ಬೆಂಗಳೂರು/ಕೆಆರ್‌ಪುರ: ನೀವೇನಾದರೂ ತೆಲುಗಿನ ಇಂದ್ರ ಸಿನಿಮಾವನ್ನು ನೋಡಿದ್ದರೆ ಅದೇ ರೀತಿ ಹೋಲುವ ಕುಟುಂಬ ದ್ವೇಷವೊಂದಕ್ಕೆ ಬೆಂಗಳೂರು ಸಾಕ್ಷಿಯಾಗಿದೆ. ಕಳೆದ ಡಿಸೆಂಬರ್ 8 ರಂದು ಬೆಂಗಳೂರು ಹೊರವಲಯದಲ್ಲಿ ನಡೆದ ಶೂಟ್‌ಔಟ್ ಪ್ರಕರಣಕ್ಕೆ (Shootout In Bangalore) ಕುಟುಂಬ ದ್ವೇಷವೇ ಕಾರಣ ಎಂದು ತಿಳಿದು ಬಂದಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನಾಲ್ವರನ್ನು ಬಂಧಿಸಿದ ಖಾಕಿ ಪಡೆ
ಬೆಂಗಳೂರಿನ ಕೆ.ಆರ್ ಪುರದಲ್ಲಿದ್ದ ರೌಡಿಶೀಟರ್ ಶಿವಶಂಕರ್ ರೆಡ್ಡಿಯನ್ನು ಕೊಲೆ ಮಾಡುವ ಉದ್ದೇಶದಿಂದಲೇ ಹಂತಕರು ಬಂದಿದ್ದರು. ಶಿವಶಂಕರ್ ರೆಡ್ಡಿ ಕೆ.ಆರ್.ಪುರಂನ ಸೀಗೇಹಳ್ಳಿ ಬಳಿ ಸ್ವಂತ ಕಟ್ಟಡ ನಿರ್ಮಾಣ ಮಾಡಿಸುತ್ತಿದ್ದು, ಕಟ್ಟಡದ ನಿರ್ಮಾಣದ ಗುತ್ತಿಗೆಯನ್ನು ಅಶೋಕ್ ರೆಡ್ಡಿ ಎಂಬಾತ ಪಡೆದಿದ್ದ. ಕಾಮಗಾರಿ ಸಂಬಂಧ ಇಬ್ಬರು ಮಾತನಾಡುತ್ತಾ ನಿಂತಿದ್ದಾಗ, ಬೈಕ್‌ನಲ್ಲಿ ಬಂದ ನಾಲ್ವರು ಹಂತಕರು ಶೂಟ್‌ಔಟ್ ಮಾಡಿ ಪರಾರಿ ಆಗಿದ್ದರು. ಈ ವೇಳೆ ಶಿವಶಂಕರ್ ರೆಡ್ಡಿಯ ಕಾರು ಚಾಲಕ ಪ್ರಾಣಾಪ್ರಾಯದಿಂದ ಪಾರಾಗಿದ್ದರು. ಹೊಸಕೋಟೆ ಮೂಲಕ ಆಂಧ್ರಪ್ರದೇಶಕ್ಕೆ ಹೈವೆ ರಸ್ತೆಯಲ್ಲಿ ಆರೋಪಿಗಳು ಪರಾರಿಯಾಗಿದ್ದವರನ್ನು, ಸಿಸಿಟಿವಿ ಪರಿಶೀಲನೆ ನಡೆಸಿ ಪೊಲೀಸರು ಪ್ರವೀಣ್ , ಮನೋಜ್, ಜಯಪ್ರಕಾಶ್ ಎಂಬುವವರನ್ನು ಬಂಧಿಸಿದ್ದಾರೆ. ಮತ್ತೊಬ್ಬನಿಗೆ ಹುಡುಕಾಟ ನಡೆಸಿದ್ದಾರೆ.
ಶಿವರೆಡ್ಡಿ ಹಿಸ್ಟರಿ ಕೇಳಿ ಪೊಲೀಸರೇ ಶಾಕ್
ಆಂಧ್ರಪ್ರದೇಶದ ಮದನಪಲ್ಲಿಯ ರೌಡಿಶೀಟರ್ ಆಗಿರುವ ಶಿವಶಂಕರ್ ರೆಡ್ಡಿ ಮೇಲೆ ಎರಡು ಕೊಲೆ ಪ್ರಕರಣ ದಾಖಲಾಗಿತ್ತು. ಜೈಲಿನಿಂದ ಹೊರಬಂದ ನಂತರ ಶಿವಶಂಕರ್ ರೆಡ್ಡಿ ತನ್ನ ಕುಟುಂಬದ ವಿರೋಧಿ ಗ್ಯಾಂಗ್ ಹತ್ಯೆ ಮಾಡುವ ಭಯದಿಂದಲೇ ಆಂಧ್ರಪ್ರದೇಶದ ಮದನಪಲ್ಲಿಗೆ ತೆರಳದೆ ಬೆಂಗಳೂರಿನ ಕೆಆರ್‌ಪುರಗೆ ಬಂದು ನೆಲೆಸಿದ್ದ.
ಹಂತಕರು ಹಾಗೂ ರೌಡಿಶೀಟರ್ ಶಿವಶಂಕರ್ ರೆಡ್ಡಿಯ ಕುಟುಂಬ ದ್ವೇಷ ತೆಲುಗಿನ ಇಂದ್ರ ಸಿನಿಮಾವನ್ನು ಮೀರಿಸುವಂತಿದೆ. ಈ ಪ್ರಕರಣದ ಇತಿಹಾಸ ಕೆದಕಿದ ಪೊಲೀಸರೇ ಈಗ ಶಾಕ್ ಆಗಿದ್ದಾರೆ. ಎರಡು ಕುಟುಂಬಗಳ ದ್ವೇಷಕ್ಕೆ ಈಗಾಗಲೇ ಐವರ ಪ್ರಾಣಪಕ್ಷಿ ಹಾರಿ ಹೋಗಿದೆ. ರೌಡಿ ಶೀಟರ್ ಶಿವಶಂಕರ್ ರೆಡ್ಡಿ 2008ರಲ್ಲೇ ಸಣ್ಣ ಪುಟ್ಟ ಕ್ರಿಮಿನಲ್ ಕೇಸ್‌ನಲ್ಲಿ ಭಾಗಿಯಾಗಿದ್ದ. 2011ರಲ್ಲಿ ಶಿವಶಂಕರ್ ರೆಡ್ಡಿ ತಂದೆ ಜಯಚಂದ್ರ ರೆಡ್ಡಿ ಸೇರಿ ಬೈಯ್ಯರೆಡ್ಡಿ ಎಂಬಾತನನ್ನು ಕೊಲೆ ಮಾಡಿದ್ದ, ಆಗ ಶಿವಶಂಕರ್‌ಗೆ ಕೇವಲ 17 ವರ್ಷ ವಯಸ್ಸು.
ಶಿವಶಂಕರ್ ರೆಡ್ಡಿ ಕುಟುಂಬದ ಮೇಲೆ ದ್ವೇಷ ಬೆಳಸಿಕೊಂಡ ಬೈಯ್ಯರೆಡ್ಡಿ ಕುಟುಂಬಸ್ಥರು, ಹತ್ಯೆಗೆ ಹತ್ಯೆ ಎಂಬ ಸಿದ್ಧಾಂತವನ್ನು ಹೊಂದಿದ್ದು, ಆ ಮೂಲಕ ದ್ವೇಷ ತೀರಿಸಿಕೊಳ್ಳಲು ಮುಂದಾಗಿದ್ದರು. ಬೈಯ್ಯರೆಡ್ಡಿ ಭಾವ ನರಸಿಂಹ ರೆಡ್ಡಿ ಎಂಬಾತ ಶಿವಶಂಕರ್ ರೆಡ್ಡಿ ತಂದೆ ಜಯಚಂದ್ರರೆಡ್ಡಿಯನ್ನು ಕೊಚ್ಚಿ ಕೊಲೆ ಮಾಡಿದ್ದ. ತಂದೆ ಸಾವಿನಿಂದ ಕೆರಳಿ ಕೆಂಡವಾದ ಶಿವಶಂಕರ್ ಪ್ಲ್ಯಾನ್ ಮಾಡಿ ನರಸಿಂಹ ರೆಡ್ಡಿಯನ್ನು ಕೊಲೆ ಮಾಡಿದ್ದ. ಇದಾದ ಬಳಿಕವೂ ಈ ಎರಡು ಕುಟುಂಬಗಳ ನಡುವೆ ದ್ವೇಷ ಮುಂದುವರಿದಿತ್ತು.
ಮದುವೆಗೆ ಪೀಡುತ್ತಿದ್ದ ಎಂದು ಹತ್ಯೆ ಮಾಡಿದ್ದ ಶಿವಶಂಕರ್
ಶಿವಶಂಕರ್ ರೆಡ್ಡಿಗೆ ಮೂವರು ಅಕ್ಕ -ತಂಗಿಯರಿದ್ದಾರೆ. ಜಗದೀಶ್ವರ್ ರೆಡ್ಡಿ ಎಂಬಾತ ಶಿವಶಂಕರ್ ರೆಡ್ಡಿಗೆ ತಂಗಿಯನ್ನು ತನಗೆ ಮದುವೆ ಮಾಡಿಕೊಡುವಂತೆ ಪೀಡಿಸುದ್ದನಂತೆ. ಮದುವೆ ಮಾಡಿಸುವೆ ಬಾ ಎಂದು ಆತನನ್ನು ಶಿವಶಂಕರ್ ರೆಡ್ಡಿ ಹತ್ಯೆಗೈದಿದ್ದ. ಜಗದೀಶ್ವರ್ ರೆಡ್ಡಿ ಹತ್ಯೆಗೆ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಹೇಳುತ್ತಿದ್ದ ದಾನೇಶ್ವರ್ ರೆಡ್ಡಿ ಎಂಬಾತನನ್ನು ಬರ್ಬರವಾಗಿ ಹತ್ಯೆ ಮಾಡಿದ್ದ.
ಜೈಲಿಗೂ ಹೋಗಿ ಬಂದ ಶಿವಶಂಕರ್‌ಗೆ ಜ್ಞಾನೋದಯವಾಗಿ ಉತ್ತಮ ಜೀವನ ನಡೆಸುವ ಉದ್ದೇಶದಿಂದಲೇ ಬೆಂಗಳೂರಿಗೆ ಬಂದು ರಿಯಲ್ ಎಸ್ಟೇಟ್‌ನಲ್ಲಿ ತೊಡಗಿದ್ದ. ಈ ಸಂದರ್ಭದಲ್ಲಿ ಈತನ ಮೇಲೆ ಅಟ್ಯಾಕ್ ಮಾಡಿ ಬರೋಬ್ಬರಿ 5 ಕಡೆ ಗುಂಡು ಹಾರಿಸಿದ್ದರೂ, ಪ್ರಾಣಾಪಾಯದಿಂದ ಶಿವಶಂಕರ್ ಬದುಕಿ ಉಳಿದಿದ್ದಾನೆ.
ಈ ಸಂಬಂಧ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಎರಡು ಮೋಟಾರ್ ಬೈಕ್‌ನಲ್ಲಿ ಬಂದಿದ್ದ ಆರೋಪಿಗಳಿಂದ ಕೃತ್ಯ ನಡೆದಿದೆ. ಗುಂಡೇಟು ತಿಂದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಗಳೂರು ಶೂಟ್‌ಔಟ್ ಪ್ರಕರಣ ಸಂಬಂಧ ವಿಶೇಷ ತಂಡ ರಚನೆ ಮಾಡಲಾಗಿತ್ತು. ಆರೋಪಿಗಳನ್ನು 24 ಗಂಟೆ ಕಳೆಯುವಷ್ಟರಲ್ಲಿ ಬಂಧಿಸಲಾಗಿದೆ. ಮದನಪಲ್ಲಿಯ ನಾಲ್ಕು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಪೆದ್ದಪಲ್ಲಿ ಶಿವಶಂಕರ್ ರೆಡ್ಡಿಯನ್ನು ರಿವೇಂಜ್‌ಗಾಗಿ ಕೊಲೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Bilkis Bano | ಅತ್ಯಾಚಾರಿಗಳ ಬಿಡುಗಡೆ, ಡಿ.13ರಂದು ಬಿಲ್ಕಿಸ್ ಬಾನೊ ಅರ್ಜಿ ವಿಚಾರಣೆ ನಡೆಸಲಿರುವ ಸುಪ್ರೀಂ