ಬೆಂಗಳೂರು: ಒಂಟಿ ಮನೆಯಂಬ ಕಾರಣಕ್ಕೆ ಎಲ್ಲರೂ ನಿದ್ರೆಗೆ ಜಾರಿದಾಗ ಮೆಲ್ಲಗೆ ಕಾಂಪೌಂಡ್ ಹಾರಿ ಬಂದ ಕಳ್ಳನೊಬ್ಬ ತನ್ನ ಯೋಜನೆಯಂತೆ ಮನೆಗೆ ನುಗ್ಗಲು ಹೋಗಿದ್ದಾನೆ. ಆದರೆ, ನಾಯಿಗಳು ಬೊಗಳುವ ಸದ್ದಿಗೆ ಎಚ್ಚರಗೊಂಡ ಮನೆ ಮಾಲೀಕ ಹೊರಗೆ ಬಂದಿದ್ದಾರೆ. ಆಗ ಕಳ್ಳ ಕಂಡಿದ್ದು, ತಪ್ಪಿಸಿಕೊಳ್ಳಲು ಯತ್ನಿಸಿದಾಗ ಕಾಲಿಗೆ ಗುಂಡೇಟು (Shootout In Bangalore) ಹೊಡೆದಿದ್ದಾರೆ.
ಬೆಂಗಳೂರಿನ ರಾಚೇನಹಳ್ಳಿಯಲ್ಲಿ ಮಧ್ಯರಾತ್ರಿ ಕಳ್ಳತನ ಮಾಡಲು ಬಂದಿದ್ದವನ ಮೇಲೆ ಮನೆ ಮಾಲೀಕ ಗುಂಡು ಹಾರಿಸಿದ್ದಾರೆ. ಮನೆ ಮಾಲೀಕ ವೆಂಕಟೇಶ್ ಎಂಬುವವರು ಬಾಗಲಕೋಟೆ ಮೂಲದ ಲಕ್ಷ್ಮಣ್ ಎಂಬಾತನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಕಳ್ಳತನಕ್ಕೆ ಲಕ್ಷ್ಮಣ್ ಮನೆಗೆ ನುಗ್ಗಿದ್ದ, ಆ ವೇಳೆ ಏನೋ ಸದ್ದಾಗಿದ್ದನ್ನು ಕೇಳಿ ಮನೆ ಮಾಲೀಕ ವೆಂಕಟೇಶ್ ಎದ್ದು ಬಂದಿದ್ದಾರೆ. ಅರ್ಧಂಬರ್ಧ ನಿದ್ದೆ ಮಾಂಪರಿನಲ್ಲಿದ್ದ ವೆಂಕಟೇಶ್‌ಗೆ ಯಾರೋ ಕಳ್ಳತನಕ್ಕೆ ಬಂದಿರುವುದು ಕಂಡು ಬಂದಿದೆ.
ಕೂಡಲೇ ರೂಮಿನೊಳಗೆ ಹೋಗಿ ಬಂದೂಕು ತಂದವರೇ ಗುಂಡು ಹಾರಿಸಿದ್ದು, ಲಕ್ಷ್ಮಣನ ಕಾಲಿಗೆ ಗಾಯವಾಗಿದೆ. ಬಳಿಕ ಆತನನ್ನು ತಮ್ಮ ಸುಪರ್ದಿಯಲ್ಲಿಟ್ಟುಕೊಂಡಿದ್ದರು. ತರುವಾಯ ಪೊಲೀಸರಿಗೆ ವಿಷಯ ಮುಟ್ಟಿಸಿದ್ದು, ಅವರು ಸ್ಥಳಕ್ಕೆ ಸಂಪಿಗೆಹಳ್ಳಿ ಪೊಲೀಸರು ಬಂದು ಗಾಯಗೊಂಡಿರುವ ಲಕ್ಷ್ಮಣನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಇದೇ ವೇಳೆ ವೆಂಕಟೇಶ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಒಂಟಿ ಮನೆಯಲ್ಲಿ ಯಾರೂ ಇಲ್ಲವೆಂದು ಬಂದಿದ್ದ
ಈ ಸಂಬಂಧ ಡಿಸಿಪಿ ಅನೂಪ್ ಶೆಟ್ಟಿ ಪ್ರತಿಕ್ರಿಯಿಸಿದ್ದು, ಮಧ್ಯರಾತ್ರಿ ಎರಡೂವರೆ ಸುಮಾರಿಗೆ ಕಳ್ಳ ಮನೆಯ ಕಾಂಪೌಂಡ್ ಹಾರುತ್ತಿದ್ದಂತೆ ಶ್ವಾನಗಳು ಜೋರಾಗಿ ಬೊಗಳಲು ಶುರು ಮಾಡಿವೆ. ಕಳ್ಳತನಕ್ಕೆ ಬಂದಿರಬಹುದೆಂದು ಅಂದಾಜಿಸಿ ಮನೆ ಮಾಲೀಕ ವೆಂಕಟೇಶ್, ಲೈಸೆನ್ಸ್ ಹೊಂದಿದ್ದ ಡಬ್ಬಲ್ ಬ್ಯಾರಲ್ ಗನ್ ತೆಗೆದುಕೊಂಡು ಹೊರ ಬಂದಿದ್ದಾರೆ. ಎಸ್ಕೇಪ್ ಆಗಲು ಯತ್ನಿಸಿದ ವೇಳೆ ಕಳ್ಳನ ಬಲಗಾಲಿಗೆ ಗುಂಡು ಹಾರಿಸಿದ್ದಾರೆ ಎಂದು ಹೇಳಿದ್ದಾರೆ.
ಮನೆಯಲ್ಲಿ ವೆಂಕಟೇಶ್ ಮತ್ತವರ ಪತ್ನಿ ಹಾಗೂ ಇಬ್ಬರು ಮಕ್ಕಳು ವಾಸವಿದ್ದರು. ರೈಲು ಹಳಿ ಪಕ್ಕದಲ್ಲಿಯೆ ಮನೆ ಇದ್ದು, ಒಂಟಿ ಮನೆ ರೀತಿಯಲ್ಲಿ ಕಾಣುತ್ತಿತ್ತು. ಮನೆಯಲ್ಲಿ ಯಾರೂ ಇರುವುದಿಲ್ಲ ಎಂದು ಕಳ್ಳತನ ಮಾಡಲು ಹೋಗಿರುವುದಾಗಿ ಲಕ್ಷ್ಮಣ ಪೊಲೀಸರಿಗೆ ತಿಳಿಸಿದ್ದಾನೆ. ಒಂಟಿ ಮನೆ ಎಂಬ ಕಾರಣಕ್ಕಾಗಿಯೇ ತಾವು ಲೈಸೆನ್ಸ್ ಪಡೆದು ಡಬಲ್ ಬ್ಯಾರಲ್ ಗನ್ ಇಟ್ಟುಕೊಂಡಿದ್ದಾಗಿ ವೆಂಕಟೇಶ್ ಹೇಳಿದ್ದಾರೆ. ಗುಂಡೇಟು ತಿಂದಿರುವ ಲಕ್ಷ್ಮಣ್‌ನಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | Sabarimala yatre | ಮೈಸೂರಿನಿಂದ ತೆರಳಿದ ಅಯ್ಯಪ್ಪ ಭಕ್ತರ ಮೇಲೆ ಹಲ್ಲೆ: ತಪ್ಪಿಲ್ಲದಿದ್ದರೂ ಹೊಡೆದು ಕೊನೆಗೆ ಕ್ಷಮೆ ಯಾಚನೆ