ಶಿವಮೊಗ್ಗ: ಸ್ವಾತಂತ್ರದ ಅಮೃತ ಮಹೋತ್ಸವದ(Amrit Mahotsav) ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ “ಹರ್ ಘರ್ ತಿರಂಗಾ” ಅಭಿಯಾನ ಜನರಲ್ಲಿ ದೇಶಪ್ರೇಮವನ್ನು ಬಡಿದೆಬ್ಬಿಸುತ್ತಿದೆ. ಭಾರತೀಯರೆಲ್ಲರ ಮನೆ ಮನದಲ್ಲೂ ತಿರಂಗಾ ಮೂಲಕ ದೇಶಪ್ರೇಮ ಕಾಣುತ್ತಿದೆ ಎಂದು ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟರು.
ಜಿಲ್ಲೆಯ ಈಸೂರಿನಲ್ಲಿ ಗ್ರಾಮ ಪಂಚಾಯಿತಿ ಮತ್ತು ಕುವೆಂಪು ವಿಶ್ವವಿದ್ಯಾಲಯ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ʼಕುವೆಂಪು ವಿವಿ ನಡಿಗೆ ಈಸೂರು ಕಡೆಗೆʼ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ದೇಶದ ಪ್ರತಿ ಪ್ರಜೆಯು ಸಂಭ್ರಮದಿಂದ ಆಚರಿಸಬೇಕೆಂದು ಕೇಂದ್ರ ಸರ್ಕಾರವು ಧ್ವಜ ಸಂಹಿತೆಗೆ ಅಲ್ಪ ಬದಲಾವಣೆ ತಂದಿದೆ. ರಾತ್ರಿ ಸಮಯದಲ್ಲಿ ಧ್ವಜ ಹಾರಿಸಲು, ಪಾಲಿಸ್ಟರ್ ಧ್ವಜ ಬಳಸಲು ಅನುಮತಿ ನೀಡಲಾಗಿದೆ. ಪ್ರತಿ ಮನೆ, ಅಂಗಡಿ, ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಅಗಾಧ ಪ್ರಮಾಣದ ತಿರಂಗಾಗಳನ್ನು ಹಾರಿಸುವ ಮೂಲಕ ನಮ್ಮ ಮನೆ ಮಂಗಳಲ್ಲಿ ತಿರಂಗಾ ಮತ್ತು ದೇಶ ಪ್ರೇಮ ಇಳಿಯಬೇಕು ಎಂದರು.
ಇದನ್ನೂ ಓದಿ | Amrit Mahotsav | ಕೆಂಪು ಕೋಟೆ ಮೇಲೆ ಮೊದಲ ಬಾರಿ ಬುಲೆಟ್‌ಪ್ರೂಫ್ ಶೀಲ್ಡ್‌ನಲ್ಲಿ ಮೋದಿ ಭಾಷಣ?
ಭಾರತದಲ್ಲಿನ ಆಯುರ್ವೇದ, ಯೋಗ, ಖಗೋಳಜ್ಞಾನ, ಗಣಿತಶಾಸ್ತ್ರಗಳನ್ನು ಕಲಿಯಲು ಈ ಹಿಂದೆ ವಿದೇಶಗಳಿಂದ ಆಸಕ್ತರು ಬರುತ್ತಿದ್ದರು. ಭಾರತವು ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸುವ ವೇಳೆಗೆ ವಿದ್ಯಾರ್ಥಿಗಳಾದ ನೀವೆಲ್ಲರೂ ಶ್ರೇಷ್ಠ, ವಿಶ್ವಗುರು ಭಾರತ ನಿರ್ಮಿಸಲು ಶ್ರಮಿಸಬೇಕು, ಅಂದು ಹೆಮ್ಮೆಯಿಂದ ಸ್ವಾತಂತ್ರ್ಯ ಹೋರಾಟವನ್ನು ನೆನೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಹರ್ ಘರ್ ತಿರಂಗಾ, ಅಮೃತ ಮಹೋತ್ಸವದಂತಹ ಕೇಂದ್ರದ ಕಾರ್ಯಕ್ರಮಗಳು ಯುವಜನರಲ್ಲಿ ಸ್ವಾತಂತ್ರ್ಯ ಹೋರಾಟದ ಬಗ್ಗೆ ಅರಿವು ಹಾಗೂ ದೇಶ ಪ್ರೇಮ ಪ್ರೇರೇಪಿಸುವಲ್ಲಿ ಅತ್ಯಂತ ಅವಶ್ಯಕ ಕಾರ್ಯಕ್ರಮಗಳಾಗಿವೆ. ವಿದ್ಯಾರ್ಥಿಗಳು ಇವುಗಳ ಸದುಪಯೋಗ ಪಡೆಯಬೇಕೆಂದು ಕರೆಕೊಟ್ಟರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ 100ಕ್ಕೂ ಹೆಚ್ಚು ಐತಿಹಾಸಿಕ ಸ್ವಾತಂತ್ರ ಹೋರಾಟದ ಗ್ರಾಮಗಳು, ಸ್ಥಳಗಳನ್ನು ಕೇಂದ್ರ ಸರ್ಕಾರ ಗುರುತಿಸಿದೆ. ಆ ಸ್ಥಳಗಳಲ್ಲಿ ಸ್ಮಾರಕಗಳನ್ನು ನಿರ್ಮಿಸಲು ಪ್ರಧಾನಿ ಸೂಚಿಸಿದ್ದಾರೆ. ಅದರ ಭಾಗವಾಗಿ ಈಸೂರು ಗ್ರಾಮದಲ್ಲಿ 4.95 ಕೋಟಿ ರೂ. ಅನುದಾನದಲ್ಲಿ ಸ್ಮಾರಕ ನಿರ್ಮಾಣ, ರಂಗಮಂದಿರ, ಗ್ರಂಥಾಲಯ ನಿರ್ಮಿಸಲಾಗುತ್ತಿದೆ. ಈ ಮೂಲಕ ಸ್ಮಾರಕವು ಐತಿಹಾಸಿಕ ಸ್ಮಾರಕಗಳ ಪಟ್ಟಿಯಲ್ಲಿ ಸೇರುವುದಲ್ಲದೆ ಸ್ವಾತಂತ್ರ್ಯ ಪಡೆಯುವ ಸಲುವಾಗಿ ಪ್ರಾಣ ಬಲಿದಾನ ಒಳಗಾದ ಈಸೂರಿನ ವೀರರ ಶೌರ್ಯವನ್ನು ಜಗತ್ತಿಗೆ ಸಾರುವಂತಹ ಸಂದೇಶದೊಂದಿಗೆ ತನ್ನ ಮೌಲ್ಯ ಸಾಧಿಸುವಲ್ಲಿ ಈ ಸ್ಮಾರಕವು ಯಶಸ್ವಿಯಾಗುತ್ತದೆ ಎಂದು ಹೇಳಿದರು.
ವಿವಿಯ ಕುಲಸಚಿವೆ ಅನುರಾಧ.ಜಿ ಸ್ವಾಗತಿಸಿದರು. ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ವಿವಿಯಿಂದ 400ಕ್ಕೂ ಅಧಿಕ ವಿದ್ಯಾರ್ಥಿಗಳು, ಸಿಬ್ಬಂದಿ ಕಾರ್ಯಕ್ರಮಕ್ಕೆ ಆಗಮಿಸಿದ್ದು, ಸ್ಮಾರಕದ ಬಳಿಯಿಂದ ಗ್ರಾಮದಲ್ಲಿ ಜಾಥಾ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡು ಗಲ್ಲಿಗೇರಿದ ವೀರರಾದ ಗುರಪ್ಪ ಬಿನ್ ಈಶ್ವರಪ್ಪ ಕಮ್ಮಾರ್, ಜಿನಹಳ್ಳಿ ಮಲ್ಲಪ್ಪ, ಸೂರ್ಯನಾರಾಯಣ ಆಚಾರ್ ಬಿನ್ ಪಂಪಪ್ಪ ಆಚಾರ್, ಬಡಕಳ್ಳಿ ಹಾಲಪ್ಪ ಬಿನ್ ಬಸಪ್ಪ, ಗೌಡ್ರು ಶಂಕರಪ್ಪ ಬಿನ್ ಹೋಳಿಯಪ್ಪರ ಕುಟುಂಬಸ್ಥರನ್ನು ಸನ್ಮಾನಿಸಲಾಯಿತು. ನಿವೃತ್ತ ಸೈನಿಕರು, ಈಸೂರು ಗ್ರಾಮಸ್ಥರು, ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಇದನ್ನೂ ಓದಿ | Amrit Mahotsav | ಬ್ರಿಟಿಷರ ದಾಸ್ಯ ಬಯಸದೇ ಹುತಾತ್ಮನಾದ ಸುರಪುರದ ವೀರ ಚಿಕ್ಕವೆಂಕಟಪ್ಪ ನಾಯಕ