ಉಡುಪಿ: ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿ ಪಡೆದ ಪಕ್ಷದಲ್ಲಿ ನಾವಿದ್ದೇವೆ ಅನ್ನೋದೇ ಹೆಮ್ಮೆಯ ವಿಚಾರ. ನಿಮ್ಮ ಜನಪ್ರತಿನಿಧಿಯಾಗಿ ನಾನು ಪ್ರಾಮಾಣಿಕವಾಗಿ ಹಿರಿಯರ ಮೇಲ್ಪಂಕ್ತಿಯಲ್ಲಿ ಕೆಲಸ ಮಾಡಿದ್ದೇನೆ. ಭ್ರಷ್ಟಾಚಾರ ರಹಿತ ಆಡಳಿತ ಮಾಡಿದ್ದು, ಗುತ್ತಿಗೆದಾರರಿಗೆ ಸೊಪ್ಪು ಹಾಕಿಲ್ಲ, ಯಾರ ಹಣದಲ್ಲೂ ಚಹಾ ಕುಡಿದಿಲ್ಲ. ಅತ್ಯಂತ ಪ್ರಾಮಾಣಿಕವಾಗಿ ರಾಜಕಾರಣ ಮಾಡಿದ್ದೇನೆ ಎಂದು ಕೇಂದ್ರ ಸಚಿವ ಶೋಭಾ ಕರಂದ್ಲಾಜೆ (Shobha Karandlaje) ಭಾವುಕರಾಗಿದ್ದಾರೆ.
ನಗರದಲ್ಲಿ ಲೋಕಸಭಾ ಚುನಾವಣಾ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಇನ್ನೊಬ್ಬರಿಗೆ ಕೈ ಒಡ್ಡದೆ ಯಾವುದೇ ಗುತ್ತಿಗೆದಾರನ ಜತೆ ವ್ಯವಹಾರ ಮಾಡದೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ನೀವು ಕೊಟ್ಟ ಓಟಿಗೆ ಮರ್ಯಾದೆ ಬರುವಂತೆ ನಡೆದುಕೊಂಡಿದ್ದೇನೆ. ಯಾರ ಬಳಿಯಲ್ಲೂ ಒಂದು ಚಾ ಕುಡಿದಿಲ್ಲ, ಅತ್ಯಂತ ಪ್ರಾಮಾಣಿಕವಾಗಿ ರಾಜಕಾರಣ ಮಾಡಿದ್ದೇನೆ. ನೀವೆಲ್ಲ ದುಡಿದ ಕಾರಣಕ್ಕೆ ನಾನು ಜನಪ್ರತಿನಿಧಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Karnataka Budget 2024: ಅರ್ಥಶಾಸ್ತ್ರ, ಅಭಿವೃದ್ಧಿ, ದೂರದೃಷ್ಟಿ ಇಲ್ಲದ ಅಡ್ಡ ಕಸುಬಿ ಬಜೆಟ್ ಎಂದ ಆರ್.ಅಶೋಕ್
ನಾನು ಈ ಜಿಲ್ಲೆಯವಳಲ್ಲ. ಬೆಂಗಳೂರಿನ ಜನ ನನ್ನನ್ನು ಯಶವಂತಪುರದಲ್ಲಿ ಗೆಲ್ಲಿಸಿದರು. ನಾನು ಉಡುಪಿ ಮೂಲದವಳಲ್ಲ, ಆದರೂ ಎರಡು ಬಾರಿ ನನ್ನನ್ನು ಗೆಲ್ಲಿಸಿದ್ದೀರಿ. ನೀವೆಲ್ಲರೂ ಕೆಲಸ ಮಾಡಿ ಗೆಲ್ಲಿಸಿದ ಕಾರಣಕ್ಕೆ ಇಂದು ನಾನು ಕೇಂದ್ರ ಸಚಿವೆಯಾಗಿದ್ದೇನೆ. ಮೋದಿಯವರು ನನ್ನನ್ನು ಗುರುತಿಸಿ ಕೆಲಸ ಕೊಟ್ಟಿದ್ದಾರೆ. ಈ ಬಾರಿಯೂ ಕಾರ್ಯಕರ್ತರೆಲ್ಲರೂ ಕುಣಿದು ಕುಪ್ಪಳಿಸುವಂತಹ ಫಲಿತಾಂಶ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾವು ಪಾರ್ಟಿ ಏನು ಹೇಳುತ್ತೋ ಅದನ್ನು ಕೇಳುವವರು. ಟಿಕೆಟ್‌ಗಾಗಿ ಅವರು ಓಡಾಡುತ್ತಿದ್ದಾರೆ, ಇವರು ಓಡಾಡುತ್ತಿದ್ದಾರೆ ಎಂದು ಮೀಡಿಯಾದವರು ಕೇಳಬಹುದು. ಯಾರೇ ಓಡಾಡಲಿ ನನಗೆ ಏನೂ ಸಂಬಂಧ ಇಲ್ಲ. ನಾನು ಪಾರ್ಟಿಯ ಕಾರ್ಯಕರ್ತೆ ಅಷ್ಟೇ, ಪಕ್ಷ ಏನು ಹೇಳುತ್ತೆ ಅದನ್ನು ಕೇಳುವವಳು, ಇಲ್ಲಿ ನಮ್ಮ ಸ್ವಂತ ಏನು ಇಲ್ಲ. ಮೋದಿ ಏನು ಹೇಳುತ್ತಾರೋ ಅದನ್ನು ಕೇಳುವಂತ ಸಹಪಾಠಿಗಳು. ಅವರು ಹೇಳಿದ್ದನ್ನು ಉತ್ಸಾಹದಿಂದ ಮಾಡಿದ್ದೇವೆ ಎಂದು ಹೇಳಿದರು.
ರಾಮಮಂದಿರಕ್ಕೆ ತೆಗೆದುಕೊಂಡು ಹೋದ ಇಟ್ಟಿಗೆ ಎಲ್ಲಿದೆ ಎಂದು ಕೇಳುತ್ತಿದ್ದರು ಈಗ ಇಟ್ಟಿಗೆ ಎಲ್ಲಿದೆ ಎಂಬುದನ್ನು ಅಯೋಧ್ಯೆಯಲ್ಲಿ ತೋರಿಸಿಕೊಟ್ಟಿದ್ದೇವೆ. ಮೋದಿ ಯಾವುದನ್ನೂ ಹೇಳುತ್ತಾರೆ, ಅದರಂತೆ ನಡೆದುಕೊಳ್ಳುತ್ತಾರೆ. ನಮ್ಮ ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ನಾವು ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಸಚಿವೆಗೆ ಮೀನುಗಾರ ಮುಖಂಡರಿಂದ ತೀವ್ರ ತರಾಟೆ
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಚಾರದಲ್ಲಿ ಸಚಿವೆ ಶೋಭಾ ಕರಂದ್ಲಾಜೆಗೆ ಮೀನುಗಾರ ಮುಖಂಡರರು ತೀವ್ರ ತರಾಟೆ ತೆಗೆದುಕೊಂಡ ಘಟನೆ ಪ್ರವಾಸಿ ಮಂದಿರದಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ಇಲಾಖಾಧಿಕಾರಿಗಳ ಸಭೆಯಲ್ಲಿ ನಡೆದಿದೆ.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಮೀನುಗಾರ ಮುಖಂಡ ಕಿಶೋರ್ ಡಿ.ಸುವರ್ಣರಿಂದ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಕೋಟ್ಯಂತರ ರೂ. ಆದಾಯ ಬರುವ ಮಲ್ಪೆ ಬಂದರಿನ ಬಗ್ಗೆ ನಿಮಗೆ ನಿರ್ಲಕ್ಷ್ಯ ಏಕೆ? ಮಲ್ಪೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೈಜ್ಞಾನಿಕ ರೀತಿಯಲ್ಲಿಲ್ಲ, ರಸ್ತೆಯ ಸರ್ವೆ, ಅಗಲ, ಉದ್ದ ಮತ್ತು ಪರಿಹಾರದ ಬಗ್ಗೆ ಜನರಿಗೆ ಸಾಕಷ್ಟು ಗೊಂದಲಗಳಿವೆ. ಇದರ ವಿರುದ್ಧ ಹಲವು ಮಂದಿ ಕೋರ್ಟ್‌ಗೆ ಹೋಗಿದ್ದಾರೆ. ಇಲ್ಲಿ ಪರಿಹಾರ ಕಾರ್ಯ ಕೂಡ ವೈಜ್ಞಾನಿಕವಾಗಿ ನಡೆದಿಲ್ಲ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ | Karnataka Budget 2024: ಇದೊಂದು ಅಭಿವೃದ್ಧಿ ಪರ ಬಜೆಟ್: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಹಣಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಆದರೆ ಕೋಟ್ಯಂತರ ಆದಾಯ ಇರುವ ಈ ರಸ್ತೆ ಪರಿಹಾರಕ್ಕೆ ಕೇವಲ 50 ಕೋಟಿ ರೂ. ಕೊಡಲು ಹಿಂದೇಟು ಏಕೆ? ನಾವು ನಿಮ್ಮ ಮೇಲೆ ವಿಶ್ವಾಸ ಇಟ್ಟು ಮತ ಹಾಕಿ ಗೆಲ್ಲಿಸಿದ್ದೇವೆ. ಆದರೆ ನೀವು ನಮ್ಮ ಮೇಲೆ ವಿಶ್ವಾಸ ಇಟ್ಟಿಲ್ಲ. ನಿಮಗೆ 10 ವರ್ಷಗಳಿಂದ ಮತ ಹಾಕಿದ್ದಕ್ಕೆ ನೀವು ನಮಗೆ ಏನು ಮಾಡಿದ್ದೀರಿ? ರಸ್ತೆಯಲ್ಲಿ ಭೂಮಿ ಕಳೆದುಕೊಳ್ಳುವವರನ್ನು ಸೇರಿಸಿ ಈವರೆಗೆ ಒಂದೇ ಒಂದು ಸಭೆ ಕರೆದಿಲ್ಲ, ನೀವು ನಮ್ಮ ಜನಪ್ರತಿನಿಧಿ ಅಲ್ಲವೇ? ನೀವು ಜನರನ್ನು ಯಾಕೆ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.