸೂಚಿಯಲ್ಲಿ ತಿಳಿಸಿದೆ.
ಇದನ್ನೂ ಓದಿ: Death by Shock: ಮೊಬೈಲ್ ಚಾರ್ಜರ್‌ನಿಂದ ಶಾಕ್ ಹೊಡೆದು ವಿದ್ಯಾರ್ಥಿ ಸಾವು
ಝಿಕಾ ವೈರಸ್ ತಡೆಗಟ್ಟಲು ಜನಸಾಮಾನ್ಯರ ಜವಾಬ್ದಾರಿ ಏನು?
- -ನೀರು ಶೇಖರಣಾ ಪರಿಕರಗಳನ್ನು (ಟ್ಯಾಂಕ್, ಟಬ್ ಇತ್ಯಾದಿ) ಮುಚ್ಚಿಡಬೇಕು. ಅಲ್ಲದೆ, ವಾರಕ್ಕೊಮ್ಮೆ ಅವುಗಳನ್ನು ಸ್ವಚ್ಛಗೊಳಿಸಬೇಕು.
- -ಮನೆಯ ಸುತ್ತ-ಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಬೇಕು. ಜತೆಗೆ ಘನತ್ಯಾಜ್ಯ ವಸ್ತುಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು.
- -ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸಿ, ಮಕ್ಕಳು, ವಯೋವೃದ್ಧರು ವಿಶ್ರಾಂತಿ ಪಡೆಯುವಾಗ ಸೊಳ್ಳೆ ಪರದೆ, ಸೊಳ್ಳೆ ನಿರೋಧಕಗಳನ್ನು ಬಳಸಬೇಕು.
- -ಸೊಳ್ಳೆಗಳು ಸಾಮಾನ್ಯವಾಗಿ ಸಂತಾನೋತ್ಪತ್ತಿ ಮಾಡುವುದು ನಿಂತ ನೀರಲ್ಲಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಹೀಗಾಗಿ ಮನೆಯ ಸುತ್ತಲೂ ನೀರು ನಿಲ್ಲದಂತೆ ಮುಂಜಾಗ್ರತೆ ವಹಿಸಬೇಕು.
- -ಪ್ರತಿಯೊಬ್ಬ ವ್ಯಕ್ತಿಯೂ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ, ವೈರಸ್ ಹರಡುವ ಸಾಧ್ಯತೆ ಕಡಿಮೆಯಾಗುತ್ತದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ