Site icon Vistara News

Actress Leelavathi: ಲೀಲಾವತಿ ಕನಸಿನ ಪಶು ಆಸ್ಪತ್ರೆ ಉದ್ಘಾಟಿಸಿದ ಡಿಕೆಶಿ, ಆದರೆ ನಟಿ ಪ್ರಜ್ಞಾಶೂನ್ಯ

DK Shivakumar Inaugurate of veterinary hospital

ಬೆಂಗಳೂರು: ಹಿರಿಯ ನಟಿ ಲೀಲಾವತಿ (Actress Leelavathi) ಅವರು ಅನಾರೋಗ್ಯದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಅವರ ಸೋಲದೇವನಹಳ್ಳಿಯ ನಿವಾಸಕ್ಕೆ ನಟ ಶಿವರಾಜಕುಮಾರ್‌ ಮತ್ತು ಗೀತಾ ದಂಪತಿ (Shivarajkumar and Geetha) ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar) ಮಂಗಳವಾರ (ನ. 28) ಭೇಟಿ ನೀಡಿ ಆರೋಗ್ಯವನ್ನು ವಿಚಾರಿಸಿದರು. ಇದೇ ವೇಳೆ ಲೀಲಾವತಿ ಅವರ ಸ್ವಗ್ರಾಮದಲ್ಲಿ ನಿರ್ಮಿಸಿರುವ ಪಶು ಆಸ್ಪತ್ರೆಯನ್ನು ಡಿ.ಕೆ. ಶಿವಕುಮಾರ್‌ ಉದ್ಘಾಟಿಸಿದರು. ಇದು ಲೀಲಾವತಿ ಅವರ ಕನಸಿನ ಆಸ್ಪತ್ರೆಯಾಗಿತ್ತು. ಆದರೆ ತೀವ್ರ ಅನಾರೋಗ್ಯದಿಂದ ಬಹುತೇಕ ಪ್ರಜ್ಞಾಶೂನ್ಯರಾಗಿರುವ ಲೀಲಾವತಿ ಅವರಿಗೆ ಈ ಆಸ್ಪತ್ರೆ ಉದ್ಘಾಟನೆಯ ಅರಿವು ಆಗದೇ ಹೋಗಿರುವುದು ಭಾವುಕ ಸಂಗತಿ.

ಶಿವರಾಜಕುಮಾರ್‌ ಮತ್ತು ಗೀತಾ ದಂಪತಿ ಅವರು ಬಂದು ಆರೋಗ್ಯವನ್ನು ವಿಚಾರಿಸಿದ್ದಾರೆ. ಈ ವೇಳೆ ಲೀಲಾವತಿ ಅವರು ಶಿವರಾಜಕುಮಾರ್‌ ಅವರ ಧ್ವನಿಯನ್ನು ಕಂಡು ಹಿಡಿದು ಮಾತನಾಡಿಸಿದ್ದಾರೆ. ಅಲ್ಲದೆ, ಇವರ ಭೇಟಿಯಿಂದ ಖುಷಿ ಪಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ವಿನೋದ್ ರಾಜ್ ಅವರಿಗೆ ಶಿವರಾಜಕುಮಾರ್ ಧೈರ್ಯ ತುಂಬಿದ್ದಾರೆ.

ಬಳಿಕ ಮಾತನಾಡಿದ ಶಿವರಾಜಕುಮಾರ್‌, ಲೀಲಮ್ಮ ನನ್ನ ವಾಯ್ಸ್ ಅನ್ನು ಕಂಡು ಹಿಡಿದರು. ಈ ವಯಸ್ಸಲ್ಲಿ ತಾಳೋ ಶಕ್ತಿ ಇದೆಯಲ್ಲವಾ? ಅದು ನಿಜಕ್ಕೂ ಗ್ರೇಟ್.‌ ಯುಗಪುರುಷರು ಅಂತಾರೆ. ಲೀಲಾವತಿ ಅವರು ಒಳ್ಳೇ ಮನಸ್ಸು ಇರುವವರು. ಅಂದಿನಿಂದ ನನಗೆ ಅವರ ಮೇಲೆ ಅದೇ ಪ್ರೀತಿ ಇದೆ. ಚಿಕ್ಕ ವಯಸ್ಸಿನಿಂದಲೂ ಅದೇ ಆತ್ಮೀಯತೆ ಇದೆ. ನನಗೂ ವಿನೋದ್ ನೋಡಿದಾಗೆಲ್ಲ ತಾಯಿ ನೋಡಿದ ಹಾಗೆ ಹಾಗುತ್ತದೆ. ದೇವರ ಆಶೀರ್ವಾದ ಇದೆ. ಅವರು ಚೆನ್ನಾಗಿರುತ್ತಾರೆ ಎಂದು ಹೇಳಿದರು.

ಆರೋಗ್ಯ ವಿಚಾರಿಸಿದ ಡಿ.ಕೆ. ಶಿವಕುಮಾರ್

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಗಮಿಸಿ ಲೀಲಾವತಿ ಅವರ ಆರೋಗ್ಯವನ್ನು ವಿಚಾರಿಸಿದರು. ಬಳಿಕ, ಲೀಲಾವತಿ ಅವರ ಸ್ವಗ್ರಾಮದಲ್ಲಿ ನಿರ್ಮಿಸಿರುವ ಪಶು ಆಸ್ಪತ್ರೆಯನ್ನು ಡಿ.ಕೆ. ಶಿವಕುಮಾರ್‌ ಉದ್ಘಾಟಿಸಿದರು. ಈ ವೇಳೆ ವಿಧಾನ ಪರಿಷತ್ ಸದಸ್ಯ ರವಿ, ನೆಲಮಂಗಲ ಶಾಸಕ ಶ್ರೀನಿವಾಸ್ ಜತೆಗಿದ್ದರು.

ಲೀಲಾವತಿ ಅವರ ಕನಸಿನ ಕೂಸಾಗಿದ್ದ ಪಶು ಆಸ್ಪತ್ರೆಗೆ ಹಸುವಿನ ಪೂಜೆ ಮಾಡುವ ಮೂಲಕ ಡಿ.ಕೆ.‌ ಶಿವಕುಮಾರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಡಿ.ಕೆ. ಶಿವಕುಮಾರ್‌, ಒಂದು ವಾರದ ಹಿಂದೆ ನಟಿ ಲೀಲಾವತಿ, ವಿನೋದ್ ರಾಜ್ ನಮ್ಮ ಮನೆಗೆ ಬಂದು ಪಶು ಆಸ್ಪತ್ರೆ ಉದ್ಘಾಟನೆಗೆ ಕರೆದಿದ್ದರು. ಈ ಪಶು ಆಸ್ಪತ್ರೆ ಮೂಲಕ ದೊಡ್ಡ ಸಂದೇಶ ನೀಡಿದ್ದಾರೆ. ಅವರು ಅಂತಹ ಶ್ರೀಮಂತರಲ್ಲ. ಅಂಥದ್ದರಲ್ಲಿ ಪ್ರಾಣಿಗಳಿಗೆ ಸಹಾಯ ಮಾಡಲು ಹೊರಟಿದ್ದಾರೆ. ಇದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.

ಬೆಂಗಳೂರಿಗೆ ಹತ್ತಿರದ ಸ್ಥಳದಲ್ಲಿ ಪಶು ವೈದ್ಯ ಆಸ್ಪತ್ರೆಯನ್ನು ಕಟ್ಟಿದ್ದಾರೆ. ನಮ್ಮ ಸ್ಥಳೀಯ ಶಾಸಕರೂ ಸಹಕಾರ ನೀಡಿದ್ದಾರೆ. ದೊಡ್ಡವರು ದೊಡ್ಡ ಕೆಲಸ ಮಾಡ್ತಾರೆ. ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಉಸಿರಿದ್ದರೂ, ಇಲ್ಲದಿದ್ದರೂ ಹೆಸರು ಶಾಶ್ವತವಾಗಿರಲಿದೆ. ಪವಿತ್ರವಾದ ಕೆಲಸ ಮಾಡಲೇಬೇಕು ಎಂದು ಬಂದಿದ್ದೇನೆ. ಶುಭವಾಗಲಿ ಎಂದು ಹಾರೈಸುವೆ. ಕಲಾವಿದರಿಗೆ ಪಿಂಚಣಿ ಕೊಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರ ಜತೆಗೆ ಚರ್ಚೆ ಮಾಡುತ್ತೇನೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಇದನ್ನೂ ಓದಿ: DK Shivakumar : ಕೋರ್ಟ್‌ಗೆ ಹೋಗಲು ಎಲ್ಲರಿಗೂ ಹಕ್ಕಿದೆ: ಯತ್ನಾಳ್‌ಗೆ ಸಿದ್ದರಾಮಯ್ಯ ತಿರುಗೇಟು

ವಿನೋದ್ ರಾಜ್ ನಮ್ಮ ಸಹೋದರ ಇದ್ದಹಾಗೆ. ಅವರ ಪರವಾಗಿ ಸರ್ಕಾರ ಇದೆ. ಬರೀ ಡಿ.ಕೆ. ಶಿವಕುಮಾರ್ ಇಲ್ಲಿಗೆ ಬಂದಿಲ್ಲ. ಇಡೀ ಸರ್ಕಾರ ಬಂದಿದೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು. ಈಚೆಗೆ ನಟ ದರ್ಶನ್‌, ಅರ್ಜುನ್ ಸರ್ಜಾ ಅವರು ಭೇಟಿ ನೀಡಿ ನಟಿ ಲೀಲಾವತಿ ಅವರ ಆರೋಗ್ಯವನ್ನು ವಿಚಾರಿಸಿದ್ದರು.

Exit mobile version