ಕನಕಗಿರಿ: ಚುನಾವಣಾ (Karnataka election 2023) ಪ್ರಚಾರಕ್ಕೆ ಆಗಮಿಸಿದ್ದ ಕನಕಗಿರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಿವರಾಜ ತಂಗಡಗಿಯನ್ನು ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ಚುನಾವಣೆ ನಿಮಿತ್ತ ಪ್ರಚಾರಕ್ಕಾಗಿ ಕಾಂಗ್ರೆಸ್ ಪಕ್ಷದ ಶಿವರಾಜ್ ತಂಗಡಗಿ ತೆರಳಿದ್ದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರೊಬ್ಬರು ಈ ಹಿಂದೆ ಗ್ರಾಮದಲ್ಲಿ ಕೋಮು ಗಲಭೆಯಾದ ಸಂದರ್ಭದಲ್ಲಿ ಗಲಭೆಯ ಕಾರಣ ನಿಮ್ಮ ಊರಿನ ಸಹವಾಸ ಸಾಕು. ನನಗೆ ನಿಮ್ಮ ಮತಗಳು ಬೇಡ ಎಂಬ ಹೇಳಿಕೆ ನೀಡಿದ್ದಿರಿ. ಊರಿನ ಸಹವಾಸ ಬೇಡ ಎಂದವರು ಈಗ ಮತ್ಯಾಕೆ ಬಂದಿದ್ದೀರಿ ಎಂದು ತರಾಟೆಗೆ ತಗೆದುಕೊಂಡರು.
ಇದನ್ನೂ ಓದಿ: Modi in Karnataka : ನೀವು ಮತ ಹಾಕುವುದು ಸರ್ಕಾರ ರಚನೆಗಲ್ಲ, ರಾಜ್ಯವನ್ನು ದೇಶದಲ್ಲೇ ನಂ. 1 ಮಾಡಲು; ಮೋದಿ ಹೊಸ ವ್ಯಾಖ್ಯಾನ
ತಂಗಡಗಿ ಅವರನ್ನು ಪ್ರಶ್ನಿಸಿದ್ದರಿಂದ ಕೆಂಡಾಮಂಡಲವಾದ ಕಾಂಗ್ರೆಸ್ ಮುಖಂಡರು ಗ್ರಾಮಸ್ಥರೊಂದಿಗೆ ಮಾತಿನ ಚಕಮಕಿ ನಡೆಸಿದರು. ಈ ವೇಳೆ ಸಾಕಷ್ಟು ಮಾತುಗಳು ಎರಡೂ ಕಡೆ ಕೇಳಿಬಂದವು. ಅಷ್ಟರಲ್ಲಿ ಮಧ್ಯಪ್ರವೇಶ ಮಾಡಿದ ಶಿವರಾಜ ತಂಗಡಗಿ ಅವರು ತಮ್ಮ ಬೆಂಬಲಿಗರನ್ನು ಸಮಾಧಾನಪಡಿಸಿದರು.
ಬಳಿಕ ಮಾತನಾಡಿದ ಶಿವರಾಜ ತಂಗಡಗಿ, ನಾನು ಅಂದು ಆ ರೀತಿ ಹೇಳಬೇಕಾದರೆ ಪರಿಸ್ಥಿತಿಯ ಒತ್ತಡವಿತ್ತು. ಗಲಾಟೆಯ ಸಂದರ್ಭದಲ್ಲಿ ಮುಖಂಡರು ಮಧ್ಯಸ್ಥಿಕೆ ವಹಿಸಿದರೆ ಗಲಾಟೆ ತೀವ್ರಗೊಳ್ಳುವ ಆತಂಕವಿತ್ತು. ಆದ್ದರಿಂದ ಆ ಸೂಕ್ಷ್ಮವನ್ನು ಅರಿತುಕೊಂಡು ಆ ರೀತಿಯ ಹೇಳಿಕೆ ನೀಡಬೇಕಾಯಿತು. ಅದು ಸಾಂದರ್ಭಿಕವಷ್ಟೇ. ನಿಮ್ಮ ಮೇಲೆ ಯಾವತ್ತೂ ಅಭಿಮಾನ ಉಳ್ಳವನಾಗಿದ್ದೇನೆ ಎಂದು ಸಮಾಧಾನಪಡಿಸಿದರು.